ಮಂಗಳೂರು: ಇನ್ಫೋಸಿಸ್‌ನ ಸುಧಾಮೂರ್ತಿ ಅವರ ಸರಳತೆ, ವೈಚಾರಿಕತೆ ಹಾಗೂ ಜೀವನ ಕ್ರಮ ಇತ್ಯಾದಿಗಳಿಂದ ಪ್ರೇರಿತರಾಗಿರುವ ಮಂಗಳೂರು ಶಾಸಕ ಯು.ಟಿ. ಖಾದರ್ ಅವರ ಏಕೈಕ ಪುತ್ರಿ ಹತ್ತನೇ ತರಗತಿಯ ಸರಕಾರಿ ಶಾಲಾ ವಿದ್ಯಾರ್ಥಿನಿ ಹವ್ವ ನಸೀಮಾ ಸುಧಾ ಅವರಿಗೆ ಹುಟ್ಟುಹಬ್ಬದ ಉಡುಗೊರೆ ನೀಡಿದ್ದಾರೆ.
ಹವ್ವ ಅವರು ಬುಧವಾರ ಬೆಳಗ್ಗೆ ಸುಧಾಮೂರ್ತಿ ಅವರ ಬೆಂಗಳೂ ರಿನ ನಿವಾಸಕ್ಕೆ ತಂದೆ ಯು.ಟಿ. ಖಾದರ್ ಜತೆಗೆ ತೆರಳಿದ್ದರು.
ಹವ್ವ ಹಾಗೂ ಸುಧಾಮೂರ್ತಿ ಜನ್ಮದಿನಕ್ಕೆ ಎರಡೇ ದಿನದ ವ್ಯತ್ಯಾಸ. ಸುಧಾಮೂರ್ತಿಯವರದ್ದು ಆ. 19. ಹವ್ವ ಅವರದ್ದು ಆ. 22. ಪ್ರತಿವರ್ಷ ತಂದೆ ಯು.ಟಿ. ಖಾದರ್ ಹವ್ವ ಬರ್ತ್‌ಡೇಗೆ ಏನು ಬೇಕೆಂದು ವಿಚಾರಿಸುತ್ತಿದ್ದರು. ಈ ಬಾರಿ ಸುಧಾಮೂರ್ತಿ ಅವರನ್ನು ಭೇಟಿ ಮಾಡುವುದಾಗಿ ಇಂಗಿತ ವ್ಯಕ್ತಪಡಿಸಿದ್ದಳು.
ಸ್ಮರಣಿಕೆಯಲ್ಲೇನಿದೆ?
“ನನ್ನ ಪ್ರೀತಿಯ ಸುಧಾಮೂರ್ತಿಯವರಿಗೆ, ಹೆಚ್ಚಿಸಿರುವಿರಿ ನೀವು ನಮ್ಮ ನಾಡಿನ ಕೀರ್ತಿ; ನೀಡುತಿರುವಿರಿ ನೀವು ಹಲವರಿಗೆ ಸ್ಫೂರ್ತಿ. ನಿಮ್ಮ ನಡೆ ನುಡಿ ಬರಹ ನಮಗೆ ದಾರಿದೀಪ; ಸದಾ ನಗುಮುಖ ನಿಮ್ಮದು ನಿಮಗಿಲ್ಲ ಕೋಪ. ನಿಮ್ಮನ್ನು ನೋಡುವ ಆಸೆ ಬಂದಿತ್ತು ನನಗೆ; ಇದೋ ಇಂದು ನಿಮ್ಮೆದುರು ನಮಸ್ಕಾರ ನಿಮಗೆ’ ಎಂದು ಬರೆದ ಸ್ಮರಣಿಕೆಯನ್ನು ಹವ್ವ ಹಸ್ತಾಂತರ ಮಾಡಿದ್ದಾರೆ.
ಸುಧಾಮೂರ್ತಿ ತಾವು ಬರೆದ “ತ್ರೀ ತೌಸೆಂಡ್ ಸ್ಟಿಚಸ್’, “ದಿ ಮ್ಯಾಜಿಕ್ ಆಫ್ ದಿ ಲೋಸ್ಟ್ ಟೆಂಪಲ್’, “ಮ್ಯಾಜಿಕ್ ಡ್ರಮ್’, “ಹೌ ದ ಸೀ ಬಿಕಾಮ್ ಸಾಲ್ಟಿ’ ಎಂಬ ನಾಲ್ಕು ಆಂಗ್ಲ ಕೃತಿಗಳನ್ನು ಹವ್ವ ನಸೀಮಾಗೆ ನೀಡಿದರು.