ಬೆಂಗಳೂರು: ಕಲಾ ಪ್ರಪಂಚವನ್ನು ಬೆಳಸಲು ತಂತ್ರಜ್ಞಾನ ಬಳಸಿಕೊಳ್ಳಬೇಕೇ ಹೊರತು ಅದನ್ನು ಕೊಲ್ಲಲ್ಲು ಅಲ್ಲ ಎಂದು ಕೇಂದ್ರದ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ತಿಳಿಸಿದ್ದಾರೆ.
ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಆರ್ಟ್ ಬಂಧು ಆಯೋಜಿಸಿದ್ದ ಕಲಾಸಭೆ ಹಾಗೂ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಂತ್ರಜ್ಞಾನದ ಮೂಲಕ ಕಲೆಯನ್ನು ಉತ್ಪಾದಿಸಬಹುದು ಎಂಬ ಯೋಜನೆಗಳು ಕಲೆಯನ್ನು ಕೊಲ್ಲುತ್ತವೆಯೇ ಹೊರತು ಬೆಳೆಸುವುದಿಲ್ಲ. ತಂತ್ರಜ್ಞಾನ ಕಲಾ ಮಾರುಕಟ್ಟೆಗೆ ಪೂರಕವಾಗಿರಬೇಕು ಎಂದು ತಿಳಿಸಿದರು.
ಕಲೆಯ ಮಾರಾಟದಿಂದ ಅದರ ಸಂಸ್ಕೃತಿ ನಶಿಸಬಾರದು. ಯಾವುದೇ ಶಾಲೆ ಅಥವಾ ವಿವಿಗಳಲ್ಲಿ ಶಿಕ್ಷಣ ಪಡೆಯದೆ, ವಂಶಪಾರಂಪರ್ಯವಾಗಿ ಕಲೆಯನ್ನೇ ಅವಲಂಬಿಸಿಕೊಂಡು ಬಂದಿರುವ ಕಲಾವಿದರ ಕೌಶಲ್ಯಾಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಬಾಬು ಹಾಗೂ ಆರ್ಟ್ ಬಂಧು ಅಭಿಜಿತ್ ಪ್ರಹ್ಲಾದ್ ಮತ್ತಿತರರು ಉಪಸ್ಥಿತರಿದ್ದರು.
ಟೀಕೆಗೆ ಪ್ರತಿಕ್ರಿಯಿಸಲು ಸಮಯವಿಲ್ಲ: ಕೊಡಗು ಜಿಲ್ಲೆಯ ನೆರೆ ಹಾವಳಿ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಕೊಡಗು ಪುನರ್ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಲಿದೆ. ಸರ್ಕಾರದ ಪ್ರತಿನಿಧಿಯಾಗಿ ರಕ್ಷಣಾ ಸಚಿವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದರು.
ಜಿಲ್ಲೆಯಲ್ಲಿ ಆಗಿರುವ ಹಾನಿ ಬಗ್ಗೆ ರಾಜ್ಯ ಸರ್ಕಾರ ವರದಿ ಸಲ್ಲಿಸಬೇಕು. ಆ ವರದಿ ಪರಿಶೀಲಿಸಿ ಕೇಂದ್ರ ನೆರವು ನೀಡುತ್ತದೆ. ಕೊಡಗು ಸಂತ್ರಸ್ತರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಟೀಕಿಸುವುದನ್ನೇ ಉದ್ಯೋಗ ಮಾಡಿಕೊಂಡಿರುವ ಕಾಂಗ್ರೆಸ್ಸಿಗರ ಮಾತುಗಳಿಗೆ ಉತ್ತರ ನೀಡಲು ನನಗೆ ಸಮಯವಿಲ್ಲ ಎಂದು ತಿರುಗೇಟು ನೀಡಿದರು.