ಸಿರುಗಪ್ಪ: ತಾಲೂಕಿನ ಉತ್ತನೂರು ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಉದ್ಘಾಟನೆಯಾಗಿ ಮೂರು ವರ್ಷ ಕಳೆದರೂ ಉತ್ತನೂರು ಗ್ರಾಮಕ್ಕೆ ಈ ಕೆರೆಯಿಂದ ಕುಡಿಯುವ ನೀರು ಮಾತ್ರ ಪೂರೈಕೆಯಾಗಿಲ್ಲ.
ಉತ್ತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಉತ್ತನೂರು, ಮಾಟಸೂಗೂರು, ಕೂರಿಗನೂರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರೊದಗಿಸುವ ಉದ್ದೇಶದಿಂದ 4 ಕೋಟಿ, 87ಲಕ್ಷ ರೂಗಳ ವೆಚ್ಚದಲ್ಲಿ ಉತ್ತನೂರು ಗ್ರಾಮದ ಸಮೀಪವಿರುವ 8ಎಕರೆ ಜಮೀನಿನಲ್ಲಿ 3.80 ಮತ್ತು 2.20 ಎಕರೆಯಲ್ಲಿ 2 ಕೆರೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಯೋಜನೆ ಉದ್ಘಾಟನೆಯಾಗಿ ಮೂರು ವರ್ಷ ಕಳೆದಿದ್ದರೂ ಉತ್ತನೂರು ಗ್ರಾಮಕ್ಕೆ ಒಂದು ದಿನವೂ ಕೆರೆ ನೀರನ್ನು ಪೂರೈಕೆ ಮಾಡಿಲ್ಲ. ಆದರೆ ಮಾಟಸೂಗೂರು, ಕೂರಿಗನೂರು ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ.
ವೇದಾವತಿ ಹಗರಿ ನದಿಯ ದಂಡೆಯಲ್ಲಿರುವ ಉತ್ತನೂರು, ಮಾಟಸೂಗೂರು, ಕೂರಿಗನೂರು ಗ್ರಾಮಗಳು ನದಿಯ ನೀರನ್ನೇ ಅವಲಂಬಿಸಿದ್ದವು. ಆದರೆ ಕಳೆದ ಕೆಲವು ವರ್ಷಗಳಿಂದ ಬೇಸಿಗೆ ಸಮಯದಲ್ಲಿ ನದಿ ಸಂಪೂರ್ಣವಾಗಿ ಬತ್ತಿ ಹೋಗುತ್ತಿದ್ದರಿಂದ ನದಿಯಲ್ಲಿ ಸಿಗುವ ಒರತೆ ನೀರನ್ನು ಇಲ್ಲಿನ ಜನ ಬಳಕೆ ಮಾಡುತ್ತಿದ್ದರು. ಈ ನೀರು ಒಮ್ಮೊಮ್ಮೆ ವಿಷಪೂರಿತವಾಗಿ ಕುಡಿಯಲು ಯೋಗ್ಯವಿಲ್ಲದಂತಾಗುತ್ತಿದ್ದು, ಗ್ರಾಮಗಳಲ್ಲಿರುವ ಬೋರ್‌ವೆಲ್ ನೀರು ಅಥವಾ 5 ಕಿಮೀ. ದೂರದಲ್ಲಿರುವ ಕರೂರ್‌ನಿಂದ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಕುಡಿಯುವ ನೀರನ್ನು ತೆಗೆದುಕೊಂಡು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೋರ್‌ವೆಲ್ ನೀರಿನಲ್ಲಿ ಫೊÉàರೈಡ್ ಅಂಶ ಹೆಚ್ಚಾಗಿರುವುದರಿಂದ ಬೋರ್‌ವೆಲ್ ನೀರು ಕುಡಿದರೆ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ ಎನ್ನುವ ಕಾರಣದಿಂದ ನಮ್ಮ ಗ್ರಾಮಗಳಿಗೆ ಕುಡಿಯುವ ನೀರಿನ ಕೆರೆ ನಿರ್ಮಾಣ ಮಾಡಬೇಕೆಂದು ಹಲವು ವರ್ಷಗಳಿಂದ ಒತ್ತಾಯಿಸಿದ ನಂತರ ಕೆರೆ ನಿರ್ಮಾಣಮಾಡಿ ಮೂರು ವರ್ಷಗಳಾದರೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲವೆಂಬುದು ಗ್ರಾಮಸ್ಥರ ಆರೋಪವಾಗಿದೆ.
ಕೆರೆಯಿಂದ ಇಲ್ಲಿಯವರೆಗೆ ನಮ್ಮ ಗ್ರಾಮಕ್ಕೆ ನೀರು ಪೂರೈಕೆಯಾಗಿಲ್ಲ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿ ಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಇಂದಿಗೂ ನಮ್ಮ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನೇ ಕುಡಿಯುತ್ತಿದ್ದೇವೆ. ಕೆರೆ ಉದ್ಘಾಟನೆಯಾಗಿ ಮೂರು ವರ್ಷ ಕಳೆದರೂ ಉತ್ತನೂರು ಗ್ರಾಮಕ್ಕೆ ನೀರು ಪೂರೈಕೆಯಾಗಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಒಟ್ಟಾರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಗ್ರಾಮದ ಜನರಿಗೆ ಕೆರೆ ನೀರು ದೊರೆಯುತ್ತಿಲ್ಲ. ಕೆರೆಯ ನೀರನ್ನು ಗ್ರಾಮಸ್ಥರಿಗೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಪೈಪ್‌ಲೈನ್ ಅಳವಡಿಸುವ ಕಾರ್ಯ ಮಾಡುತ್ತಿದ್ದೇವೆ. ಶೀಘ್ರವಾಗಿ ಗ್ರಾಮಸ್ಥರಿಗೆ ಕೆರೆ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುವುದೆಂದು ಪಿ.ಡಿ.ಒ. ರಾಜಕುಮಾರ್ ನಾಯ್ಕ ತಿಳಿಸಿದ್ದಾರೆ.