Advertisement

ಇಳುವರಿ ಹೆಚ್ಚಳದ ತಂತ್ರಜ್ಞಾನ ಬಳಸಿ: ಉಷಾರಾಣಿ

09:35 PM Jun 18, 2019 | sudhir |

ಕಾಸರಗೋಡು: ಮಾರುಕಟ್ಟೆಯಲ್ಲಿ ತೆಂಗಿನ ಕಾಯಿಯ ಬೆಲೆ ಏರಿಳಿತದಿಂದ ತೊಂದರೆ ಅನುಭವಿಸುತ್ತಿರುವ ತೆಂಗು ಬೆಳೆಗಾರರು ಈ ಸಮಸ್ಯೆಯನ್ನು ಪರಿಹರಿಸಲು ಇಳುವರಿ ಹೆಚ್ಚಳದ ತಂತ್ರಜ್ಞಾನವನ್ನು ಬಳಸಿ ಕೊಳ್ಳಬೇಕೆಂದು ತೆಂಗು ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಉಷಾರಾಣಿ ಹೇಳಿದರು.

Advertisement

ಅವರು ಕಾಸರಗೋಡಿನ ಕೇಂದ್ರ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ)ಯಲ್ಲಿ ತೆಂಗು ಅಭಿವೃದ್ಧಿ ಮಂಡಳಿಯ ಅಧಿಕಾರಿಗಳಿಗಾಗಿ ನಡೆಸಿದ ತೆಂಗು ಬೆಳೆಯಲ್ಲಿ ಸುಧಾರಿತ ತಂತ್ರಜ್ಞಾನ ಎಂಬ ಪುನಶ್ಚೇತನ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ತೆಂಗು ಬೆಳೆಗಾರರು ಆಧುನಿಕ ತಂತ್ರಜ್ಞಾನ ಬಳಸಿ ಉತ್ಪಾದನೆ ಮತ್ತು ಆದಾಯವನ್ನು ಹೆಚ್ಚಿಸಿ ಕೊಳ್ಳಬೇಕು. ತೆಂಗು ಸಣ್ಣ ಹಿಡುವಳಿದಾರರ ಬೆಳೆಯಾಗಿರುವುದರಿಂದ ರೈತ ಆಧಾರಿತ ತಂತ್ರಜ್ಞಾನ ವರ್ಗಾವಣೆ ಉಪಕ್ರಮಗಳ ಆಯೋಜನೆ ಅಗತ್ಯವಿದೆ. ತೆಂಗಿನ ಕೃಷಿಯಿಂದ ಆದಾಯವನ್ನು ಹೆಚ್ಚಿಸುವ ತಂತ್ರಜ್ಞಾನ ಪ್ರದರ್ಶಿಸಲು ಮತ್ತು ಸುಧಾರಿತ (ಹೈಬ್ರಿಡ್‌) ತಳಿಯ ತೆಂಗಿನ ಕಾಯಿ ಸಸಿ ಉತ್ಪಾದನೆಯನ್ನು ಹೆಚ್ಚಿಸಲು ದೇಶದ ವಿವಿಧ ಭಾಗಗಳಲ್ಲಿರುವ ಸಿಡಿಬಿ ಅಡಿಯಲ್ಲಿ ಪ್ರದರ್ಶನ ಹಾಗೂ ಸುಧಾರಿತ ತಳಿಯ ಬೀಜ ಸಸಿ ಉತ್ಪಾದನಾ ಫಾರ್ಮ್ಗಳನ್ನು (ಡಿಎಸ್‌ಪಿ ಫಾರ್ಮ್) ಸಜ್ಜುಗೊಳಿಸಲು ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು ಎಂದರು.

ತರಬೇತಿಯಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರಗಳನ್ನು ಅವರು ವಿತರಿಸಿದರು. ಅವರು ಸಿಪಿಸಿಆರ್‌ಐನಲ್ಲಿ ವಿವಿಧ ಪ್ರಯೋಗಾಲಯ ಘಟಕಗಳಿಗೆ ಭೇಟಿ ನೀಡಿದರು. ಸಿಡಿಬಿಯ ಆರ್ಥಿಕ ನೆರವಿನೊಂದಿಗೆ ಸಂಸ್ಥೆಯಲ್ಲಿ ನಡೆಯುತ್ತಿರುವ ಸಂಶೋಧನಾ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದರು. ಸಿಡಿಬಿಯಿಂದ ಭವಿಷ್ಯದಲ್ಲಿ ಕೈಗೊಳ್ಳಬಹುದಾದ ತೆಂಗು ಕೃಷಿ ವಿಸ್ತರಣೆ, ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಿದರು.

ತೆಂಗಿನ ಕಾಯಿಯಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವುದು, ಗುಣಮಟ್ಟದ ಸಸಿ ನಾಟಿ ಮತ್ತು ಇಳುವರಿ ಹೆಚ್ಚಳದ ತಂತ್ರಗಳು ಎಂಬ ತರಬೇತಿ ಕೈಪಿಡಿಯನ್ನು ಅವರು ಬಿಡುಗಡೆಗೊಳಿಸಿದರು. ಸಿಪಿಸಿಆರ್‌ಐ ಐಸಿಎಆರ್‌ನ ಪ್ರಭಾರ ನಿರ್ದೇ ಶಕ ಡಾ| ಕೆ. ಮುರಳೀಧರನ್‌ ಅಧ್ಯಕ್ಷತೆ ವಹಿಸಿದ್ದರು.

Advertisement

ವಿಜ್ಞಾನಿ ಡಾ| ತಂಬಾನ್‌ ಸಿ. ತರಬೇತಿ ಕಾರ್ಯಕ್ರಮದ ವರದಿ ಮಂಡಿಸಿದರು. ವಿಜ್ಞಾನಿ ಡಾ| ಶಂಸುದ್ದೀನ್‌ ವಂದಿಸಿದರು. ತೆಂಗಿನಕಾಯಿ ಅಭಿವೃದ್ಧಿ ಮಂಡಳಿ, ಸುಧಾರಿತ ತೆಂಗು ಸಸಿ ಅಭಿವೃದ್ಧಿ ಕೇಂದ್ರದ 20 ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next