Advertisement

ನೀರಿಲ್ಲದೇ ಶೌಚಾಲಯ ಬಳಕೆ ಬಂದ್‌

03:14 PM May 20, 2019 | pallavi |

ಹಾವೇರಿ: ಜಿಲ್ಲೆಯನ್ನು ಸಂಪೂರ್ಣವಾಗಿ ಬಯಲು ಬಹಿರ್ದೆಸೆ ಮುಕ್ತಗೊಳಿಸಿ ರಾಜ್ಯ ಪರಿಸರ ಇಲಾಖೆಯಿಂದ ‘ಪರಿಸರ ಪ್ರಶಸ್ತಿ’ ಪಡೆದ ಜಿಲ್ಲಾಡಳಿತದ ಸಾಧನೆಗೆ ಬರಗಾಲ ಕಪ್ಪುಚುಕ್ಕೆ ತಂದೊಂಡಿದೆ.

Advertisement

ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಎಲ್ಲೆಡೆ ನೀರಿಗಾಗಿ ಹಾಹಾಕಾರ ಎದ್ದಿದೆ. ನೀರಿನ ಕೊರತೆ ಕಾರಣದಿಂದ ಶೌಚಾಲಯಗಳು ಸಮರ್ಪಕ ಬಳಕೆಯಾಗುತ್ತಿಲ್ಲ. ಶೌಚಾಲಯದಲ್ಲಿ ಶೌಚ ಮಾಡಿದರೆ ಹೆಚ್ಚು ನೀರು ಬೇಕಾಗುತ್ತದೆ ಎಂಬ ಕಾರಣಕ್ಕೆ ಜನರು ಮತ್ತೆ ಬಯಲು ಬಹಿರ್ದೆಸೆಗೆ ಮುಂದಾಗಿದ್ದಾರೆ. ಇದರಿಂದ ಜಿಲ್ಲಾಡಳಿತದ ಬಯಲು ಬಹಿರ್ದೆಸೆ ಮುಕ್ತ ಸಾಧನೆಗೂ ಧಕ್ಕೆಯಾಗಿದೆ.

ಹಳ್ಳಿಗಳಲ್ಲಿ ಬೆಳಗಿನ ಸಮಯದಲ್ಲಿ ಬಹುತೇಕ ಗಂಡಸರು ಚೆಂಬು ಹಿಡಿದು ಹೊಲ, ಗದ್ದೆ, ಕೆರೆ, ಬಯಲು ಹುಡುಕಿಕೊಂಡು ಸಾಗಿದರೆ, ಸಂಜೆ ಕತ್ತಲು ಕವಿಯುತ್ತಿದ್ದಂತೆ ಮಹಿಳೆಯರು ಚೆಂಬು ಹಿಡಿದು ಸಾಗುತ್ತಾರೆ. ರಾತ್ರಿ ವೇಳೆಯಂತೂ ರಸ್ತೆಯಂಚುಗಳಲ್ಲಿ ಹತ್ತಾರು ಮಹಿಳೆಯರು ಚೆಂಬು ಹಿಡಿದು ಕುಳಿತುಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ.

ಈ ಹಿಂದೆ ಜಿಲ್ಲೆಯನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾಡಳಿತ ಆಂದೋಲನವೇ ಹಮ್ಮಿಕೊಂಡಿತ್ತು. ಪಟ್ಟಣ ಪ್ರದೇಶದಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಎಲ್ಲ ಸಿಬ್ಬಂದಿಗಳನ್ನು ಶೌಚಾಲಯ ನಿರ್ಮಾಣ ಹಾಗೂ ಜಾಗೃತಿಗಾಗಿ ನಿಯೋಜಿಸಿತ್ತು. ಇನ್ನು ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾ ಪಂಚಾಯಿತಿ ಗ್ರಾಪಂನ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಎಲ್ಲ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಸೇರಿದಂತೆ ಎಲ್ಲರನ್ನೂ ಈ ಆಂದೋಲನದಲ್ಲಿ ಬಳಸಿಕೊಂಡಿತ್ತು. ಹಾಗೂ ಜನರನ್ನು ಹತ್ತು ಹಲವು ರೀತಿಯಲ್ಲಿ ಮನವೊಲಿಸಿ ಮನೆಗೊಂದು ಶೌಚಾಲಯ ಕಟ್ಟಿಕೊಳ್ಳುವಂತೆ ಮಾಡಿತ್ತು. ಜಿಲ್ಲಾಡಳಿತದ ಈ ಕ್ರಮದಿಂದ ಜನ ಬಹಿರ್ದೆಸೆಗೆ ಬಯಲಿಗೆ ಹೋಗುವುದನ್ನು ಬಿಟ್ಟು ಶೌಚಾಲಯ ಕೋಣೆಯತ್ತ ಹೊರಟಿದ್ದರು. ಈಗ ನೀರಿನ ಸಮಸ್ಯೆಯಿಂದಾಗಿ ಮತ್ತೆ ಬಯಲಿನತ್ತ ಹೊರಟಿದ್ದಾರೆ.

1.95 ಲಕ್ಷ ಶೌಚಾಲಯ: 2012ರ ಬೇಸ್‌ಲೈನ್‌ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 1,95,974 ಕುಟುಂಬಗಳಿದ್ದು ಇವುಗಳಲ್ಲಿ ಈ ವರೆಗೆ 1,95,974 ಕುಟುಂಬಗಳು ಶೌಚಾಲಯ ಹೊಂದುವ ಮೂಲಕ ಶೌಚಾಲಯ ನಿರ್ಮಾಣದಲ್ಲಿ ನೂರಕ್ಕೆ ನೂರರಷ್ಟು ಸಾಧನೆಯಾಗಿದೆ. ಸಮೀಕ್ಷೆ ಮೊದಲು ಜಿಲ್ಲೆಯಲ್ಲಿ 63548 ಕುಟುಂಬಗಳು ಮಾತ್ರ ಶೌಚಾಲಯ ಹೊಂದಿದ್ದವು. ಈವರೆಗೆ ಹೊಸದಾಗಿ ಜಿಲ್ಲೆಯಲ್ಲಿ 1,32,426 ಶೌಚಾಲಯಗಳನ್ನು ಕಟ್ಟಲಾಗಿದ್ದು ಎಲ್ಲ ಕುಟುಂಬಗಳು ಈಗ ಶೌಚಾಲಯ ಹೊಂದಿದಂತಾಗಿದೆ. ಆದರೆ, ಬರಗಾಲದ ಈ ಸಂದರ್ಭದಲ್ಲಿ ಬಳಕೆ ಮರೀಚಿಕೆಯಾಗಿರುವುದು ವಿಪರ್ಯಾಸ.

Advertisement

ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 2.96ಲಕ್ಷ ಕುಟುಂಬಗಳಿದ್ದು 1.10ಲಕ್ಷ ಕುಟುಂಬಗಳು ಮಾತ್ರ ಶೌಚಾಲಯ ಹೊಂದಿದ್ದಾರೆ. ಈ ಒಂದು ಲಕ್ಷ ಕುಟುಂಬಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಜನರು ಈಗ ಶೌಚಖಾನೆ ಬಿಟ್ಟು ಬಯಲು ಬಹಿರ್ದೆಸೆಗೆ ಹೊರಟ್ಟಿದ್ದಾರೆ.

ಹಾವೇರಿ: ನೀರಿನ ಕೊರತೆ ಕಾರಣದಿಂದ ಬಳಕೆಯಾಗದ ಶೌಚಾಲಯ. ಕೃಷಿ ಉಪಕರಣ, ಮೇವಿಡಲು ಬಳಕೆ
ಸರ್ಕಾರದ ವಿವಿಧ ಯೋಜನೆಗಳ ಸಹಾಯಧನದಲ್ಲಿ ಕಟ್ಟಿಕೊಂಡಿರುವ ಶೌಚಖಾನೆಗಳು ಈಗ ಕಟ್ಟಿಗೆ, ಹಾಳಾದ ಸಾಮಗ್ರಿ ಇಡುವ ಕೊಠಡಿಗಳಾಗಿ ಮಾರ್ಪಟ್ಟಿವೆ. ಇನ್ನು ಕೆಲವರು ಈ ಶೌಚಖಾನೆಗಳನ್ನು ಕೃಷಿ ಯಂತ್ರೋಪಕರಣಗಳನ್ನು ಇಡಲು, ದನಕರು ಮೇವು ಇಡಲು ಬಳಸುತ್ತಿದ್ದಾರೆ. ಬೇಸಿಗೆಯ ಈ ದಿನಗಳಲ್ಲಿ ಕುಡಿಯುವ ನೀರು ಸಿಗುವುದೇ ಕಷ್ಟವಾಗಿರುವಾಗಿ ಶೌಚಖಾನೆಗೆ ಹಾಕಲು ನೀರು ಎಲ್ಲಿಂದ ಸಿಗಬೇಕು ಎಂಬ ಪ್ರಶ್ನೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬಳಿ ಉತ್ತರ ಇಲ್ಲದಂತಾಗಿದೆ.

ನೀರಿನ ಸಮಸ್ಯೆ ಭಾಳ ಐತ್ರಿ. ಶೌಚಖಾನಿಗೆ ಹೋದ್ರ ಭಾಳ ನೀರು ಹಾಕಬೇಕ್ರಿ. ಇಲ್ಲಾಂದ್ರ ಒಣಗಿ ಮನೆ ಅಂಗಳ, ಹಿತ್ಲಾಗೆಲ್ಲ ವಾಸ್ನಿ ಬರತೈತ್ರಿ. ಅದಕ್ಕಾಗಿ ನಾವು ಚೆರಿಗೆ ತಗೊಂಡು ಹೊರಗ ಹೋಗ್ತೀವ್ರಿ.

•ಕಳಸೂರು ಗ್ರಾಮದ ಮಹಿಳೆ.

ಸದ್ಯ ಬಹುತೇಕ ಕಡೆಗಳಲ್ಲಿ ನೀರಿನ ಕೊರತೆ ಇರುವುದರಿಂದ ಹಳ್ಳಿಗಳಲ್ಲಿ ಬಯಲು ಬಹಿರ್ದೆಸೆ ಶುರುವಾಗಿದೆ. ಕುಡಿಯಲು, ಮನೆ ಬಳಕೆಗೆ ಸರಿಯಾಗಿ ನೀರು ಸಿಗುತ್ತಿಲ್ಲ. ಶೌಚಖಾನೆಗೆ ಹಾಕಲು ಸಾಕಷ್ಟು ನೀರು ಸಿಗುತ್ತಿಲ್ಲ. ಮನೆಬಳಕೆಗೆ ಸಿಗುವ ಕೊಳವೆಬಾವಿ ನೀರು ಲಭ್ಯವಿರುವ ಪ್ರದೇಶದಲ್ಲಾದರೂ ಶೌಚಾಲಯ ಬಳಸಿ ಎಂದು ಸಲಹೆ ನೀಡಲಾಗುತ್ತಿದೆ.

•ಬಿ. ಗೋವಿಂದರಾಜ್‌, ಜಿಲ್ಲಾ ಸಮಾಲೋಚಕರು, ಸ್ವಚ್ಛಭಾರತ್‌ ಮಿಷನ್‌

ಎಚ್.ಕೆ. ನಟರಾಜ
Advertisement

Udayavani is now on Telegram. Click here to join our channel and stay updated with the latest news.

Next