ಕೂಡಲಸಂಗಮ: ಕೂಡಲಸಂಗಮ ಬಸವ ಧರ್ಮ ಪೀಠದ ಮಹಾಮನೆಯ ಮುಂಭಾಗದಲ್ಲಿ 35ನೇ ಶರಣಮೇಳದ ಅಂಗವಾಗಿ ಸಾಂಕೇತಿಕ ಧ್ವಜಾರೋಹಣವನ್ನು ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ನೆರವೇರಿಸಿದರು. ಆವರಣದಲ್ಲಿದ ಭಕ್ತರು ಸಾಮಾಜಿಕ ಅಂತರದೊಂದಿಗೆ ಧ್ವಜಾರೋಹಣದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ನೇತೃತ್ವದಲ್ಲಿ ಬಸವ ಧರ್ಮ ಪೀಠದ ಜಂಗಮಮೂರ್ತಿಗಳು ಶರಣ ಲೋಕದ ಗಣಲಿಂಗ ದರ್ಶನ ಪಡೆದು ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿಯವರ ಲಿಂಗೈಕ್ಯ ಸ್ಥಳಕ್ಕೆ ಭೇಟಿ ನೀಡಿ ಜ್ಞಾನ ಮಂಟಪದ ಬಸವಣ್ಣ ಪುತ್ಥಳಿಗೆ ನಮಿಸಿದರು.
ಬಸವ ಭಾರತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಕೊಠಡಿಯಲ್ಲಿ ಸಮುದಾಯ ಪ್ರಾರ್ಥನೆ, ವಚನ ಪಠಣ ಕಾರ್ಯಕ್ರಮ ನಡೆಯಿತು. ನಂತರ ಬಸವ ಧರ್ಮ ಮಹಾಜಗದ್ಗುರು ಪೀಠದ 30ನೇ ಪೀಠಾರೋಹಣ ಸಮಾರಂಭ ನಡೆಯಿತು. 30ನೇ ಪೀಠಾರೋಹಣ ಸ್ವೀಕರಿಸಿ ಮಾತನಾಡಿದ ಜಗದ್ಗುರು ಮಾತೆ ಗಂಗಾದೇವಿ, ಲಿಂಗಾಯತ ಧರ್ಮದ ದೇವರು ಲಿಂಗದೇವ. ಬಸವ ಧರ್ಮ ಪೀಠದ ಭಕ್ತರು ಬಸವಣ್ಣನ ವಚನಗಳಿಗೆ ವಚನಾಂಕಿತವಾಗಿ ಕೂಡಲಸಂಗಮದೇವ ಎಂದೇ ಬಳಸಬೇಕು.
ಲಿಂಗಾನಂದ ಸ್ವಾಮೀಜಿ, ಮಾತಾಜಿ ಪರಿಶ್ರಮದಿಂದ ಕಟ್ಟಿ ಬೆಳೆದ ಸಂಸ್ಥೆ ಬಸವ ಧರ್ಮ ಪೀಠ, ಅವರ ಆಶಯಗಳಿಗೆ ಯಾವುದೇ ರೀತಿಯಲ್ಲಿ ದಕ್ಕೆಯಾಗದಂತೆ ಅವರ ಇಚ್ಛೆಯಂತೆ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಕಾರ್ಯವನ್ನು ಮಾಡುತ್ತಿರುವೆನು. ಕೋವಿಡ್ ಅಧಿಕ ಇದ್ದ ಪರಿಣಾಮ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಈ ವರ್ಷದ ಶರಣ ಮೇಳ ರದ್ದು ಪಡಿಸಿ ಸಾಂಕೇತಿಕವಾಗಿ ಸಮುದಾಯ ಪ್ರಾರ್ಥನೆ, ವಚನ ಪಠಣ ಮಾಡಿದ್ದೇವೆ. ಮುಂದಿನ ವರ್ಷ ನಡೆಯುವ 36ನೇ ಶರಣ ಮೇಳವನ್ನು ಸಂಭ್ರಮದಿಂದ ಆಚರಿಸೋಣ.
ಕೋವಿಡ್ ನಿಯಂತ್ರಣಗೊಂಡ ನಂತರ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಕುರಿತು ಚರ್ಚಿಸಿ ಸಮಾವೇಶಗಳನ್ನು ಮಾಡುವುದಾಗಿ ಹೇಳಿದರು. ಕಳೆದ ಮೂರು ವರ್ಷದಿಂದ ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷರಾಗಿ ಬಸವರಾಜ ಧನ್ನೂರ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಇನ್ನೂ ಮುಂದೆಯೂ ಅವರೇ ರಾಷ್ಟ್ರೀಯ ಅಧ್ಯಕ್ಷರಾಗಿ ರಾಷ್ಟ್ರೀಯ ಬಸವ ದಳ ಬೆಳೆಸುವ ಕಾರ್ಯ ಮಾಡುವರು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಬಸವ ಧರ್ಮಿಯರ ಮಹಾಮನೆ ಬಸವ ಧರ್ಮ ಪೀಠವಾಗಿದೆ. ಮಾತಾಜಿಯವರು ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ಮಾಡುವುದಾಗಿ ಹೇಳಿದರು. ಸಮಾರಂಭದಲ್ಲಿ ಬಸವ ಕಲ್ಯಾಣದ ಸಿದ್ಧರಾಮೇಶ್ವರ ಸ್ವಾಮೀಜಿ, ಮಹಾರಾಷ್ಟ್ರ ಅಲ್ಲಮಗಿರಿಯ ಬಸವಕುಮಾರ ಸ್ವಾಮೀಜಿ, ಹೈದ್ರಾಬಾದ ಬಸವ ಮಂಟಪದ ಅನಿಮಿಷಾನಂದ ಸ್ವಾಮೀಜಿ, ಧಾರವಾಡ ಅಕ್ಕಮಹಾದೇವಿ ಅನುಭಾವ ಪೀಠದ ಮಾತೆ ಜ್ಞಾನೇಶ್ವರಿ, ಚಿತ್ರದುರ್ಗ ಬಸವ ಮಂಟಪದ ಮಾತೆ ದಾನೇಶ್ವರಿ, ಮಾತೆ ವಿಜಯಾಂಬಿಕೆ,
ಬೆಂಗಳೂರು ವಿಶ್ವಕಲ್ಯಾಣ ಮಿಷನ್‌ದ ಬಸವಯೋಗಿ ಸ್ವಾಮೀಜಿ ಮುಂತಾದವರು ಇದ್ದರು.