Advertisement

ಕೆಫೇನ್ ಸಹಿತ ಅಥವಾ ಕೆಫೇನ್‌ ರಹಿತ? : ಕೆಫೀನ್‌ ಸೇವನೆಯನ್ನು ಹೇಗೆ ಕಡಿಮೆ ಮಾಡುವುದು

08:31 PM Dec 06, 2020 | Suhan S |

ಮೃದು ಉದ್ದೀಪಕವಾಗಿರುವ ಕೆಫೀನ್‌ ಕಳೆದ ಹಲವಾರು ಶತಮಾನಗಳಿಂದ ನಮ್ಮ ಆಹಾರ ಶೈಲಿಯ ಭಾಗವಾಗಿದೆ. ಚೀನೀಯರು 5,000 ವರ್ಷಗಳ ಹಿಂದೆಯೇ ಚಹಾವನ್ನು ಶೋಧಿಸಿ ಕುಡಿಯುತ್ತಿದ್ದರು ಎಂಬುದಾಗಿ ದಾಖಲೆಗಳು ಹೇಳುತ್ತವೆ. ದಿನಗಳಿಂದಲೂ ಕೆಫೀನ್‌ ನಮ್ಮ ಆಹಾರದ ಭಾಗವಾಗಿದೆ. ಇವತ್ತು ಕೆಫೀನ್‌ಯುಕ್ತ ಆಹಾರಗಳು ಮತ್ತು ಪಾನೀಯಗಳು ನಮ್ಮ ಆಹಾರದ ಅವಿಭಾಜ್ಯ ಅಂಗಗಳಾಗಿವೆ. ನಮಗೆಲ್ಲರಿಗೂ ಕಾಫಿ ಅಥವಾ ಚಹಾ ಇಲ್ಲದಿದ್ದರೆ ಬೆಳಗಾಗುವುದೇ ಇಲ್ಲ!

Advertisement

ಕಾಫಿಯು ಕೆಫೀನ್‌ನ ಮುಖ್ಯ ಮೂಲವಾಗಿದ್ದು, ಅದರ ಪ್ರಮಾಣ ಎಷ್ಟಿದೆ ಎನ್ನುವುದು “ಮೊಚಾ’, “ಕೆಪುಚಿನೊ’ ಹೀಗೆ ಯಾವ ವಿಧದ ಕಾಫಿ ಎನ್ನುವುದನ್ನು ಅವಲಂಬಿಸಿರುತ್ತದೆ. ಕಾಫಿಯ ಪ್ರಮಾಣ ಮತ್ತು ಅದನ್ನು ತಯಾರಿಸಿದ ವಿಧಾನವು ಅದರಲ್ಲಿ ಎಷ್ಟು ಕೆಫೀನ್‌ ಇದೆ ಎಂಬುದನ್ನು ನಿರ್ಧರಿಸುತ್ತದೆ ಹಾಗೂ ಅದು ಕೆಫೀನ್‌ಯುಕ್ತವಾಗಿದೆಯೇ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ.

ಕೆಫೀನ್‌ ಕೇಂದ್ರ ನರವ್ಯವಸ್ಥೆಯಲ್ಲಿ ಸೌಮ್ಯ ಉದ್ದೀಪಕವಾಗಿ ಕೆಲಸ ಮಾಡುತ್ತದೆ. ಆರೋಗ್ಯ ಸಮಸ್ಯೆಗಳಿಗೂ ಕೆಫೀನ್‌ಗೂ ಸಂಬಂಧ ಕಲ್ಪಿಸುವ ಸಾಕ್ಷ್ಯಗಳು ಇದುತನಕ ಲಭಿಸಿಲ್ಲ. ಕೆಫೀನ್‌ ಅಧಿಕ ರಕ್ತದೊತ್ತಡ ಅಥವಾ ದೀರ್ಘ‌ಕಾಲಿಕ ರಕ್ತದೊತ್ತಡ ಹೆಚ್ಚಳವನ್ನು ಉಂಟು ಮಾಡುವುದಿಲ್ಲ ಎಂಬುದಾಗಿ ಸಂಶೋಧನೆಗಳು ಹೇಳುತ್ತವೆ. ಆದರೆ ಕೆಲವು ತಾಸುಗಳಿಗೆ ಸೀಮಿತವಾಗುವ ಅಧಿಕ ರಕ್ತದೊತ್ತಡವನ್ನು ಕೆಫೀನ್‌ ಉಂಟು ಮಾಡಬಹುದು.

ಮೂತ್ರ ವಿಸರ್ಜನೆಯ ಮೂಲಕ ದೇಹದ ದ್ರವಾಂಶ ಹೆಚ್ಚು ನಷ್ಟವಾಗುವ ಡಿಯೂರೆಟಿಕ್‌ ಪರಿಣಾಮವನ್ನು ಕೆಫೀನ್‌ ಉಂಟು ಮಾಡುತ್ತದೆ. ಡಿಯೂರೆಟಿಕ್‌ ಪರಿಣಾಮವು ಸೇವಿಸಿದ ಕೆಫೀನ್‌ ಪ್ರಮಾಣವನ್ನು ಅವಲಂಬಿಸಿದೆ, ಆದರೆ ಅದು ನಿರ್ಜಲೀಕರಣವನ್ನು ಉಂಟು ಮಾಡುವುದಿಲ್ಲ. ಭೇದಿಯುಂಟಾಗಿರುವ ಸಂದರ್ಭದಲ್ಲಿ ಕಾಫಿ ಸೇವನೆಯನ್ನು ವರ್ಜಿಸುವುದು ವಿಹಿತ.  ಕ್ಯಾಲ್ಸಿಯಂ ಅಂಶವು ಮಲ ಮತ್ತು ಮೂತ್ರದ ಮೂಲಕ ನಷ್ಟವಾಗುವುದು ದಿನಕ್ಕೆ ಹೆಚ್ಚು ಕಾಫಿ ಕುಡಿಯುವ ಜನರಲ್ಲಿ ಹೆಚ್ಚು. ಆದರೆ ಕಾಫಿಗೆ ಹಾಲು ಬೆರೆಸುವ ಮೂಲಕ ಇದನ್ನು ಸರಿದೂಗಿಸಿಕೊಳ್ಳಬಹುದು.

ಅತ್ಯಧಿಕ ಪ್ರಮಾಣದಲ್ಲಿ ಕೆಫೀನ್‌ ಸೇವನೆಯಿಂದ ಉದ್ವಿಗ್ನತೆ ಅಥವಾ ನಿದ್ರಾಹೀನತೆ ಉಂಟಾಗಬಹುದು. ಅದು ತಾತ್ಕಾಲಿಕವಾಗಿ ಹೃದಯ ಬಡಿತದ ಗತಿಯನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಬಹುದು, ಆದರೆ ಕೆಫೀನ್‌ ದೇಹದಲ್ಲಿ ಸಂಗ್ರಹಗೊಳ್ಳುವುದಿಲ್ಲವಾದ್ದರಿಂದ ಇದು ತಾತ್ಕಾಲಿಕವಾಗಿರುತ್ತದೆ. ಅದರ ಪರಿಣಾಮ ಮಾಯವಾಗಲು ಸಾಮಾನ್ಯವಾಗಿ 4ರಿಂದ 6 ತಾಸು ತೆಗೆದುಕೊಳ್ಳುತ್ತದೆ. ಸೇವಿಸಿದ 3-4 ತಾಸುಗಳಲ್ಲಿ ಅದು ದೇಹದಿಂದ ವಿಸರ್ಜಿಸಲ್ಪಡುತ್ತದೆ.

Advertisement

“ಅತ್ಯಧಿಕ’ ಎನ್ನುವ ಪದವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಅಥವಾ ಆಧರಿಸಿರುತ್ತದೆ. ಅದು ಸೇವನೆಯ ಪ್ರಮಾಣ, ಎಷ್ಟು ಬಾರಿ ಸೇವನೆ, ದೇಹತೂಕ, ದೈಹಿಕ ಸ್ಥಿತಿಗತಿ ಇತ್ಯಾದಿಗಳನ್ನೂ ಆಧರಿಸಿರುತ್ತದೆ. ಕಾಲಕ್ರಮೇಣ ಕೆಫೀನ್‌ಗೆ ದೇಹವು ಸಹಿಷ್ಣುತೆಯನ್ನೂ ಬೆಳೆಸಿಕೊಳ್ಳುತ್ತದೆ.

ಆರೋಗ್ಯವಂತ ವಯಸ್ಕರಿಗೆ ಕೆಫೀನ್‌ ಸೇವನೆಯ ಮಿತ ಪ್ರಮಾಣ ಎಂದರೆ ದಿನಕ್ಕೆ 200ರಿಂದ 300 ಮಿಲಿಗ್ರಾಂ ಅಥವಾ 2-3 ಕಪ್‌ ಕಾಫಿ ಆಗಿರುತ್ತದೆ. ಇಲ್ಲೂ, ವ್ಯಕ್ತಿಯಿಂದ ವ್ಯಕ್ತಿಗೆ ಕಪ್‌ ಗಾತ್ರ ಬದಲಾಗುತ್ತದೆ ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ದಿನಕ್ಕೆ 2-3 ಕಪ್‌ ಕಾಫಿ ಸೇವನೆ ಯಾವುದೇ ಸಮಸ್ಯೆಯನ್ನು ಉಂಟು ಮಾಡದು.

ಕೆಫೀನ್‌ ಚಟ (ಅಡಿಕ್ಷನ್‌) ಉಂಟಾಗುತ್ತದೆಯೇ? ಇಲ್ಲ, ಆದರೆ ಅದೊಂದು ಹವ್ಯಾಸವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ನೀವು ನಿಯಮಿತವಾಗಿ ಕೆಫೀನ್‌ಯುಕ್ತ ಪಾನೀಯ ಸೇವಿಸುತ್ತಿದ್ದು, ಹಠಾತ್ತಾಗಿ ನಿಲ್ಲಿಸಿದರೆ ಕೆಲವರಿಗೆ ತೂಕಡಿಕೆ, ತಲೆನೋವು ಉಂಟಾಗಬಹುದು, ಏಕಾಗ್ರತೆಯ ಕೆಲವು ದಿನಗಳ ಕಾಲ ಕುಸಿಯುವ ಸಾಧ್ಯತೆ ಇದೆ. ಆದರೆ ಇದೆಲ್ಲ  ಒಂದೆರಡು ದಿನಗಳಲ್ಲಿ ಮಾಯವಾಗುತ್ತದೆ.

ಕೆಫೀನ್‌ ಸೇವನೆಯನ್ನು  ಹೇಗೆ ಕಡಿಮೆ ಮಾಡುವುದು:

  1. ನಿಧಾನವಾಗಿ ಮತ್ತು ಸ್ವಲ್ಪಸ್ವಲ್ಪವೇ ಕಡಿಮೆ ಮಾಡಿ: ಪ್ರಮಾಣವನ್ನು ನಿಧಾನವಾಗಿ ಕಡಿಮೆ ಮಾಡಿ.
  2. ಅರ್ಧ ಸಾಮಾನ್ಯ ಕಾಫಿ ಮತ್ತು ಅರ್ಧ ಕೆಫೀನ್‌ಯುಕ್ತ ಕಾಫಿಗಳನ್ನು ಮಿಶ್ರಣ ಮಾಡಿ ಕುಡಿಯಿರಿ. ಅಂದರೆ ಲೈಟ್‌ ಕಾಫಿ ಕುಡಿಯಿರಿ.
  3. ಕುಡಿಯಬೇಕು ಅನ್ನಿಸಿದಾಗ ಗುಟುಕರಿಸಲು ಒಂದು ಕಪ್‌ ನೀರನ್ನು ಕೈಯಳತೆಯಲ್ಲಿ ಇರಿಸಿಕೊಳ್ಳಿ.
  4. ನಿದ್ರಾಹೀನತೆ ಇರುವವರು ಸಂಜೆ ಕೆಫೀನ್‌ಯುಕ್ತ ಪಾನೀಯ ವರ್ಜಿಸಿ.

 

ಡಾ| ಅರುಣಾ ಮಲ್ಯ

ಹಿರಿಯ ಡಯಟೀಶನ್‌

ಕೆಎಂಸಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next