Advertisement

ಬೆಳೆ ಸ್ಥಿತಿ ಅರಿಯಲು ಆ್ಯಪ್‌ ಬಳಕೆ

12:47 PM Aug 06, 2019 | Team Udayavani |

ನರೇಗಲ್ಲ: ಮೊಬೈಲ್ ಆ್ಯಪ್‌ಯೊಂದರ ಮೂಲಕ ಬೆಳೆ ಸಮೀಕ್ಷೆಗೆ ಸರ್ಕಾರ ಮುಂದಾಗಿದ್ದು, ಹೋಬಳಿ ವ್ಯಾಪ್ತಿಯಲ್ಲಿ ಬೆಳೆ ಸಮೀಕ್ಷೆ ಕಾರ್ಯ ಭರದಿಂದ ನಡೆದಿದೆ. ಸುಳ್ಳು ಮಾಹಿತಿ ನೀಡಿ ಬೆಳೆ ವಿಮೆ ಪಡೆಯಲು ಮುಂದಾಗುವ ಹಾಗೂ ಕೊಡಿಸುವವರಿಗೆ ಕಡಿವಾಣ ಹಾಕಿದಂತಾಗಿದೆ.

Advertisement

ರೈತರಿಗೆ ಅನ್ಯಾಯ ಆಗಬಾರದೆಂದು ಸರ್ಕಾರ ಮೊಬೈಲ್ ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ ಮಾಡುತ್ತಿರುವುದರಿಂದ ಫಲಾನುಭವಿಗೆ ಮೋಸವಾಗಲು ಸಾಧ್ಯವಿಲ್ಲ. ಇದಕ್ಕೆ ಕಡಿವಾಣ ಹಾಕಲೆಂದೇ ಮೊಬೈಲ್ ಆ್ಯಪ್‌ಯೊಂದರ ಮೂಲಕ ಬೆಳೆ ಸಮೀಕ್ಷೆಗೆ ಸರ್ಕಾರ ಕೈಗೊಂಡಿರುವ ಕಾರ್ಯಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಹೊಸ ಮಾದರಿ ಮೊಬೈಲ್ ಆ್ಯಪ್‌ ಒಂದನ್ನು ಸೃಷ್ಟಿಸಿ ಕಳೆದ ಎರಡು ವರ್ಷಗಳ ಹಿಂದಿಯೇ ಸಮೀಕ್ಷೆಗೆ ಮುಂದಾಗಿತ್ತು. ಒಂದಿಷ್ಟು ಅವಸರದಲ್ಲಿ ವಿವಿಧ ತೊಂದರೆಗಳ ನಡುವೆಯೂ ಗ್ರಾಮಗಳ ಜಮೀನುಗಳಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮೊಬೈಲ್ ಆ್ಯಪ್‌ ಮೂಲಕ ಬೆಳೆ ಹಾಗೂ ರೈತನ ಆಧಾರ್‌ ಕಾರ್ಡ್‌ ಸಂಖ್ಯೆ, ಹೆಸರು, ಪಹಣೆಯಲ್ಲಿರುವ ಸರ್ವೇ ನಂಬರ್‌ ಸೇರಿದಂತೆ ಬೆಳೆಗಳ ಮಾಹಿತಿ ದಾಖಲಿಸಿತ್ತು.

ಅಗತ್ಯ ಮಾಹಿತಿಗಳನ್ನು ಈ ಆ್ಯಪ್‌ ಮೂಲಕ ದಾಖಲಿಸುವ ಕೆಲಸ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಎಂಟು ದಿನಗಳಿಂದ ಭರದಿಂದ ನಡೆದಿದೆ. ಕಂದಾಯ, ಕೃಷಿ ಹಾಗೂ ಪಂಚಾಯತ್‌ ರಾಜ್ಯ ಇಲಾಖೆಯ ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಹೇಗೆ ನಡೆಯುತ್ತದೆ: ಸರ್ಕಾರ ನೀಡಿರುವ, ಇಲ್ಲವೆ ತಮ್ಮ ಮೊಬೈಲಿಗೆ ಹಾಕಿಸಿಕೊಂಡಿರುವ ಆ್ಯಪ್‌ನ ಅಣತಿಯಂತೆ ರೈತನ ಜಮೀನಿನ ಸರ್ವೇ ನಂ, ಅಲ್ಲಿರುವ ಬೆಳೆ, ನೀರಾವರಿ ಇದೆಯೋ ಇಲ್ಲವೋ ಎಂಬೆಲ್ಲ ಮಾಹಿತಿ ಮತ್ತು ಬೆಳೆ ಹಾಗೂ ರೈತರ ಚಿತ್ರ ತೆಗೆದು ಅದನ್ನೆಲ್ಲ ಆಧಾರ್‌ ಸಂಖ್ಯೆಯೊಂದಿಗೆ ದಾಖಲಿಸಿಕೊಳ್ಳುತ್ತಾರೆ. ಆ್ಯಪ್‌ನಲ್ಲಿ ಬಳಸಿಕೊಳ್ಳುತ್ತಿರುವ ಆಧುನಿಕ ತಂತ್ರಜ್ಞಾನ ತಪ್ಪು ಮಾಹಿತಿಗೆ ಅವಕಾಶ ನೀಡುವುದಿಲ್ಲ ಎಂಬುದು ಗಮನಾರ್ಹ ವಿಷಯ.

Advertisement

ಬಿಡುವುಲ್ಲದ ಕೆಲಸ: ಬೆಳೆವಿಮೆ ಸಮೀಕ್ಷೆಗೆ ಅಳವಡಿಸಿಕೊಳ್ಳುತ್ತಿರುವ ಹೊಸ ವಿಧಾನದಿಂದಾಗಿ ಕಂದಾಯ ಇಲಾಖೆಯ ಸಿಬ್ಬಂದಿ ಬೆಳಗ್ಗೆಯಿಂದ ಸಂಜೆಯವರೆಗೂ ತಮ್ಮ ವ್ಯಾಪ್ತಿಯ ಭೂಮಿಗಳಿಗೆ ಧಾವಿಸಿ ಮಾಹಿತಿ ದಾಖಲಿಸಬೇಕಾಗಿದೆ. ಇದರಿಂದ ತಮ್ಮ ನಿತ್ಯ ಕೆಲಸಗಳ ನಡುವೆಯೂ ಕಂದಾಯ, ಕೃಷಿ ಹಾಗೂ ಪಂಚಾಯತ್‌ ರಾಜ್ಯ ಇಲಾಖೆ ಸಿಬ್ಬಂದಿ ಹಾಗೂ ಇಲಾಖೆಗಳ ಮೇಲಧಿಕಾರಿಗಳು ಬೆಳೆ ಸಮೀಕ್ಷೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ರೈತರು ಇವರಿಗೆ ಸಾಥ್‌ ನೀಡುತ್ತಿದ್ದಾರೆ.

ಮೊಬೈಲ್ನಲ್ಲಿ ನೀಡಿರುವ ಆ್ಯಪ್‌ ಮೂಲಕ ಬೆಳೆ ಸಮೀಕ್ಷೆಯಿಂದ ರೈತರಿಗೆ ಬಹಳ ರೀತಿಯಲ್ಲಿ ಅನುಕೂಲವಾಗಲಿದೆ. ಸರ್ಕಾರಕ್ಕೂ ವಾಸ್ತವ ಸ್ಥಿತಿ ತಿಳಿಯಲು ಯೋಜನೆ ರೂಪಿಸಲು, ಬೆಳೆ ವಿಮೆ ನೀಡಲು ಸಹಕಾರಿಯಾಗಲಿದೆ. ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿ ಈ ಕೆಲಸ ಭರದಿಂದ ಸಾಗಿದೆ. ಇಲಾಖೆ ಸಿಬ್ಬಂದಿ ಪ್ರಾಮಾಣಿಕವಾಗಿ ಇದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಉಪತಹಶೀಲ್ದಾರ ವೀರಣ್ಣ ಅಡಗತ್ತಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next