ಮಹಾರಾಷ್ಟ್ರ: ದೇಶದಲ್ಲಿರುವ ಯುವ ಜನತೆಯನ್ನು ಮಾದಕ ದ್ರವ್ಯದ ದಾಸರನ್ನಾಗಿ ಮಾಡಲು ಹೊರಟಿರುವ ಕಾಂಗ್ರೆಸ್ ಪಕ್ಷ, ಆ ಹಣವನ್ನು ಚುನಾವಣೆಯನ್ನು ಗೆಲ್ಲಲು ಬಳಸಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ (ಅ.05) ವಾಗ್ದಾಳಿ ನಡೆಸಿದರು.
ಅಕ್ಟೋಬರ್ 2ರಂದು ದೆಹಲಿ ಪೊಲೀಸರು 5,620 ಕೋಟಿ ರೂಪಾಯಿ ಮೌಲ್ಯದ 560 ಕಿಲೋ ಗ್ರಾಮ್ ಕೊಕೇನ್ ಹಾಗೂ ಮರಿಜುವಾನಾ ಅನ್ನು ದಕ್ಷಿಣ ದೆಹಲಿಯ ಮಹಿಪಾಲ್ ಪುರ್ ನಲ್ಲಿ ವಶಪಡಿಸಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಇದರ ಪ್ರಮುಖ ಆರೋಪಿ ಕಾಂಗ್ರೆಸ್ ಮುಖಂಡನಾಗಿದ್ದಾನೆ. ಯುವಕರನ್ನು ಡ್ರಗ್ಸ್ ದಾಸರನ್ನಾಗಿ ಮಾಡಲು ಕಾಂಗ್ರೆಸ್ ಹೊರಟಿದ್ದು, ಆ ಹಣವನ್ನು ಚುನಾವಣೆ ಗೆಲ್ಲಲು ಬಳಸುತ್ತಿದೆ ಎಂದು ಆರೋಪಿಸಿದರು.
ಡ್ರಗ್ಸ್ ನೀತಿಯ ವಿಚಾರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಶೂನ್ಯ ಸಹಿಷ್ಣುತೆಗೆ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಯುವಕರನ್ನು ಶಿಕ್ಷಣ, ಕ್ರೀಡೆ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಣೆಯಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ರಾಜಕೀಯ ಪ್ರಭಾವವನ್ನು ಡ್ರಗ್ ಕಳ್ಳಸಾಗಣೆ ಮಾಡಲು ಬಳಸಿಕೊಳ್ಳುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ವಾಗ್ದಾಳಿ ನಡೆಸಿದ್ದರು.