Advertisement

ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಹಣ ಬಳಸಿ

09:20 PM Feb 10, 2020 | Lakshmi GovindaRaj |

ಮೈಸೂರು: ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಮನವಿ ಮಾಡಿದರು. ಸೋಮವಾರ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದಡಿ ಅಲ್ಪಸಂಖ್ಯಾತರ ಅಭಿವೃದ್ಧಿಯ ಸಂಬಂಧ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಪ್ರಸಕ್ತ ಸಾಲಿನ 3ನೇ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

Advertisement

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನದಲ್ಲಿ ಉಳಿದಿರುವ 11 ಲಕ್ಷ ರೂ.ಗಳನ್ನು ಆ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಗ್ರಂಥಾಲಯ ಹಾಗೂ ಇನ್ನಿತರ ಮೂಲ ಸೌಕರ್ಯಗಳಿಗೆ ಬಳಸಿಕೊಳ್ಳಬೇಕು. ಯಾವುದೇ ಅನುದಾನ ವಾಪಸ್ಸಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಕೇವಲ ಒಂದು ಉರ್ದು ಪ್ರೌಢಶಾಲೆಯಿದ್ದು, ವಿದ್ಯಾರ್ಥಿಗಳಿಗೆ ಅದರಲ್ಲೂ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ನಗರದಲ್ಲಿ ಉರ್ದು ಪ್ರೌಢಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮವಹಿಸಲಾಗುವುದು. ಕೆಲವೊಂದು ಶಾಲೆಗಳಲ್ಲಿ ಪೀಠೊಪಕರಣಗಳ ಕೊರತೆಯಿದ್ದು, ಇದರ ಬಗ್ಗೆ ಯೋಚಿಸಲಾಗುವುದು ಎಂದ‌ರು.

ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಾಲಾ ಶಿಕ್ಷಕರು ಬೇಕಾಗಿದ್ದು, ಶಿಕ್ಷಕರ ಕೊರತೆಯಾಗದಂತೆ ಕ್ರಮವಹಿಸಬೇಕು. ನಗರದ ಆರ್ಚ್‌ಗೇಟ್‌ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಕನ್ನಡ ಶಿಕ್ಷಕರ ಕೊರತೆಯಿರುವುದು ಕಂಡು ಬಂದಿದೆ. ಇದರ ಬಗ್ಗೆ ಕ್ರಮವಹಿಸಬೇಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ವಿವಿಧ ಯೋಜನೆಗಳ ಫ‌ಲಾನುಭವಿಗಳ ಆಯ್ಕೆಪಟ್ಟಿ ಎಂಟು ಕ್ಷೇತ್ರಗಳಿಂದ ಬಂದಿದೆ. ಹುಣಸೂರು, ಪಿರಿಯಾಪಟ್ಟಣ ಹಾಗೂ ಕೆ.ಆರ್‌.ನಗರ ಈ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಫ‌ಲಾನುಭವಿಗಳ ಆಯ್ಕೆಯಾಗಬೇಕಿದೆ ಎಂದು ನಿಗಮದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಕಳೆದ ನಾಲ್ಕು ವರ್ಷಗಳಿಂದ ಭಾಗ್ಯಲಕ್ಷ್ಮೀ ಬಾಂಡ್‌ ಸಮರ್ಪಕವಾಗಿ ಪೂರೈಕೆಯಾಗಿರಲಿಲ್ಲ.

Advertisement

ಈಗ ಅದು ಪೂರೈಕೆಯಾಗುತ್ತಿದ್ದು, ತಾಲ್ಲೂಕು ಮಟ್ಟದಲ್ಲಿ ಫ‌ಲಾನುಭವಿಗಳಿಗೆ ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾ ಸಭೆಗೆ ತಿಳಿಸಿದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮುಖಾ¤ರ್‌ ಪಾಷಾ, ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಸಮಿತಿಯ ಸದಸ್ಯರಾದ ಮೊಹಮ್ಮದ್‌ ರಫೀಕ್‌, ರಾಜು ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಉದ್ಯೋಗ ಮೇಳಕ್ಕೆ ಪ್ರಚಾರ ನೀಡಿ: ಮೈಸೂರು, ಮಂಡ್ಯ ಹಾಗೂ ಕೊಡಗು ಜಿಲ್ಲೆಯ ನಿರುದ್ಯೋಗಿ ಅಭ್ಯರ್ಥಿಗಳಿಗಾಗಿ ಫೆ.19 ಮತ್ತು 20 ರಂದು ನಗರದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದ್ದು, ಅಲ್ಪಸಂಖ್ಯಾತ ನಿರುದ್ಯೋಗಿ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವಂತೆ ಈ ಮೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಪ್ರಚಾರ ನೀಡಬೇಕೆಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next