Advertisement
ನಗರದ ಶಿವಕುಮಾರಸ್ವಾಮಿ ಭವನದ ಆವರಣದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಪೆಟ್ರೋಲ್ 100 ರೂ.ಗೆ ಏರಿದೆ. ಡೀಸೆಲ್ 85 ಆಗಿದೆ. ಬಂಗಾರ 40 ಸಾವಿರ ರೂ. ಏರಿದೆ. ಬಡವರು ಕನಿಷ್ಟ 3 ಪವನ್ ಚಿನ್ನ ಹಾಕಿ ಕಷ್ಟ ಪಟ್ಟು ಮದುವೆ ಮಾಡುತ್ತಿದ್ದರು. ಈಗಿನ ಪರಿಸ್ಥಿತಿಯಲ್ಲಿ 1 ಪವನ್‌ಗಿಂತ ಜಾಸ್ತಿ ಕೊಳ್ಳಲು ಸಾಧ್ಯವಾಗುತ್ತಿಲ್ಲ. ಸ್ವಾಭಿಮಾನದಿಂದ ಮದುವೆ ಮಾಡಲು ಸಾಧ್ಯವಾಗುತ್ತಿಲ್ಲ. ದುಡಿಯುವ ವರ್ಗ ಹೋಟೆಲ್‌ನಲ್ಲಿ 30 ರೂ.ಗೆ ಊಟ ಮಾಡುತ್ತಿದ್ದವರು 50 ರೂ. ಕೊಡಬೇಕಾಗಿದೆ. ವೇತನ ಕೂಡ ಜಾಸ್ತಿಯಾಗುತ್ತಿಲ್ಲ ಎಂದು ಅವರು ಟೀಕಿಸಿದರು.
Related Articles
Advertisement
ಜನಸಾಮಾನ್ಯರು ನೆಮ್ಮದಿ ಮತ್ತು ಸ್ವಾಭಿಮಾನದಿಂದ ಬದುಕಬೇಕಾದರೆ ಅದು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ. ಇಂದು ಈ ಸಮಾವೇಶ, ಚಾಮರಾಜನಗರದಿಂದ ಆರಂಭವಾಗಿ, ಇಡೀ ರಾಜ್ಯಕ್ಕೆ ಸ್ಫೂರ್ತಿಯಾಗಲಿ. ಎಲ್ಲರೂ ಶ್ರಮಿಸಿದರೆ ಕಾಂಗ್ರೆಸ್ ಅನ್ನು ಸೋಲಿಸಲು ಸಾಧ್ಯವಿಲ್ಲ. ಸಮಾಜವನ್ನು ಒಡೆಯುವ ಬಿಜೆಪಿಯ ಹುನ್ನಾರಕ್ಕೆ ಅವಕಾಶ ನೀಡಬಾರದು. ಯಾರೂ ಕೋಮುವಾದಿಯಾಗಲು ಅವಕಾಶ ನೀಡಬಾರದು. ಅಲ್ಪಸಂಖ್ಯಾತರು ಕೋಮುವಾದಿಯಾದರೆ ಅಲ್ಪಸಂಖ್ಯಾತ ಸಮುದಾಯಕ್ಕೆ ನಷ್ಟವಾಗುತ್ತದೆ. ಅದು ದೇಶಕ್ಕಾಗುವ ನಷ್ಟ. ದೇಶಕ್ಕೆ ಜಾತ್ಯತೀತ ತತ್ವ ಅಗತ್ಯ ಎಂದರು.
ಧ್ರುವನಾರಾಯಣ ಅವರು, ವಿಧಾನಸಭೆಯಲ್ಲಿ ನನಗೆ ಅನೇಕ ವಿಷಯಗಳನ್ನು ಕಲಿಸಿದ್ದಾರೆ. ಸಮರ್ಥವಾಗಿ ಕಲಾಪದಲ್ಲಿ ಮಾತನಾಡಲು ಧ್ರುವನಾರಾಯಣ ಅವರು ನೀಡಿದ ಮಾರ್ಗದರ್ಶನ ಕಾರಣ. ಈಗ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಧ್ರುವನಾರಾಯಣ ನೇಮಕವಾಗಿದ್ದಾರೆ. ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಲು ಧ್ರುವನಾರಾಯಣ ಅವರಿಗೆ ಹೆಗಲು ನೀಡಿ ಶ್ರಮಿಸಬೇಕು. ತಳಮಟ್ಟದಿಂದ ಬಿಜೆಪಿಯ ಜನವಿರೋಧಿ ನೀತಿಯನ್ನು ತಿಳಿಸಬೇಕು. ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ಹೋಗಬೇಕು. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸಬೇಕು. ಜನರು ನೆಮ್ಮದಿಯ, ಸ್ವಾಭಿಮಾನದ ಜೀವನ ನಡೆಸಲು ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕು ಎಂದು ಯು.ಟಿ. ಖಾದರ್ ಹೇಳಿದರು.
ಇದನ್ನೂ ಓದಿ:ಮೈಸೂರು ಮೇಯರ್ ಹುದ್ದೆ ನಮ್ಮ ಪಕ್ಷದೊಳಗಾದ ಗೊಂದಲದಿಂದ ತಪ್ಪಿ ಹೋಗಿದೆ ; ಆರ್.ಧ್ರುವನಾರಾಯಣ್
ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಪಕ್ಷಕ್ಕಾಗಿ ಯಾರು ನಿರಂತರವಾಗಿ ಶ್ರಮಿಸುತ್ತಾರೋ ಅವರನ್ನು ಪಕ್ಷ ಗುರುತಿಸುತ್ತದೆ ಎಂಬುದಕ್ಕೆ ಧ್ರುವನಾರಾಯಣ ಅವರೇ ನಿದರ್ಶನ. ಅವರು ಸಂಸದರಾಗಿದ್ದಾಗ ಪ್ರತಿ ದಿನವೂ ಜನರ ಜೊತೆ ಇದ್ದರು. ಲೋಕಸಭೆಯಲ್ಲಿ ಸೋತಿದ್ದರೂ ಜನರೊಡನೆ ಇದ್ದಾರೆ.
ಧ್ರುವನಾರಾಯಣ ಅವರಿಗೆ ಒಳ್ಳೆಯ ಹುದ್ದೆಯನ್ನು ನೀಡಿದೆ. ಜಿಲ್ಲೆಯಲ್ಲಿ ಮುಂದಿನ ಜಿ.ಪಂ., ತಾ.ಪಂ., ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಲಿ ಎಂದು ಆಶಿಸಿದರು.
ಹನೂರು ಶಾಸಕ ಆರ್. ನರೇಂದ್ರ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ದುರಾಡಳಿತ ನಡೆಯುತ್ತಿದೆ. ಪ್ರದಾನಿ ನರೇಂದ್ರ ಮೋದಿಯವರಿಗೆ ಎಣ್ಣೆ ಕಂಡರೆ ಆಗುವುದಿಲ್ಲ ಎಂದು ಕಾಣುತ್ತದೆ. ಗ್ಯಾಸ್, ಪೆಟ್ರೊಲ್, ಡೀಸೆಲ್,ಅಡುಗೆ ಎಣ್ಣೆ ಬೆಲೆಗಳು ಹೆಚ್ಚುತ್ತಿವೆ. ಮನಮೋಹನ್‌ಸಿಂಗ್ ಸರ್ಕಾರದಲ್ಲಿ 400 ರೂ. ಇದ್ದ ಸಿಲಿಂಡರ್ ಬೆಲೆ 800 ರೂ. ದಾಟಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಸಂಘಟನೆ, ಹೋರಾಟ ಮಾಡಬೇಕು. ಆ ಸಂಘಟನೆಗೆ ಅನುಕೂಲವಾಗಲು ಧ್ರುವನಾರಾಯಣ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಿರುವುದು ಸ್ವಾಗತಾರ್ಹ ಎಂದರು.
ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಧ್ರುವನಾರಾಯಣ ಅವರು ಶಾಸಕರಾಗಿ, ಸಂಸದರಾಗಿ ಉತ್ತಮ ಕೆಲಸ ಮಾಡಿದ್ದರು. ಅದನ್ನು ಗುರುತಿಸಿ ಸೋನಿಯಾ ಗಾಂಧಿಯವರು ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಅವರಿಗೆ ಜವಾಬ್ದಾರಿ ಹೆಚ್ಚಾಗಿದೆ. ಐವರು ಕಾರ್ಯಾಧ್ಯಕ್ಷರು ಜೊತೆಗೂಡಿ, ಭಾಗ್ಯಗಳನ್ನು ಕೊಟ್ಟ ಸಿದ್ದರಾಮಯ್ಯನವರ ಕಾರ್ಯಕ್ರಮವನ್ನು ಮುಂದಿಟ್ಟುಕೊಂಡು ಪಕ್ಷದ ಸಂಘಟನೆಗೆ ಮುಂದಾಗಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಅನಿಲ್ ಚಿಕ್ಕಮಾದು, ಧರ್ಮಸೇನ, ಮಾಜಿ ಸಂಸದ ಎಂ. ಶಿವಣ್ಣ, ಎ. ಸಿದ್ಧರಾಜು, ಮಾಜಿ ಎಸ್. ಜಯಣ್ಣ, ಎ.ಆರ್.ಕೃಷ್ಣಮೂರ್ತಿ, ಕಳಲೆ ಕೇಶವಮೂರ್ತಿ, ಎಸ್. ಬಾಲರಾಜು, ಎಚ್.ಎಂ. ಗಣೇಶ್‌ಪ್ರಸಾದ್, ಜಿ.ಪಂ. ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷೆ ಶಶಿಕಲಾ, ಜಿಲ್ಲಾಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಬ್ಲಾಕ್ ಅಧ್ಯಕ್ಷರು, ಮತ್ತಿತರರು ಉಪಸ್ಥಿತರಿದ್ದರು.