ನಟಿ ಕಮ್ ನಿರ್ಮಾಪಕಿ ಪೂಜಾ ಗಾಂಧಿ, ಒಮ್ಮೆಲೆ ಹತ್ತು ಸಿನಿಮಾಗಳನ್ನು ನಿರ್ಮಿಸುವುದಾಗಿ ಅನೌನ್ಸ್ ಮಾಡಿದ್ದು ಗೊತ್ತೇ ಇದೆ. ಆ ಪೈಕಿ ಜೆಡಿ ಚಕ್ರವರ್ತಿ ನಿರ್ದೇಶನದಲ್ಲಿ ಮೂರು ಚಿತ್ರಗಳು ಒಂದೇ ವೇದಿಕೆಯಲ್ಲಿ ಶುರುವಾಗಿ, ಆ ಪೈಕಿ “ಉತಾಹಿ’ ಎಂಬ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿತ್ತು.
ಆದರೆ, ಪೂಜಾ ಗಾಂಧಿ ಅನೌನ್ಸ್ ಮಾಡಿ ಶುರುವಾದ ಚಿತ್ರ ಅರ್ಧಕ್ಕೆ ನಿಂತಿದೆ, ಜೆಡಿ ಚಕ್ರವರ್ತಿ ಅವರು ಬೇಸರ ಮಾಡಿಕೊಂಡು ಹೊರಟು ಹೋಗಿದ್ದಾರೆ ಅಂತ ಗಾಂಧಿನಗರದಲ್ಲೊಂದು ಸುದ್ದಿ ಓಡಾಡಿದ್ದು ಸುಳ್ಳಲ್ಲ. ಅದು ನಿಜವೋ, ಸುಳ್ಳೋ ಎಂಬುದನ್ನು ಕೇಳಲು ಸ್ವತಃ ಪೂಜಾಗಾಂಧಿ ಅವರಿಗೆ ಫೋನಾಯಿಸಿದಾಗ, ಅವರು
“ಉದಯವಾಣಿ’ಗೆ ಹೇಳಿದ್ದಿಷ್ಟು.
“ನೂರು ಜನ ನೂರು ಮಾತಾಡ್ತಾರೆ. ಯಾರು ಹೇಳಿದ್ದು, ಪ್ರಾಜೆಕ್ಟ್ ನಿಂತಿದೆ ಅಂತ? ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ. ಜೆಡಿ ಚಕ್ರವರ್ತಿ ಅವರಿಗೆ ಬೇಸರವೂ ಆಗಿಲ್ಲ, ಚಿತ್ರ ನಿಂತೂ ಹೋಗಿಲ್ಲ. ಸದ್ಯಕ್ಕೆ ಶೇ.50 ರಷ್ಟು ಚಿತ್ರೀಕರಣ ಆಗಿದೆ. ಇನ್ನೂ ಒಂದಷ್ಟು ಚಿತ್ರೀಕರಣ ಬಾಕಿ ಇದೆ. ಒಂದು ಹಂತದ ಶೂಟಿಂಗ್ ಮುಗಿಸಿ, ಈಗ ಬ್ರೇಕ್ ಕೊಟ್ಟಿದ್ದೇವೆ. ಕಾರಣ, ನಾಲ್ಕೈದು ದಿನ ರಜೆ ಇದ್ದುದರಿಂದ, ಶೂಟಿಂಗ್ ನಿಲ್ಲಿಸಿ, ನಂತರ ಮಾಡುತ್ತೇವೆ.
ಈ ಅಕ್ಟೋಬರ್ 7ರಂದು ನನ್ನ ಹುಟ್ಟುಹಬ್ಬ ಇದೆ. ಅದನ್ನು ಮುಗಿಸಿಕೊಂಡು, ಅಕ್ಟೋಬರ್ 12ರಿಂದ ಪುನಃ “ಉತಾಹಿ’ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಇದು ಕನ್ನಡ, ತಮಿಳು, ತೆಲುಗು, ಮರಾಠಿ ಹಾಗೂ ಹಿಂದಿ ಭಾಷೆಯಲ್ಲಿ ತಯಾರಾಗುತ್ತಿರುವುದರಿಂದ ಸ್ವಲ್ಪ ಟೈಮ್ ತೆಗೆದುಕೊಳ್ಳುತ್ತಿದ್ದೇವೆ. ಸಿನಿಮಾ ಅನ್ನುವುದು ಒಂದೇ ಸಲ ನಡೆಯೋದು. ಹಾಗಾಗಿ ಅವಸರದಲ್ಲಿ ಮಾಡುವಂಥದ್ದಲ್ಲ, ನಿಧಾನವಾದರೂ ಒಳ್ಳೇ ಪ್ರಾಜೆಕ್ಟ್ ಅನ್ನು ಹೊರತರುವ ಬಗ್ಗೆ ಯೋಚಿಸುತ್ತಿದ್ದೇನೆ.
ಯಾರೋ ಏನೋ ಅಂದರು ಅಂತ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಸಿನಿಮಾ ನಿಂತಿಲ್ಲ, ನಿರ್ದೇಶಕರು ಬೇಜಾರೂ ಆಗಿಲ್ಲ. ಎಲ್ಲವೂ ಅದರ ಪಾಡಿಗೆ ನಡೆಯುತ್ತಿದೆ. ಇನ್ನು, “ಬ್ಲ್ಯಾಕ್ ವರ್ಸಸ್ ವೈಟ್’ ಚಿತ್ರದ ಬಗ್ಗೆಯೂ ಪ್ಲಾನಿಂಗ್ ನಡೆಯುತ್ತಿದೆ’ ಎಂದು ಸ್ಪಷ್ಟಪಡಿಸುತ್ತಾರೆ ಪೂಜಾ ಗಾಂಧಿ.