Advertisement

ನೀರನ್ನು ಎಚ್ಚರದಿಂದ ಬಳಸುವ ಪರಿಪಾಠ ಬೆಳೆಸಿ: ಶ್ರೀಪಡ್ರೆ

09:22 AM Jul 22, 2019 | Sriram |

ನೀರಿನ ಅಭಾವವನ್ನು ಕಡಿಮೆಗೊಳಿಸುವ ಉದ್ದೇಶದೊಂದಿಗೆ ಪ್ರತಿಯೊಬ್ಬರಲ್ಲೂ ನೀರ ಸಂರಕ್ಷಣೆಯ ಕಾಳಜಿ ಸೃಷ್ಟಿಯಾಗಬೇಕು ಎಂಬ ದೃಷ್ಟಿಯಿಂದ “ಉದಯವಾಣಿ’ ಆರಂಭಿಸಿರುವ “ಜಲ ಸಾಕ್ಷರ’ ಅಭಿಯಾನದ ಮಾಹಿತಿ ಕಾರ್ಯಾಗಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಜರಗಿತು. ಉದಯವಾಣಿ, ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ನಿರ್ಮಿತಿ ಕೇಂದ್ರ, ಎಂಜಿಎಂ ಕಾಲೇಜು ಸಹಯೋಗದಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಜಲತಜ್ಞ ಶ್ರೀಪಡ್ರೆಯವರು ಜಲ ಸಂರಕ್ಷಣೆಯ ಮಾಹಿತಿಯನ್ನು ನೀಡಿದರು.


ಉಡುಪಿ: ನೀರಿನ ಜಾಗೃತಿ ಅತೀ ಅಗತ್ಯ ವಾಗಿದ್ದು, ದಕ್ಷಿಣ ಭಾರತದಲ್ಲಿ ಜಲಜಾಗೃತಿ ಆಗಬೇಕಿದೆ. 2019ರ ಬರದಿಂದ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ದುರಂತ ಎದುರಾಗಬಹುದು. ಪ್ರತಿಯೋರ್ವರ ಮೇಲು ಈ ಜವಾಬ್ದಾರಿಯಿದ್ದು, ಮನೆ ಮನೆಯಲ್ಲೂ ನೀರನ್ನು ಎಚ್ಚರದಿಂದ ಬಳಸುವ ಪರಿಪಾಠ ಬೆಳೆಸಿ ಕೊಳ್ಳಬೇಕು. ಒಂದು ಚದರ ಮೀ. ಜಾಗದ ಮೇಲೆ 1 ಮಿ.ಮೀ. ಮಳೆ ಬಿದ್ದರೆ 1 ಲೀಟರ್‌ ಆಗುತ್ತದೆ. ಕರಾವಳಿ ಕರ್ನಾಟಕದಲ್ಲಿ ಪ್ರತೀ ಚದರ ಅಡಿಯ ಮೇಲೆ 3.5 ಸಾವಿರ ಮಿ.ಮೀ. ಮಳೆ ಸುರಿಯುತ್ತದೆ. ನೀರಿನ ಬಗ್ಗೆ ಈ ಎಲ್ಲ ಲೆಕ್ಕ ಹಾಕದಿರುವುದು ಇಂದಿನ ದುರಂತಕ್ಕೆ ಕಾರಣ ಎಂದು ಜಲತಜ್ಞರಾದ ಶ್ರೀಪಡ್ರೆ ಹೇಳಿದರು.


ಮಳೆಕೊಯ್ಲು ಕಾರ್ಯಾಗಾರದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

Advertisement

ಕೆರೆಗಳಲ್ಲಿ ಕಟ್ಟಡ !
ನೀರು ಮತ್ತು ಮಣ್ಣು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಜನಜೀವನ ಸುಗಮವಾಗಿರಲು 3ರಲ್ಲಿ 1 ಭಾಗದಷ್ಟು ಅರಣ್ಯವಿರಬೇಕು. ಹುಲ್ಲಿನ
ಹಾಸುಗಳಿದ್ದಲ್ಲಿ ಮಣ್ಣಿನ ಸವಕಳಿ ಉಂಟಾಗುವುದಿಲ್ಲ. ಇದನ್ನು ನಾವು ಕಾಪಾಡಿಕೊಂಡು ಬರಬೇಕು. ಇಂದು ರಾಜ್ಯದಲ್ಲಿ ಕೆರೆಗಳಲ್ಲೇ ಕಟ್ಟಡ ಕಟ್ಟುತ್ತಿರುವಂತಹ ಘಟನೆ ಗಳು ನಡೆಯುತ್ತಿರುವುದು ನಮ್ಮ ರಾಜ್ಯದ ದುಸ್ಥಿತಿಗೆ ಕಾರಣ. ಕಾಡು ನಾಶವಾದರೆ ಮಣ್ಣಿನ ಸವಕಳಿ ಉಂಟಾಗುತ್ತದೆ ಎಂದರು.


ನೀರಿನ ಪೋಲು ಸಾಮಾಜಿಕ ಅಪರಾಧ
ನಳ್ಳಿಯಲ್ಲಿ 1 ಸೆಕೆಂಡಿಗೆ ಒಂದು ಹನಿಯಷ್ಟು ನೀರು ಸೋರಿ ಹೋದರೂ ದಿನಕ್ಕೆ 50 ಲೀ. ನೀರು ವ್ಯಯ ವಾಗುತ್ತದೆ. ನೀರನ್ನು ಪೋಲು ಮಾಡುವುದು ಸಾಮಾಜಿಕ ಅಪರಾಧವಾಗಿದ್ದು, ಈ ಬಗ್ಗೆ ಪ್ರತಿ ಯೊಬ್ಬರಲ್ಲೂ ಜಾಗೃತಿ ಮೂಡಬೇಕು ಎಂದರು.

ಹೀಗೊಂದು ಲೆಕ್ಕಾಚಾರ

ವಾರ್ಷಿಕವಾಗಿ 3,500 ಮಿ.ಮೀ. ಮಳೆ ಸುರಿಯು ತ್ತದೆ ಎಂದಾದರೆ 1 ಚ.ಮೀ.
ಮೇಲೆ 3,500 ಲೀ. ನೀರು, ಒಂದು ಎಕರೆ ಜಾಗದ ಮೇಲೆ 1.4 ಕೋ.ಲೀ. ನೀರು ಶೇಖರಣೆ ಮಾಡಲು ಸಾಧ್ಯವಿದೆ. ಆದರೆ ರಾಜ್ಯದಲ್ಲಿ ಬೀಳುವ ಮಳೆಯಲ್ಲಿ 8ರಿಂದ 10 ಶೇ. ನೀರು ಮಾತ್ರ ಭೂಮಿ ಸೇರುತ್ತಿದೆ.ಈ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಿ ನೀರನ್ನು ಉಳಿಸುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು. ಪ್ರತಿ ಯೊಬ್ಬರೂ ತಮ್ಮ ಮನೆ ಯಲ್ಲಿ ನೀರನ್ನು ಶೇಖರಿಸಿ ಡಬೇಕು ಎಂದರು.


ಕಣ್ಮರೆಯಾದ ಮದಗಗಳು
ಮದಗಗಳು ನೀರು ಇಂಗಿಸುವ ಕೆಲಸ ಮಾಡುತ್ತವೆ. ಇವುಗಳ ಪುನರುಜ್ಜೀವನ ಆಗಬೇಕು. ಭತ್ತದ ಬೆಳೆ ಕಣ್ಮರೆಯಾದಂದಿನಿಂದ ಕರಾವಳಿ ಭಾಗದಲ್ಲಿ ಮದಗಗಳ ಸಂಖ್ಯೆಯೂ ಇಳಿಮುಖ ವಾಗುತ್ತಿದೆ ಎಂದರು. ಇದರ ಜತೆಗೆ ಲಭ್ಯವಿರುವಂತಹ ಕೆರೆಗಳಲ್ಲಿ ಹೂಳು ತುಂಬಿದ್ದು ಇವು ಗಳನ್ನು ತೆಗೆಯುವಂತಹ ಕೆಲಸವೂ ಆಗಬೇಕು. ಹರಿಯುವ ನೀರಿಗೆ ಮರಳು ಚೀಲಗಳಿಂದ ಕಟ್ಟಗಳನ್ನು ಮಾಡಬಹುದು. ಇದರಿಂದ 15ರಿಂದ 1 ತಿಂಗಳಿನಷ್ಟು ಕಾಲ ನೀರು ಹೆಚ್ಚುವರಿ ಉಳಿತಾಯ ವಾಗಲು ಸಾಧ್ಯವಾಗುತ್ತದೆ ಎಂದರು.


ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಉದ್ಘಾಟಿಸಿದರು. ಜಿ.ಪಂ. ಸಿಇಒ ಸಿಂಧೂ ಬಿ. ರೂಪೇಶ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ , ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ ಕುಮಾರ್‌, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಜಿ. ವಿಜಯ್‌ ಉಪಸ್ಥಿತರಿದ್ದರು.
ಜಲ ಸಂರಕ್ಷಣ ಆಸಕ್ತರು, ಉಡುಪಿ ನಗರದ ಎಂಜಿಎಂ ಕಾಲೇಜು, ಪೂರ್ಣಪ್ರಜ್ಞ ಕಾಲೇಜು, ಉಪೇಂದ್ರ ಪೈ ಮೆಮೋರಿಯಲ್‌ ಕಾಲೇಜು, ಅಜ್ಜರಕಾಡು ಸರಕಾರಿ ಮಹಿಳಾ ಕಾಲೇಜು, ಶಾರದಾ ರೆಸಿಡೆನ್ಶಿಯಲ್‌ ಸ್ಕೂಲ್‌, ಹಿರಿಯಡಕ ಸರಕಾರಿ ಪದವಿ ಕಾಲೇಜು, ಕರ್ನಾಟಕ ಕಾನೂನು ವಿ.ವಿ., ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡರು.


ನೀರು ಶೇಖರಣೆ ವಿಧಾನಗಳು
1. ರೀಚಾರ್ಜ್‌
2. ಸ್ಟೋರೇಜ್‌
3. ಸ್ಟೋರೇಜ್‌ ಮತ್ತು ರೀಚಾರ್ಜ್‌

ರೂಪುರೇಷೆ ಅಗತ್ಯ
ಅಡ್ಡಬೋರು ಸುರಂಗಗಳು, ಇಂಗುಬಾವಿ, ನೀರಿನ ಎಟಿಎಂ, ಕರಾವಳಿಯ ಮದಗಗಳು, ಕೆರೆಗಳು, ಚೆಕ್‌ ಡ್ಯಾಂಗಳು, ಮಳೆ ಕೊಳಗಳು, ಇಂಗು ಬಾವಿಗಳು, ಸ್ಟೋರೇಜ್‌ ವಾಟರ್‌ ಝೋನ್‌, ಅಡ್ಡ ಬೋರುಗಳಂತಹ ಸಾಕಷ್ಟು ವಿಧಾನಗಳ ಮೂಲಕ ನೀರನ್ನು ದಾಸ್ತಾನು ಇಡಲು ಸಾಧ್ಯವಿದೆ.


ಎಚ್ಚರಿಕೆ ಇರಲಿ
ಲಭ್ಯವಿರುವ ನೀರನ್ನು ಎಚ್ಚರದಿಂದ ಬಳಸಿಕೊಳ್ಳಬೇಕು. ಮಣ್ಣಿನ ಸಾವಯವ ಅಂಶವನ್ನು ಅಧಿಕ ಮಾಡಬೇಕು. ಇಂಗುಗುಂಡಿಗಳನ್ನು ತೋಡುವಾಗ ಆದಷ್ಟು ಎಚ್ಚರಿಕೆ ವಹಿಸಬೇಕು. ಶೌಚಾಲಯ, ಮಣ್ಣಿನ ಗೋಡೆ ಇರುವಲ್ಲಿ ಇಂಗುಗುಂಡಿಗಳನ್ನು ತೋಡ ಬಾರದು. ಶಾಲೆಯ ಕ್ರೀಡಾಂಗಣದಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಿ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಓಡುವ ನೀರನ್ನು ನಡೆಯುವ ಹಾಗೆ ಮಾಡಿ; ನಡೆಯುವ ನೀರನ್ನು ತೆವಳುವ ಹಾಗೆ ಮಾಡಿ; ತೆವಳುವ ನೀರನ್ನು ನಿಲ್ಲಿಸಿ; ನಿಂತ ನೀರನ್ನು ಇಂಗಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ನೀರಿನ ವ್ಯವಹಾರ ಬ್ಯಾಂಕ್‌ನಂತಾಗಿದ್ದು, ನಾವು ಶೇಖರಿಸಿಟ್ಟ ಹಾಗೆ ಉಪಯೋಗ ಮಾಡಬಹುದು. ಚೆನ್ನೈಯಲ್ಲಿ ಮಳೆಕೊಯ್ಲು ಕಡ್ಡಾಯವಾದ ಅನಂತರ ಅಲ್ಲಿನ ಎಲ್ಲ ಬಾವಿಗಳಿಗೆ ಮರುಜೀವ ಬಂದಿದೆ ಎಂದರು.


ನೀರನ್ನು ತುಪ್ಪದ ಹಾಗೆ ಬಳಸಿ
ನೀರನ್ನು ಬಳಕೆ ಮಾಡುವ ಪರಿಯನ್ನು ಪ್ರತಿಯೊಬ್ಬರೂ ಕರಗತ ಮಾಡಿಕೊಳ್ಳಬೇಕು. ಛಾವಣಿಯ ನೀರನ್ನು ಬಾವಿಗೆ ವರ್ಗಾಯಿಸಿದರೆ ಸಾಮಾನ್ಯ ಸ್ಥಿತಿಯಲ್ಲಿ ಬಾವಿ ಬತ್ತುವುದಿಲ್ಲ. ಪ್ರತೀ ಲೀಟರ್‌ ನೀರಿನಲ್ಲಿ ಬ್ರಷ್‌, ಸ್ನಾನ ಮಾಡುವುದನ್ನು ತಿಳಿಯಬೇಕು. ಬಡವರು ಉಪಯೋಗಿಸುವ ತುಪ್ಪದ ರೀತಿಯಲ್ಲಿ ನಾವು ನೀರನ್ನು ಉಪಯೋಗಿಸುವ ಕಲೆ ರೂಢಿಸಿಕೊಳ್ಳಬೇಕು. ಬಿದ್ದ ಮಳೆ ನೀರು ಭೂಮಿಯ ಮೇಲ್ಮೆ„ ಮಣ್ಣನ್ನು ಕೊಚ್ಚಿಕೊಂಡು ಹೋಗುವ ಕಾರಣ ಇದಕ್ಕೆ ಅನುವು ಮಾಡಿಕೊಡಬಾರದು. ಹೂಳು ನೀರಿಂಗಿಸುವವರ ಬಹುದೊಡ್ಡ ಶತ್ರುವಾಗಿದೆ. ತುಂಬಿರುವ ಹೂಳುಗಳನ್ನು ನಿರಂತರ ತೆಗೆದರೆ  ಅನುಕೂಲ.
-ಶ್ರೀಪಡ್ರೆ

ಪ್ರಶ್ನೆ? ಉತ್ತರ?
ಎಸ್‌.ಎಸ್‌.ತೋನ್ಸೆ, ಉಡುಪಿ
ಪ್ರ: ಮಳೆಕೊಯ್ಲು ಕಡ್ಡಾಯ ಎಂದು ಹೇಳಲಾಗುತ್ತಿದೆ. ಕುದ್ರು ಪ್ರದೇಶದವರು ಹೇಗೆ ಮಳೆಕೊಯ್ಲು ಮಾಡಬಹುದು? ಅಲ್ಲಿ ಇಂಗುಗುಂಡಿಯಲ್ಲಿ ನೀರು ನಿಲ್ಲು ವುದಿಲ್ಲ, ಬೇಸಗೆಯಲ್ಲಿ ನೀರು ಉಪ್ಪಾಗುತ್ತದೆ.
ಉ: ಎಲ್ಲ ಕಡೆಗೂ ಇಂಗು ಗುಂಡಿಗಳಲ್ಲ. ನೂರಾರು ಆಯ್ಕೆಗಳಲ್ಲಿ ಅದೂ ಒಂದು.
ಆಯಾ ಪ್ರದೇಶಕ್ಕೆ ಏನು ಬೇಕೋ ಆ ರೀತಿಯಲ್ಲಿಯೇ ಮಾಡಬೇಕು. ಉಪ್ಪು ನೀರು ಇರುವ ಕುದ್ರು ಜಾಗದಲ್ಲಿ ಬೇರೆ ರೀತಿಯಲ್ಲೂ ಟ್ಯಾಂಕ್‌ನಲ್ಲಿ ಸಂಗ್ರಹಿಸಿಡಬಹುದು.

ದೀಪಕ್‌ ಕಾಮತ್‌ ಕಾಂಜರಕಟ್ಟೆ
ಪ್ರ: ಕಲ್ಲುಕೋರೆಗಳು ಕೂಡ ನೀರನ್ನು ಇಂಗಿಸುತ್ತವೆ. ಆದರೆ ಅವನ್ನು ಸರಕಾರ ಮುಚ್ಚಿಸುವುದು ಸರಿಯೆ?
ಉ: ಕಲ್ಲುಕೋರೆಗಳಲ್ಲಿ ನೀರು ನಿಂತರೆ ಯಾರಾದರೂ ಅದಕ್ಕೆ ಬೀಳುವ ಅಪಾಯವಿದೆ ಎಂದು ಅವುಗಳನ್ನು ಮುಚ್ಚಿಸಲಾಗುತ್ತದೆ. ಅಪಾಯ ಸಾಧ್ಯತೆ ಗಮನಿಸಬೇಕು. ಆದರೆ ಮುಚ್ಚಿಸುವುದು ಅವಸರದ ತಪ್ಪು ನಿರ್ಣಯ. ಇವುಗಳ ಮದಗಗಳಂತೆ ನೀರು ಹಿಡಿದಿಟ್ಟುಕೊಳ್ಳುತ್ತವೆ. ಈ ಬಗ್ಗೆ ಮಾಹಿತಿ ನೀಡಬೇಕಾಗಿದೆ.

Advertisement

ನಯನಾ, ಕಾಲೇಜು ವಿದ್ಯಾರ್ಥಿ
ಪ್ರ: ಕೊಳವೆಬಾವಿಯ ಮರುಪೂರಣದಲ್ಲಿ ನೀರು ಶುದ್ಧೀಕರಿಸುವ ಜಾಲರಿಗಳನ್ನು ಕೆಲವರು ಸರಿಯಾಗಿ ಬಳಸುತ್ತಿಲ್ಲ.
ಉ: ಕೊಳವೆಬಾವಿಯ ಮರುಪೂರಣ ಸಂಕೀರ್ಣ ವಿಚಾರ. ಅನುಭವಸ್ಥರಿಂದಲೇ ಮಾಡಿಸಿದರೆ ಉತ್ತಮ. ಇಂಗಿಸುವ ನೀರಿನ ಶುದ್ಧತೆ ಬಗ್ಗೆ ಶೇ.100ರಷ್ಟು ಎಚ್ಚರಿಕೆ ಇರಬೇಕು. ಬೈಂಡಿಂಗ್‌ ಕೂಡ ಸರಿಯಾಗಿರಬೇಕು.

ರವಿಶಂಕರ್‌, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌
ಪ್ರ: ಛಾವಣಿ ನೀರನ್ನು ಬಳಕೆ ಮಾಡುವಾಗ ಸೂಕ್ಷ್ಮಾಣುಜೀವಿಗಳ ಕಡೆ ಗಮನ ಬೇಡವೆ?
ಉ: ಸಾಮಾನ್ಯವಾಗಿ ಬ್ಯಾಕ್ಟೀರಿಯಾ ಇಂಥ ನೀರಿನಲ್ಲಿ ತುಂಬ ಸಮಯ ಉಳಿ ಯುವುದಿಲ್ಲ. ಹೆಚ್ಚಿನವರು ನೀರನ್ನು ಬಿಸಿ ಮಾಡಿ ಬಳಸುತ್ತಾರೆ. ಆದರೂ ನೀರು ಸಂಗ್ರಹ ಪ್ರದೇಶ ಸ್ವತ್ಛವಾಗಿರುವಂತೆ ನೋಡ ಬೇಕು. ನೀರು ಸಂಗ್ರಹಿಸುವಾಗ ಇದ್ದಿಲಿನ ಪದರ ಹಾಕಿದರೆ ಉತ್ತಮ.

ಡೇನಿಯಲ್‌, ಕಾರ್ಕಳ
ಪ್ರ: ಬಂಡೆಕಲ್ಲು ಇರುವ ಬಾವಿಗೂ ಮಳೆ ಕೊಯ್ಲಿನಿಂದ ಪ್ರಯೋಜನವಿದೆಯೇ?
ಉ: ಹೌದು. ಬಂಡೆಕಲ್ಲನ್ನು ಒಡೆಯುವ ಬಗ್ಗೆಯೇ ಯೋಚನೆ ಮಾಡುವ ಬದಲು ಮಳೆಕೊಯ್ಲು ಮಾಡಿದರೆ ನೀರಿನ ಮಟ್ಟ ಹೆಚ್ಚಾಗುತ್ತದೆ.

ಅಚ್ಯುತ ಹೊಳ್ಳ, ಉಡುಪಿ
ಪ್ರ: ನಾಲ್ಕು ಲೇಯರ್‌ನಲ್ಲಿ ಶುದ್ಧೀಕರಣ ಹಂತವನ್ನು ತಿಳಿಸಿಕೊಡಿ.
ಉ: ಬೋಲ್ಡರ್/ ಜಲ್ಲಿ, ಮೇಲೆ ಹೊಯ್ಗೆ, ನಾಲ್ಕು ಪದರಗಳಲ್ಲಿ (ಲೇಯರ್‌) ಶುದ್ಧೀಕರಣ ಮಾಡಬೇಕು. ಆದರೆ ಕಲ್ಲುಗಳ ನಡುವೆಯೂ ಗಾಳಿಯಾಡಲು ಅವಕಾಶ ಬೇಕು. ಸ್ಥಳೀಯ ಸ್ಥಿತಿಯನ್ನು ಗಮನಿಸಿ ಯಾವ ವಿಧಾನ ಸೂಕ್ತ¤ವೆಂದು ನಿರ್ಧರಿಸಬೇಕು.

ಎಸ್‌.ಆರ್‌.ನಾಯಕ್‌, ಉಡುಪಿ
ಪ್ರ: ಒಂದು ಕಡೆ ಮಳೆ ನೀರು ಇಂಗಿದರೆ ಅದು ಭೂಮಿಯೊಳಗೆ ಎಷ್ಟು ದೂರದವರೆಗೆ ಹೋಗುತ್ತದೆ?
ಉ: ಎಲ್ಲೋ ನೀರು ಇಂಗಿಸಿದರೆ ಅದರಿಂದ ನಮಗೆ ಪ್ರಯೋಜನವಾಗದು. ನಮ್ಮ ಪ್ರದೇಶ ದಲ್ಲಿಯೂ ವಾಟರ್‌ ಶೆಡ್‌(ಜಲಾನಯನ) ಪ್ರದೇಶ ಎಂದಿರುತ್ತದೆ. ಆ ಪ್ರದೇಶದಲ್ಲಿ ನೀರಿಂಗಿದರೆ ಮಾತ್ರ ನಮಗೆ ಪ್ರಯೋಜನ.

ಡಾ| ಮುದ್ದಣ್ಣ
ಪ್ರ: ಮಳೆ ನೀರನ್ನು ನೇರವಾಗಿ ಬಾವಿಗೆ ಬಿಟ್ಟು ನೇರವಾಗಿ ಉಪಯೋಗಿಸಬಹುದೆ?
ಉ: ತೊಂದರೆ ಇಲ್ಲ. ಅಂಥ ಅನುಮಾನವಿದ್ದರೆ ಇದ್ದಿಲಿನ ಪದರದ ಮೂಲಕ ಶುದ್ಧೀಕರಿಸಿಕೊಳ್ಳಬಹುದು.

ಐವನ್‌ ಡಿ’ಸೋಜಾ, ಉಡುಪಿ
ಪ್ರ: ಗುಂಡಿಗಳನ್ನು ಮಾಡಿ ನೀರು ಸಂಗ್ರಹಿಸಿದರೆ ಅಲ್ಲಿ ಸೊಳ್ಳೆ ಉತ್ಪತ್ತಿಯಾಗುವುದಿಲ್ಲವೆ?
ಉ: ಶೇಡಿ ಮಣ್ಣು ಇರುವಲ್ಲಿ ನೀರು ಇಂಗುವುದಿಲ್ಲ. ನೀರು ತುಂಬ ದಿನಗಳ ಕಾಲ ನಿಂತರೆ ಮಾತ್ರ ಸೊಳ್ಳೆ ಉತ್ಪತ್ತಿಯಾಗುತ್ತದೆ. ಇಂಗು ಗುಂಡಿಯಲ್ಲಿ ಒಂದು ದಿನದಲ್ಲಿ ನೀರು ಇಂಗದಿದ್ದರೆ ಅದನ್ನು ಮುಚ್ಚಿಬಿಡಿ.

ರಾಜಗೋಪಾಲ್‌, ಉಡುಪಿ
ಪ್ರ: ಸರಳವಾಗಿ ಫಿಲ್ಟರ್‌ ಮಾಡುವ ವಿಧಾನ ಇದೆಯೇ?
ಉ: ಕೆಲವು ಕಂಪೆನಿಗಳ ಫಿಲ್ಟರ್‌ಗಳಿಗೆ ಒಂದೊಂದು ರೀತಿ ಬೆಲೆ ಇದೆ. ಇದರ ವೆಚ್ಚ ಕನಿಷ್ಠ 2,000 ರೂ.ಗಳಿಂದ ಆರಂಭವಾಗುತ್ತದೆ. ಆದರೆ ಅನುಭವಿಗಳಿಂದ ಮಾಹಿತಿ ಪಡೆದು ನೀವೇ ಸರಳ ರೀತಿಯಲ್ಲಿ

ಐಶ್ವರ್ಯಾ, ಧಾರವಾಡ
ಪ್ರ: ನಾವು ಟ್ಯಾಂಕ್‌ನಲ್ಲಿ ಸಂಗ್ರಹಿಸಿಟ್ಟ ಮಳೆ ನೀರಿನಲ್ಲಿ ಹುಳಗಳು ಹುಟ್ಟುತ್ತವೆ. ಅದಕ್ಕೇನು ಪರಿಹಾರ?
: ತೆರೆದ ಟ್ಯಾಂಕ್‌ನಲ್ಲಿ ಮಳೆನೀರು ಸಂಗ್ರಹಿಸ ಬಾರದು. ಮುಚ್ಚಿದ ಟ್ಯಾಂಕ್‌ನಲ್ಲಿ ಸಂಗ್ರಹಿಸಿ.

ಮುರಲೀಧರ ಉಪಾಧ್ಯ
ಪ್ರ: ಕಿಂಡಿ ಅಣೆಕಟ್ಟು ಎಷ್ಟು ಪ್ರಯೋಜನಕಾರಿ?
ಉ: ಇಲ್ಲಿಗೆ ಕಿಂಡಿ ಅಣೆಕಟ್ಟುಗಳು ಸೂಕ್ತವಲ್ಲ. ನದಿಗೆ ಅಡ್ಡಗೋಡೆ ಬಂದ ಕೂಡಲೇ ಸಮಸ್ಯೆ ಉಂಟಾಗುತ್ತದೆ. ಹಲಗೆಗೂ ವೆಚ್ಚ ಮಾಡಬೇಕಾಗುತ್ತದೆ.

ಅನುಪಮಾ ಪಾಟ್ಕರ್‌, ಕುಕ್ಕಿಕಟ್ಟೆ
ಪ್ರ: ನಮ್ಮ ಬಾವಿಯಲ್ಲಿ ಮಾರ್ಚ್‌ನಲ್ಲಿ ನೀರು ಬತ್ತಿ ಹೋಗುತ್ತದೆ. ಈ ಬಾರಿ ಇಂಗುಗುಂಡಿ ಮಾಡಿದ್ದೇವೆ. ಪ್ರಯೋಜನ ವಾಗಬಹುದೆ?
ಉ: ಮುಂದೆ ಪ್ರಯೋಜನವಾಗುತ್ತದೆ. ಅಕ್ಕಪಕ್ಕದವರನ್ನು ಕೂಡ ಇದೇ ರೀತಿ ಮಾಡಲು ಪ್ರೇರೇಪಿಸಿ. ಅವರು ಕೂಡ ಮಾಡಿದರೆ ಹೆಚ್ಚು ಪ್ರಯೋಜನವಿದೆ. ಜಲ ಮಟ್ಟ 1 ಅಡಿ ಮೇಲೆ ಬಂದರೂ ಅನುಕೂಲ.

Advertisement

Udayavani is now on Telegram. Click here to join our channel and stay updated with the latest news.

Next