Advertisement

ರೇಷ್ಮೆ ಬೆಳೆಗಾರರು ನರೇಗಾ ಸದ್ಬಳಕೆ ಮಾಡಿಕೊಳ್ಳಿ

01:16 PM Jun 09, 2019 | Suhan S |

ಬಂಗಾರಪೇಟೆ: ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕವಾಗಿ ರೇಷ್ಮೆ ಕೃಷಿ ಅಭಿವೃದ್ಧಿ ಪಡಿಸಿಕೊಳ್ಳಲು ಹಾಗೂ ಸ್ಥಳೀಯ ಕೂಲಿಕಾರ್ಮಿಕರಿಗೆ ಉದ್ಯೋಗ ನೀಡಲು ಬೆಳೆಗಾರರು ಈ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ರೇಷ್ಮೆ ಇಲಾಖೆ ಉಪ ನಿರ್ದೇಶಕ ಎಂ.ಕೆ.ಪ್ರಭಾಕರ್‌ ಸಲಹೆ ನೀಡಿದರು.

Advertisement

ತಾಲೂಕಿನ ಕುಪ್ಪನಹಳ್ಳಿ ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಹಮ್ಮಿಕೊಂಡಿದ್ದ ಕ್ಷೇತ್ರೋತ್ಸವ ಹಾಗೂ ರೇಷ್ಮೆ ಬೆಳೆಗಾರರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2 ಮತ್ತು 3ನೇ ವರ್ಷ ಹಿಪ್ಪುನೇರಳೆ ತೋಟಗಳಿಗೆ ನರೇಗಾ ಯೋಜನೆಯಡಿ ಸೌಲಭ್ಯವಿದ್ದು, ರೈತರು ತಮ್ಮ ತೋಟಗಳಿಗೆ ಹೆಚ್ಚಿನ ರೀತಿಯಲ್ಲಿ ಕೊಟ್ಟಿಗೆ ಗೊಬ್ಬರ ನೀಡಿ ನಿರ್ವಹಣೆ ಮಾಡಿದಲ್ಲಿ ದ್ವಿತಳಿ ರೇಷ್ಮೆ ಗೂಡನ್ನು ಉತ್ಪಾದನೆ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸಬಹುದೆಂದು ಸಲಹೆ ನೀಡಿದರು.

ರೈತರ ಜತೆ ಚರ್ಚೆ:ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿಗಳಾದ ಡಾ.ಹರಿರಾಜು ಮತ್ತು ಡಾ.ಶಿವಶಂಕರ್‌ ಮಾತನಾಡಿ, ಗುಣಮಟ್ಟದ ದ್ವಿತಳಿ ಗೂಡುಗಳನ್ನು ಬೆಳೆಯುವುದರ ಮಹತ್ವ, ಬೆಳೆದ ನಂತರ ಆ ಗೂಡುಗಳನ್ನು ನಿರ್ವಹಣೆ ಮಾಡುವುದು, ಮಾರುಕಟ್ಟೆ ಮಾಡುವ ರೀತಿ, ಗುಣಮಟ್ಟದ ರೇಷ್ಮೆಗೆ ಇರುವ ಬೇಡಿಕೆ, ಅದಕ್ಕೆ ಇಲಾಖೆ ಮತ್ತು ಕೇಂದ್ರ ರೇಷ್ಮೆ ಮಂಡಳಿ ತೆಗೆದುಕೊಂಡಿರುವ ಕ್ರಮಗಳು ಮತ್ತು ದೊರೆಯುವ ಸೌಲಭ್ಯಗಳ ಬಗ್ಗೆ ವಿವರವಾಗಿ ರೈತರೊಂದಿಗೆ ಚರ್ಚೆ ಮಾಡಿದರು.

ರೈತರಿಂದ ಮಾಹಿತಿ: ಕೋಲಾರ ಟಮಕದ ತೋಟಗಾರಿಕಾ ಮಹಾವಿದ್ಯಾಲಯ ಉಪನ್ಯಾಸಕ ಡಾ.ನೂರುಲ್ಲಾ ಮತ್ತು ಡಾ.ಶಶಿಧರ್‌ ಮಾತನಾಡಿ, ಹಿಪ್ಪುನೇರಳೆ ತೋಟಗಳಲ್ಲಿ ಬೇರು ಕೊಳೆ ರೋಗ, ಬೇರು ಗಂಟು ರೋಗ, ಕಾಂಡ ಕೊಳೆ ರೋಗಗಳು ಹೆಚ್ಚಾಗಿ ಕಾಣುತ್ತಿದ್ದು, ಅದರ ನಿಯಂತ್ರಣ ಕ್ರಮಗಳ ಬಗ್ಗೆ ಮತ್ತು ಪೋಷಕಾಂಶಗಳ ನಿರ್ವಹಣೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ವರದಾನ: ಮೈರಾಡ ಸಂಸ್ಥೆಯಿಂದ ಆಗಮಿಸಿದ್ದ ವೆಂಕಟರೆಡ್ಡಿ ಮಾತನಾಡಿ, ರೈತ ಉತ್ಪಾದಕ ಸಂಸ್ಥೆಗಳು, ಅವುಗಳ ಸ್ಥಾಪನೆ ಮಾಡುವ ವಿಧಾನ ಮತ್ತು ಉದ್ದೇಶ, ಅದರಿಂದ ರೈತರಿಗೆ ಆಗುವ ಉಪಯೋಗಗಳು, ಸಿಗುವ ಸೌಲಭ್ಯಗಳ ಬಗ್ಗೆ ವರವಾಗಿದೆ ಎಂದು ಹೇಳಿದರು

Advertisement

ನಿರ್ವಹಣೆ ಮಾಡಿ: ನೆಟಾಫಿಮ್‌ ಕಂಪನಿ ತಜ್ಞರಾದ ಆಂಜಿನಪ್ಪ ಮಾತನಾಡಿ, ಹನಿನೀರಾವರಿ ಅಳವಡಿಕೆ ವಿಧಾನಗಳು, ಅವುಗಳ ನಿರ್ವಹಣೆ ಮಾಡುವ ವಿಧಾನ, ರೈತರು ಮಾಡುವ ಅನೇಕ ತಪ್ಪುಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು, ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದಲ್ಲಿ ಬಹಳ ವರ್ಷಗಳು ಬಾಳಿಕೆ ಬರುವುದೆಂದು ರೈತರಿಗೆ ಸಲಹೆ ನೀಡಿದರು.

ಕ್ಲಸ್ಟರ್‌ ವಿಜ್ಞಾನಿಗಳಾದ ಡಾ.ಮೋರಿಸನ್‌ ಮಾತನಾಡಿ, ಇತ್ತೀಚೆಗೆ ಅತಿ ಹೆಚ್ಚಿನ ಶೀತಾಂಶ ಮತ್ತು ವಾತಾವರಣದಲ್ಲಿನ ಏರುಪೇರುಗಳಿಂದ ದ್ವಿತಳಿ ಬೆಳೆಗಳಿಗೆ ತೊಂದರೆ ಆಗುತ್ತಿದ್ದು, ರೈತರು ತಮ್ಮ ಮನೆಗಳಲ್ಲಿ ಚೆನ್ನಾಗಿ ಗಾಳಿ ಬಿಡುವುದು, ತೆಳುವಾಗಿಡುವುದು, ಸುಣ್ಣ ಹೆಚ್ಚಾಗಿ ಬಳಕೆ ಮಾಡುವುದು, ಗುಣಮಟ್ಟದ ಸೊಪ್ಪು ನೀಡುವ ಬಗ್ಗೆ ಸಲಹೆ ನೀಡಿದರು.

ಭಾಗವಹಿಸಿ: ರೇಷ್ಮೆ ಸಹಾಯಕ ನಿರ್ದೇಶಕ ಶ್ರೀನಿವಾಸ ಮಾತನಾಡಿ, ಪ್ರತಿಯೊಬ್ಬ ರೈತ ಕಾರ್ಯಕ್ರಮದಲ್ಲಿ ಸಕಾಲಕ್ಕೆ ಹಾಜರಾದ್ರೆ ತಜ್ಞರು ನೀಡುವ ಮಾಹಿತಿ ಪಡೆದು, ತಾವು ಉತ್ತಮ ಬೆಳೆ ಬೆಳೆಯುವ ಮೂಲಕ ಖರ್ಚಿನಲ್ಲಿ ಹೆಚ್ಚು ಲಾಭಗಳಿಸಬಹುದೆಂದು ಕಿವಿಮಾತು ಹೇಳಿದರು. ರೇಷ್ಮೆ ವಿಸ್ತರಣಾಧಿಕಾರಿಗಳಾದ ಜಯ ಶ್ರೀನಿವಾಸಲು, ಜಿ.ಶ್ರೀನಿವಾಸ, ಕೇಂದ್ರ ಮತ್ತು ರೇಷ್ಮೆ ಇಲಾಖೆ ಸಿಬ್ಬಂದಿ, 170ಕ್ಕೂ ಹೆಚ್ಚಿನ ರೈತರು, ಚಾಕಿ ಕೇಂದ್ರದ ಮಾಲಿಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next