Advertisement

ಸರ್ವಿಸ್‌ ರಸ್ತೆಗಳು ಪಾರ್ಕಿಂಗ್‌ ಸ್ಪಾಟ್‌ಗಳಾಗಿ ಬಳಕೆ!

09:33 PM Sep 13, 2021 | Team Udayavani |

ಕೋಟ:  ರಾಷ್ಟ್ರೀಯ ಹೆದ್ದಾರಿಯಲ್ಲಿ  ಬಸ್‌ ನಿಲುಗಡೆಯ ಸಂದರ್ಭ  ಸರ್ವಿಸ್‌ ರಸ್ತೆ ಅಥವಾ ಬಸ್‌ ವೇಗಳನ್ನು  ಕಡ್ಡಾಯವಾಗಿ ಪ್ರವೇಶಿಸಬೇಕು ಎನ್ನುವ ನಿಯಮವಿದೆ. ಆದರೆ ಬಹುತೇಕ  ಬಸ್‌ಗಳು ಈ ನಿಯಮವನ್ನು ಪಾಲಿಸುತ್ತಿಲ್ಲ ಹಾಗೂ ಅಪಾಯಕಾರಿ ರೀತಿಯಲ್ಲಿ ಮುಖ್ಯ ರಸ್ತೆಯಲ್ಲೇ ನಿಲುಗಡೆಗೊಳಿಸಿ  ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು, ಇಳಿಸುವುದು ಮಾಡಲಾಗುತ್ತದೆ. ಇದರಿಂದಾಗಿ ಪ್ರಯಾಣಿಕರಿಗೆ ಹಾಗೂ ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

Advertisement

ಪ್ರಮುಖವಾಗಿ  ಜಿಲ್ಲೆಯ ಕೋಟ, ಬ್ರಹ್ಮಾವರ, ಸಂತೆಕಟ್ಟೆ, ಉಡುಪಿ,  ಕೋಟೇಶ್ವರ, ಬೀಜಾಡಿ, ಅಂಕದ ಕಟ್ಟೆ, ಕುಂದಾಪುರ, ಕಾಪು, ಪಡುಬಿದ್ರಿ  ಮುಂತಾದ ಕಡೆಗಳಲ್ಲಿ ಸರ್ವಿಸ್‌ ರಸ್ತೆ ಇದ್ದು ಎಲ್ಲಿಯೂ ಕೂಡ ಇದನ್ನು  ಬಳಸಿಕೊಳ್ಳುತ್ತಿಲ್ಲ. ಈ ರೀತಿ ಮುಖ್ಯ ರಸ್ತೆಯಲ್ಲಿ ಬಸ್‌ಗಳನ್ನು ನಿಲ್ಲಿಸುವುದರಿಂದ  ಹೆದ್ದಾರಿಯಲ್ಲಿ ವೇಗವಾಗಿ ಸಾಗುವ ವಾಹನ ಸವಾರರು ಗೊಂದಲಕ್ಕೀಡಾಗಿ  ಅಪಘಾತವಾಗುವ ಸಂಭವವಿರುತ್ತದೆ  ಮತ್ತು ರಸ್ತೆ ದಾಟುವವರಿಗೂ ಎದುರಿನಿಂದ ಬರುವ ವಾಹನಗಳನ್ನು ಗುರುತಿಸುವುದು ಕಷ್ಟವಾಗುತ್ತದೆ.  ಬಸ್‌ನಿಂದ ಇಳಿದು ಸರ್ವಿಸ್‌ ರಸ್ತೆ ದಾಟಿ ತೆರಳಬೇಕಿರುವುದರಿಂದ ಮಕ್ಕಳು, ಮಹಿಳೆಯರು, ಹಿರಿಯನಾಗರಿಕರಿಗೆ ಸಮಸ್ಯೆಯಾಗುತ್ತಿದೆ ಹಾಗೂ  ಬಸ್‌ ನಿಲ್ದಾಣ ಬಿಟ್ಟು ಡಿವೈಡರ್‌ನ ಮೇಲೆ ನಿಂತು ಬಸ್‌ಗಾಗಿ  ಕಾಯಬೇಕಾದ ಸ್ಥಿತಿ ಇದೆ.

ಸರ್ವಿಸ್‌ ರಸ್ತೆ ಅನ್ಯ ಕಾರ್ಯಕ್ಕೆ ಬಳಕೆ:

ಸರ್ವಿಸ್‌ ರಸ್ತೆಯಲ್ಲಿ  ಕಾಯಂ ಆಗಿ ವಾಹನಗಳನ್ನು ಪಾರ್ಕಿಂಗ್‌ ಮಾಡುವುದರಿಂದ ಇತರ ವಾಹನಗಳ ಓಡಾಟ, ಜನಸಂಚಾರಕ್ಕೆ ಜಾಗ ಸಾಕಾಗುವುದಿಲ್ಲ. ಹೀಗಾಗಿ ಬಸ್‌ಗಳು ಸರ್ವಿಸ್‌ ರಸ್ತೆಗೆ ಬರಲು ಸಾಧ್ಯವಾಗುತ್ತಿಲ್ಲ ಎನ್ನುವ ಮಾತು ಕೂಡ ಇದೆ.

ಕಡಿವಾಣ ಅಗತ್ಯ:

Advertisement

ಸರ್ವಿಸ್‌ ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡುವುದರ ವಿರುದ್ಧ  ಸ್ಥಳೀಯಾಡಳಿತ ಹಾಗೂ ಪೊಲೀಸ್‌ ಇಲಾಖೆ ಒಟ್ಟಾಗಿ ಕ್ರಮಕೈಗೊಳ್ಳಬೇಕಿದೆ. ಬಸ್‌ಗಳು ಕಡ್ಡಾಯವಾಗಿ ಸರ್ವಿಸ್‌ ರಸ್ತೆಯನ್ನು ಬಳಸಿಕೊಳ್ಳುವಂತೆ ಆರ್‌.ಟಿ.ಒ. ಕಟ್ಟುನಿಟ್ಟಿನ ನಿರ್ದೇಶನ ನೀಡಿ ಕ್ರಮಕೈಗೊಳ್ಳಬೇಕಿದೆ.

ಸಮಯ ಪಾಲನೆ ಕಷ್ಟ :

ಸರ್ವಿಸ್‌ ರಸ್ತೆಯಲ್ಲಿ  ಕಾಯಂ ಆಗಿ ವಾಹನಗಳನ್ನು ಪಾರ್ಕಿಂಗ್‌ ಮಾಡಲಾಗುತ್ತಿದೆ. ಕೆಲವು ವಾಣಿಜ್ಯ ಸಂಕೀರ್ಣಗಳಿಗೆ ಸರ್ವಿಸ್‌ ರಸ್ತೆಯೇ  ಪಾರ್ಕಿಂಗ್‌ ಸ್ಪಾಟ್‌ಗಳಾಗಿದೆ.  ಇದರಿಂದಾಗಿ ನಡೆದಾಡುವವರಿಗೆ ಹಾಗೂ ಇತರ  ವಾಹನ ಸಂಚಾರಕ್ಕೆ  ಸಾಕಷ್ಟು  ಸಮಸ್ಯೆಯಾಗುತ್ತಿದೆ. ಹೀಗಾಗಿ ಬಸ್‌ಗಳನ್ನು ಸರ್ವಿಸ್‌ ರಸ್ತೆಗೆ ತರುವುದು ಕಷ್ಟ ಮತ್ತು  ಸಮಯ ಪಾಲನೆ ಸಾಧ್ಯವಾಗುವುದಿಲ್ಲ  ಎನ್ನುವುದು  ಬಸ್‌ ಚಾಲಕರು, ನಿರ್ವಾಹಕರ ಅಭಿಪ್ರಾಯವಾಗಿದೆ.

ಹೆಚ್ಚಿನ ಕಡೆಗಳಲ್ಲಿ  ಸರ್ವಿಸ್‌ ರಸ್ತೆಗಳು ಪಾರ್ಕಿಂಗ್‌ ಸ್ಟಾಟ್‌ಗಳಾಗಿ ಬದಲಾಗಿದೆ. ಮುಖ್ಯ ರಸ್ತೆಯಲ್ಲಿ ಬಸ್‌ನಿಂದ  ಇಳಿದು ಸರ್ವಿಸ್‌ ರಸ್ತೆ ದಾಟುವುದು ಹಿರಿಯ ನಾಗರಿಕರಿಗೆ, ಮಕ್ಕಳಿಗೆ ಸಾಹಸವಾಗಿದೆ. ಆದ್ದರಿಂದ ಎಲ್ಲ ಬಸ್‌ಗಳು ಸರ್ವಿಸ್‌ ರಸ್ತೆ ಬಳಸುವಂತೆ ಕ್ರಮಕೈಗೊಳ್ಳಬೇಕು. ಸರ್ವಿಸ್‌ ರಸ್ತೆಯಲ್ಲಿ ವಾಹನ ಪಾರ್ಕಿಂಗ್‌ಗೆ ಕಡಿವಾಣ ಹಾಕಬೇಕು. – ಸುರೇಶ್‌ ಮಣೂರು,  ನಿತ್ಯ ಬಸ್‌ ಪ್ರಯಾಣಿಕ

ಸಮಸ್ಯೆ ಈಗಾಗಲೇ ಗಮನದಲ್ಲಿದೆ. ಜಿಲ್ಲೆಯಲ್ಲಿರುವ ಒಂದೊಂದೆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದು. ಮುಂದೆ ಈ ಬಗ್ಗೆ ಕೂಡ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ.-ಜೆ.ಪಿ. ಗಂಗಾಧರ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ ಉಡುಪಿ

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next