ಮಂಗಳೂರು: ರಾಜ್ಯದ ಜನತೆ ಪ್ರೀತಿ, ಸಹೋದರತೆ ಹಾಗೂ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ. ಈ ಮೂಲಕ ಜನವಿರೋಧಿ ಹಾಗೂ ತಾರತಮ್ಯದ ಬಿಜೆಪಿ ಸರಕಾರವನ್ನು ಕೆಳಗಿಳಿಸುವುದು ಕಾಂಗ್ರೆಸ್ ಸಂಕಲ್ಪ ಎಂದು ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಯು.ಟಿ. ಖಾದರ್ ಅವರು ಹೇಳಿದರು.
ಮಂಗಳೂರು ವಿ.ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಗೂ ಮುನ್ನ ಉಳ್ಳಾಲಬೈಲ್ ಮೈದಾನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಂಗಳೂರು ಕ್ಷೇತ್ರಕ್ಕೆ ತುಂಬೆಯಿಂದ ಕುಡಿಯುವ ನೀರಿನ ಯೋಜನೆ ತಂದು ಪ್ರಥಮ ಹಂತದ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ ಬಳಿಕ ನಾನು ಕಾಂಗ್ರೆಸ್ ಶಾಸಕ ಎಂಬ ಕಾರಣದಿಂದ ಎರಡನೇ ಹಂತ ಬಿಡುಗಡೆಗೆ ಬಿಜೆಪಿಯು ತಡೆ ನೀಡಿದೆ. ಮುಂದೆ ಕಾಂಗ್ರೆಸ್ ಸರಕಾರ ಬಂದು 6 ತಿಂಗಳೊಳಗೆ ಹಣ ಬಿಡುಗಡೆ ಮಾಡಿ ನೀರಿನ ಯೋಜನೆ ಅನುಷ್ಠಾನ ಮಾಡಲಾಗುವುದು. ಈ ಮೂಲಕ ನಗರ ಪ್ರದೇಶದಂತೆ ಗ್ರಾಮಾಂತರದಲ್ಲಿಯೂ 24 ಗಂಟೆ ಕುಡಿಯುವ ನೀರು ಒದಗಿಸಲಾಗುವುದು ಎಂದರು.
“ಎಸ್‌ಡಿಪಿಐಯಿಂದ ಬಿಜೆಪಿಗೆ ಜೀವ’
“ಬಿಜೆಪಿಯ ಆಯುಸ್ಸು ಕೇವಲ 22 ದಿನ ಮಾತ್ರ ಇದೆ. ಬಳಿಕ ಬಿಜೆಪಿ ಬದುಕಲು ಸಾಧ್ಯವಿಲ್ಲ. ಐಸಿಯುನಲ್ಲಿ ಬಿಜೆಪಿ ಇದೆ. ಇದನ್ನು ಬದುಕಿಸುವ ಕಾರ್ಯವನ್ನು ಎಸ್‌ಡಿಪಿಐ ನಡೆಸುತ್ತಿದೆ. ಬಿಜೆಪಿಯನ್ನು ಬದುಕಿಸಿ ಮತ್ತೆ ಸಮಸ್ಯೆ ಸೃಷ್ಟಿ ಮಾಡುವ ಕೆಲಸವನ್ನು ಎಸ್‌ಡಿಪಿಐ ಮಾಡುತ್ತಿದೆ. ಕಾಂಗ್ರೆಸ್ ಸೋಲಬೇಕು, ಬಿಜೆಪಿ ಗೆಲ್ಲಬೇಕು ಎಂಬ ಉದ್ದೇಶ ಎಸ್‌ಡಿಪಿಯದ್ದಾಗಿದೆ’ ಎಂದು ದೂರಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಮಾಜಿ ಸದಸ್ಯ ಐವನ್ ಡಿ’ಸೋಜಾ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪ್ರಮುಖರಾದ ಕಣಚೂರು ಮೋನು, ಇಬ್ರಾಹಿಂ ಕೋಡಿಜಾಲ್, ಈಶ್ವರ ಉಳ್ಳಾಲ, ಹರ್ಷರಾಜ್ ಮುದ್ಯ, ಸದಾಶಿವ ಉಳ್ಳಾಲ, ಪ್ರಶಾಂತ್ ಕಾಜವ, ದಿನೇಶ್ ಕುಂಪಲ, ಸುರೇಶ್ ಭಟ್ನಗರ, ರಾಕೇಶ್ ಮಲ್ಲಿ, ದೇವದಾಸ್ ಭಂಡಾರಿ, ಪದ್ಮನಾಭ ನರಿಂಗಾನ, ಮಮತಾ ಡಿ.ಎಸ್. ಗಟ್ಟಿ, ಮಹಮ್ಮದ್ ಮೋನು, ಚಂದ್ರಹಾಸ ಆರ್.ಕರ್ಕೇರ, ಅಭಿಷೇಕ್ ಉಳ್ಳಾಲ, ಫಾರೂಕ್ ಉಳ್ಳಾಲ, ಚಂದ್ರಿಕಾ ರೈ, ವೃಂದಾ ಪೂಜಾರಿ, ದೀಪಕ್ ಪಿಲಾರ್, ಪುರುಷೋತ್ತಮ ಪಿಲಾರು, ಆಲ್ವಿನ್ ಡಿ’ಸೋಜಾ, ಮುಸ್ತಾಫ ಅಬ್ದುಲ್ಲಾ, ದಿನೇಶ್ ರೈ, ನಾಸಿರ್ ನಡುಪದವು, ಚಿತ್ರಕಲಾ ಚಂದ್ರಕಾಂತ್, ಆಯೂಬ್ ಮಂಚಿಲ, ಮನ್ಸೂರು, ಮೋಹನ್ ಸಾಲಿಯಾನ್ ಇನ್ನಿತರರು ಉಪಸ್ಥಿತರಿದ್ದರು.
ಉಳ್ಳಾಲದಲ್ಲಿ ಮಿನಿ ಬಂದರು
ಉಳ್ಳಾಲ ಕೋಟೆಪುರದಿಂದ ಬೋಳಾರದ ವರೆಗೆ ನೂತನವಾದ ಸೇತುವೆ ನಿರ್ಮಾಣ ಮಾಡಲಾಗುವುದು. ಬೋಟುಗಳ ತಂಗುದಾಣಕ್ಕಾಗಿ ಉಳ್ಳಾಲದಲ್ಲಿ ಮಿನಿ ಬಂದರು ನಿರ್ಮಿಸಲಾಗುವುದು ಎಂದು ಖಾದರ್ ಹೇಳಿದರು.
ಬೃಹತ್ ಮೆರವಣಿಗೆ-ಕಾರ್ಯಕರ್ತರ ಸಂಭ್ರಮ
ಉಳ್ಳಾಲಬೈಲ್‌ನಿಂದ ಉಳ್ಳಾಲದವರೆಗೆ ಮೆರವಣಿಗೆಯಲ್ಲಿ ಸಾಗಿ ಖಾದರ್ ನಾಮಪತ್ರ ಸಲ್ಲಿಸಿದರು. ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಕ್ಷಿಯಾದರು. ಇದಕ್ಕೂ ಮುನ್ನ ಯು.ಟಿ. ಖಾದರ್ ಅವರು ವಿವಿಧ ದೈವ-ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ಭೇಟಿ ನೀಡಿ ಪ್ರಾರ್ಥಿಸಿದರು.