ಹೊಸಪೇಟೆ: ನಮ್ಮ ಸುತ್ತಮುತ್ತ ಸುಳಿದಾಡುವ ಕೋವಿಡ್ ಸೋಂಕಿತರ ಮಾಹಿತಿ ಪಡೆಯಲು ಆರೋಗ್ಯ ಸೇತು ಆ್ಯಪ್ ಪ್ರಯೋಜನಕಾರಿಯಾಗಲಿದ್ದು ಪ್ರತಿಯೊಬ್ಬರು ಆರೋಗ್ಯ ಸೇತು ಆ್ಯಪ್ ಬಳಕೆ ಮಾಡಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಭಾಸ್ಕರ್ ಹೇಳಿದರು.
ಆರೋಗ್ಯ ಇಲಾಖೆ, ತಾಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ ನಗರದ ತಾಲೂಕು ಕಚೇರಿ ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕೋವಿಡ್-19 ನಿಯಂತ್ರಣ ಹಾಗೂ ಆರೋಗ್ಯ ಸೇತು ಆ್ಯಪ್ ಬಳಕೆ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ಸಾರ್ವಜನಿಕರು ಆರೋಗ್ಯ ಸೇತು ಆ್ಯಪ್ ಬಳಸಬೇಕು. ಜೊತೆಗೆ ಆ್ಯಪ್‌ನಲ್ಲಿ ದೂರವಾಣಿ ಸಂಖ್ಯೆ ನಮೂದಿಸಿ ತಾವು ಓಡಾಡುವ ಜಾಗದಲ್ಲಿ ಸೋಂಕಿತರು ಕಾಣಿಸಿಕೊಂಡಲ್ಲಿ ಸಂದೇಶವನ್ನು ರವಾನಿಸುತ್ತದೆ. ಇದರಿಂದ ಎಚ್ಚೆತ್ತುಕೊಂಡು ಸುರಕ್ಷತೆಯಿಂದ ಇರಬಹುದು. ಆದ್ದರಿಂದ ಪ್ರತಿಯೊಬ್ಬರು ಆರೋಗ್ಯ ಸೇತು ಆ್ಯಪ್ ಬಳಸಬೇಕು ಎಲ್ಲರಿಗೂ ಬಳಸಲು ಉತ್ತೇಜನ ನೀಡಬೇಕು ಎಂದು ಆರೋಗ್ಯ ಸಿಬ್ಬಂದಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕೋವಿಡ್-19 ವ್ಯಾಪಕವಾಗಿ ತಡೆಗಟ್ಟುವ ಸಲುವಾಗಿ ತಾಲೂಕು ಆರೋಗ್ಯ ಕೇಂದ್ರದಿಂದ ಗುಂಪುಗಳನ್ನು ರಚಿಸಿದ್ದು, ಈ ಗುಂಪಿನ ಸದಸ್ಯರು ಅನ್ಯ ರಾಜ್ಯದಿಂದ ತಾಲೂಕಿಗೆ ಬಂದ ಪ್ರಯಾಣಿಕರ ಮಾಹಿತಿ ಪಡೆದುಕ್ವಾರಂಟೈನ್ ಸೀಲ್ ಹಾಕಲಾಗುತ್ತದೆ. ಕೋವಿಡ್ ಲಕ್ಷಣ ಕಾಣಿಸಿಕೊಂಡವರ ಸಂಚಾರ ಮಾಹಿತಿ ಪಡೆಯುವಿಕೆ, ಈಕರಸಾ ಸಂಸ್ಥೆಯ ಬಸ್‌ಗಳಲ್ಲಿ ಸಂಚರಿಸಿದವರ ಮಾಹಿತಿ, ಕೋವಿಡ್ ಸೋಂಕಿತರ ಪ್ರಥಮ ಸಂಪರ್ಕಿತರ ಮಾಹಿತಿ ಹಾಗೂ ಪರೀಕ್ಷೆ, ಗರ್ಭಿಣಿಯರ ಪರೀಕ್ಷೆ, ಕ್ಷಯ ರೋಗ, ವಯೋವೃದ್ಧರ ಹಾಗೂ ಕ್ಯಾನ್ಸರ್ ರೋಗಿಗಳ ಮಾಹಿತಿ ಹಾಗೂ ಪರೀಕ್ಷೆಗಳನ್ನು ಗುಂಪುಗಳಾಗಿ ವಿಂಗಡಿಸಿ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಚ್.ವಿಶ್ವನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ.ಜೋಷಿ ಇನ್ನಿತರರಿದ್ದರು.