Advertisement

ಭಾರತದ ವಿರುದ್ಧ 5 ವಿಕೆಟ್‌ ಗುರಿ: ಉಸ್ಮಾನ್‌

10:09 AM Sep 18, 2018 | |

ದುಬಾೖ: ಬದ್ಧ ಎದುರಾಳಿಗಳಾದ ಭಾರತ-ಪಾಕಿಸ್ಥಾನ ತಂಡಗಳು ಬುಧವಾರ ಏಶ್ಯ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಮುಖಾಮುಖೀಯಾಗಲಿದ್ದು, ಈ ಹೈ-ವೋಲ್ಟೆಜ್‌ ಪಂದ್ಯಕ್ಕಾಗಿ ಎರಡೂ ಕಡೆಯ ಕ್ರಿಕೆಟ್‌ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಸಹಜವಾಗಿ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಹೀರೋಗಳಾಗಿ ಮೆರೆಯುವುದು ಕ್ರಿಕೆಟಿಗರ ಪ್ರಮುಖ ಗುರಿ. 

Advertisement

ಇದಕ್ಕೆ ಪಾಕಿಸ್ಥಾನದ ಎಡಗೈ ವೇಗಿ ಉಸ್ಮಾನ್‌ ಖಾನ್‌ ಕೂಡ ಹೊರತಲ್ಲ. ಭಾರತದೆದುರು 5 ವಿಕೆಟ್‌ ಉಡಾಯಿಸಿ ಮಿಂಚಬೇಕೆಂಬ ಅಭಿಲಾಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಹಾಂಕಾಂಗ್‌ ವಿರುದ್ಧದ ಏಕಪಕ್ಷೀಯ ಪಂದ್ಯದಲ್ಲಿ 19 ರನ್ನಿಗೆ 3 ವಿಕೆಟ್‌ ಉಡಾಯಿಸಿದ ಸಾಧನೆಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಉಸ್ಮಾನ್‌ ತಮ್ಮ ಬಯಕೆಯನ್ನು ಬಹಿರಂಗಗೊಳಿಸಿದ್ದಾರೆ.

ಇದೊಂದು ಬಿಗ್‌ ಮ್ಯಾಚ್‌
“ಭಾರತ-ಪಾಕಿಸ್ಥಾನ ಪಂದ್ಯದಲ್ಲಿ ಯಾರು ಶ್ರೇಷ್ಠ ಪ್ರದರ್ಶನ ನೀಡುತ್ತಾರೋ ಅವರ ಸಾಧನೆಯ ಮಟ್ಟ ಹೊಸ ಎತ್ತರ ತಲುಪುತ್ತದೆ. ಇಂದು ನಾನು 3 ವಿಕೆಟ್‌ ಉರುಳಿಸಿದೆ. ಭಾರತದ ವಿರುದ್ಧ ಈ ಸಂಖ್ಯೆಯನ್ನು ಐದಕ್ಕೆ ಏರಿಸಬೇಕೆಂಬುದು ನನ್ನ ಗುರಿ’ ಎಂಬುದಾಗಿ ಉಸ್ಮಾನ್‌ ಖಾನ್‌ ಹೇಳಿದರು.
“ಭಾರತ ನಂಬರ್‌ ವನ್‌ ತಂಡ. ಅವರಲ್ಲಿ ಅತ್ಯುತ್ತಮ ಆಟಗಾರರಿದ್ದಾರೆ. ಇದೊಂದು ಬಿಗ್‌ ಮ್ಯಾಚ್‌ ಆಗಲಿದೆ. ನಾವು ನೂರಕ್ಕೆ ನೂರರಷ್ಟು ಸಜ್ಜಾಗಿದ್ದೇವೆ. ಲಾಹೋರ್‌ನಲ್ಲಿ ನಮಗೆ ಸುದೀರ್ಘ‌ ಅಭ್ಯಾಸ ಶಿಬಿರವೊಂದನ್ನು ಆಯೋಜಿಸಲಾಗಿತ್ತು. ಭಾರತ ಕೂಡ ಉತ್ತಮ ಅಭ್ಯಾಸ ನಡೆಸಿದ್ದನ್ನು ಗಮನಿಸಿದ್ದೇನೆ’ ಎಂಬುದಾಗಿ 24ರ ಹರೆಯದ ಉಸ್ಮಾನ್‌ ಹೇಳಿದರು.

“ಯುಎಇಯಲ್ಲಿ ಭಾರತದ ವಿರುದ್ಧ ಆಡುವುದರಿಂದ ಪಾಕಿಸ್ಥಾನಕ್ಕೆ ಅನುಕೂಲ ಜಾಸ್ತಿ. ಕಳೆದ ಕೆಲವು ವರ್ಷಗಳಿಂದ ಯುಎಇ ನಮ್ಮ ಪಾಲಿನ ಕ್ರಿಕೆಟ್‌ ತವರಾಗಿದೆ’ ಎಂದೂ ಪಾಕ್‌ ವೇಗಿ ಹೇಳಿದರು. ದುಬಾೖ ಪಿಚ್‌ ಕುರಿತು ಪ್ರತಿಕ್ರಿಯಿಸಿದ ಉಸ್ಮಾನ್‌ ಖಾನ್‌, ಇದು ಟಿಪಿಕಲ್‌ ದುಬಾೖ ಟ್ರ್ಯಾಕ್‌ ಆಗಿರಲಿಲ್ಲ ಎಂದರು. “ಪಿಚ್‌ ಬಹಳ ನಿಧಾನ ಗತಿಯಿಂದ ವರ್ತಿಸುತ್ತಿತ್ತು. ಹೀಗಾಗಿ ಪೇಸ್‌ಗೆ ಹೆಚ್ಚಿನ ಆದ್ಯತೆ ಕೊಡಬೇಕಾಯಿತು. ದ್ವಿತೀಯ ಸ್ಪೆಲ್‌ ವೇಳೆ ರಿವರ್ಸ್‌ ಸ್ವಿಂಗ್‌ಗೆ ಅನುಕೂಲಕರವಾಗಿ ಪರಿಣಮಿಸಿತು’ ಎಂಬುದಾಗಿ ಹೇಳಿದರು. ರವಿವಾರದ ಏಕಪಕ್ಷೀಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಹಾಂಕಾಂಗ್‌ 37.1 ಓವರ್‌ಗಳಲ್ಲಿ 116ಕ್ಕೆ ಕುಸಿದರೆ, ಪಾಕಿಸ್ಥಾನ 23.4 ಓವರ್‌ಗಳಲ್ಲಿ 2 ವಿಕೆಟಿಗೆ 120 ರನ್‌ ಬಾರಿಸಿ ಜಯ ಸಾಧಿಸಿತು.

ಎಕ್ಸ್‌ಟ್ರಾ ಇನ್ನಿಂಗ್ಸ್‌ 
* ಏಶ್ಯ ಕಪ್‌ನಲ್ಲಿ ಹಾಂಕಾಂಗ್‌ ಮೊದಲ ಸಲ ಫ‌ಸ್ಟ್‌ ಬ್ಯಾಟಿಂಗ್‌ ನಡೆಸಿತು. ಇದಕ್ಕೂ ಹಿಂದಿನ 4 ಪಂದ್ಯಗಳಲ್ಲಿ ಅದು ಚೇಸಿಂಗ್‌ ನಡೆಸಿ, ಎಲ್ಲವನ್ನೂ 100ಕ್ಕೂ ಅಧಿಕ ರನ್‌ ಅಂತರದಲ್ಲಿ ಸೋತಿತ್ತು.
*  ಇಮಾಮ್‌ ಉಲ್‌ ಹಕ್‌ 10 ಏಕದಿನ ಪಂದ್ಯಗಳಲ್ಲಿ ಮೊದಲ ಅರ್ಧ ಶತಕ ಹೊಡೆದರು. ಇದಕ್ಕೂ ಹಿಂದಿನ ನಾಲ್ಕೂ ಅರ್ಧ ಶತಕಗಳನ್ನು ಅವರು ಶತಕವಾಗಿ ಪರಿವರ್ತಿಸಿದ್ದರು.
*  ಯುಎಇಯಲ್ಲಿ ಆಡಿದ 3 ಏಕದಿನ ಪಂದ್ಯಗಳಲ್ಲಿ ಉಸ್ಮಾನ್‌ ಖಾನ್‌ ಎರಡರಲ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಶ್ರೀಲಂಕಾ ವಿರುದ್ಧ ಶಾರ್ಜಾದಲ್ಲಿ ಆಡಿದ ಹಿಂದಿನ ಪಂದ್ಯದಲ್ಲಿ ಅವರು 34ಕ್ಕೆ 5 ವಿಕೆಟ್‌ ಉರುಳಿಸಿದ್ದರು.
*  ಪಾಕಿಸ್ಥಾನ ಮೊದಲು ಬೌಲಿಂಗ್‌ ನಡೆಸಿದ ಕಳೆದ 11 ಪಂದ್ಯಗಳಲ್ಲಿ 9ರಲ್ಲಿ ಎದುರಾಳಿಯನ್ನು ಆಲೌಟ್‌ ಮಾಡಿತು. ಈ ಸಂದರ್ಭದಲ್ಲಿ ಎದುರಾಳಿಯನ್ನು ಇನ್ನೂರರೊಳಗೆ ಆಲೌಟ್‌ ಮಾಡಿದ 5ನೇ ನಿದರ್ಶನ ಇದಾಗಿದೆ.
*ಬಾಬರ್‌ ಆಜಂ ಅತೀ ಕಡಿಮೆ ಇನ್ನಿಂಗ್ಸ್‌
ಗಳಲ್ಲಿ 2 ಸಾವಿರ ರನ್‌ ಪೂರ್ತಿಗೊಳಿಸಿದ ಸಾಧಕರಲ್ಲಿ ಜಂಟಿ 2ನೇ ಸ್ಥಾನ ಅಲಂಕರಿಸಿದರು (45 ಇನ್ನಿಂಗ್ಸ್‌). ಜಹೀರ್‌ ಅಬ್ಟಾಸ್‌, ಕೆವಿನ್‌ ಪೀಟರ್‌ಸನ್‌ ಕೂಡ 45 ಇನ್ನಿಂಗ್ಸ್‌ಗಳಲ್ಲಿ 2 ಸಾವಿರ ರನ್‌ ಪೂರೈಸಿದ್ದರು. ಹಾಶಿಮ್‌ ಆಮ್ಲ 40 ಇನ್ನಿಂಗ್ಸ್‌ಗಳಲ್ಲಿ 2 ಸಾವಿರ ರನ್‌ ಗಳಿಸಿದ್ದು ದಾಖಲೆ.
* ಪಾಕಿಸ್ಥಾನ 158 ಎಸೆತ ಬಾಕಿ ಇರುವಂತೆಯೇ ಗೆದ್ದು ಬಂದಿತು. ಇದು ಉಳಿದ ಎಸೆತಗಳ ಲೆಕ್ಕಾಚಾರದಲ್ಲಿ ಪಾಕಿಸ್ಥಾನದ 2ನೇ ಅತ್ಯುತ್ತಮ ಸಾಧನೆ. 2008ರ ಏಶ್ಯ ಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 182 ಎಸೆತ ಬಾಕಿ ಇರುವಾಗಲೇ ಜಯಿಸಿದ್ದು ಪಾಕ್‌ ದಾಖಲೆ. ಇದು ಏಶ್ಯ ಕಪ್‌ ದಾಖಲೆಯೂ ಆಗಿದೆ. ಅಂದು ಪಾಕಿಸ್ಥಾನ 116 ರನ್‌ ಬೆನ್ನಟ್ಟಿ ಗೆದ್ದಿತ್ತು.
*  ಮೊಹಮ್ಮದ್‌ ಆಮಿರ್‌ ಸತತ 3 ಏಕದಿನ ಪಂದ್ಯಗಳಲ್ಲಿ ವಿಕೆಟ್‌ ಕೀಳಲು ವಿಫ‌ಲರಾದರು. ಈ ಪಂದ್ಯಗಳಲ್ಲಿ ಒಟ್ಟು 24 ಓವರ್‌ ಎಸೆದ ಅವರು, 3 ಮೇಡನ್‌ ಮಾಡಿ 72 ರನ್‌ ನೀಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next