ಧೋ ಎಂದು ಮಳೆಯ ಅಬ್ಬರದ ಜೊತೆಗೆ ಚೆಂಡೆ ಪೆಟ್ಟಿನ ಸದ್ದು ಬಂದರೆ ಹೇಗೆ? ಇಂಥದೊಂದು ಮಳೆಗಾಲದ ಅಮೋಘ ಯಕ್ಷಗಾನ ಪ್ರದರ್ಶನ “ಉಷಾ ಪರಿಣಯ- ಮೈಂದ ದ್ವಿವಿಧ’ ಕಾಸಗೋಡಿನ ನೀರ್ಚಾಲು ಶಾಲಾ ವಠಾರದಲ್ಲಿ ನಡೆಯಿತು. ಪಾಂಚಜನ್ಯ ಕಲಾ ಸಂಘ ನೇರಳಕಟ್ಟೆ ಹಾಗೂ ತೆಂಕುತೆಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಈ ಪ್ರದರ್ಶನ ಸಂಪನ್ನಗೊಂಡಿತು.
ಜು.8ರಂದು ಅಪರಾಹ್ನ 2ಕ್ಕೆ ಪ್ರಾರಂಭವಾಗಿ ಸಾಧಾರಣ 7 ಗಂಟೆಗಳ ಕಾಲ ಜನಮನವನ್ನೂ ರಂಜಿಸಿತು. ಉತ್ತಮ ಹಿಮ್ಮೇಳ, ಮುಮ್ಮೇಳನ, ವೇಷಭೂಷಣ, ಪ್ರಸಾದನ ಕಲಾಭಿಮಾನಿಗಳ ಮನ ತಣಿಸುವುದರಲ್ಲಿ ಸಫಲವಾಯಿತು.
ಪ್ರಾರಂಭದಲ್ಲಿ “ಉಷಾ ಪರಿಣಯ’ ಹಾಗೂ ಎರಡನೇ ಪ್ರಸಂಗ “ಮೈಂದ ದ್ವಿವಿದ’. ಉಷಾ ಪರಿಣಯ ಮೊದಲಿಗೆ ಸಮಯ ದೀರ್ಘ ತೆಗೆದುಕೊಂಡರೂ ಕೊನೆಗೆ ಉತ್ತಮವಾಗಿ ಮೂಡಿಬಂತು. ಮೈಂದ ದ್ವಿವಿದ ಪ್ರಸಂಗ ಅಬ್ಬರದಿಂದ ಆರಂಭವಾಯಿತು. ಚೆಂಡೆಪೆಟ್ಟಿನ ಬಿರಸು ಪ್ರೇಕ್ಷಕರ ಮನ ಸೆಳೆಯಿತು.
ಅನುಭವಿ ಹಿರಿಯ-ಕಿರಿಯ ಕಲಾವಿದರ ಈ ಯಕ್ಷಗಾನ ಬಯಲಾಟ ಮಳೆಗಾಲದ ಮಹೋನ್ನತ ಪ್ರದರ್ಶನವೆಂದೇ ಹೇಳಬಹುದು. ಕಲಾಭಿಮಾನಿಗಳು ಆರಂಭದಿಂದ ಕೊನೆಯವರೆಗೂ ಯಕ್ಷಗಾನ ವೀಕ್ಷಿಸಿದುದು ಪ್ರದರ್ಶನ ಎಷ್ಟು ಸಫಲವಾಯಿತು ಎನ್ನುವುದಕ್ಕೆ ಸಾಕ್ಷಿಯಾಯಿತು.
ಪ್ರಸಾದ್ ಮೈರ್ಕಳ