Advertisement

ಸಮಯದ ಸದುಪಯೋಗ

01:03 AM Apr 27, 2021 | Team Udayavani |

ಸಮಯ; ಇದನ್ನು ನೀವು ಕ್ಷಣ, ಗಳಿಗೆ, ಗಂಟೆ, ದಿನ, ತಿಂಗಳು, ವರ್ಷ ಅಥವಾ ಕಾಲ..ಹೀಗೆ ಯಾವ ಶಬ್ದಗಳ ಲ್ಲಾದರೂ ಕರೆಯಿರಿ. ಪ್ರತಿಯೊಂದಕ್ಕೂ ಅದರದ್ದೇ ಆದ ನಿರ್ದಿಷ್ಟ, ನಿಗದಿತ ಅವಧಿ ಇದೆ. ಈ ಅವಧಿಯನ್ನು ನೀವು ಎಷ್ಟು ಸದುಪಯೋಗಪಡಿಸಿಕೊಳ್ಳುತ್ತೀರಿ ಎಂಬುದು ಮುಖ್ಯ.

Advertisement

ಹಲವು ವರ್ಷಗಳ ಹಿಂದಿನ ಕಥೆ ಯಿದು. ಕಾಶಿಯಲ್ಲಿ ಶತಶತಮಾನಗಳ ಹಿಂದೆ ಪ್ರಜೆಗಳಲ್ಲಿ ಯಾರು ಬೇಕಿದ್ದರೂ ರಾಜನಾಗುವುದಕ್ಕೆ ಅವಕಾಶ ಇತ್ತು. ಹಾಗೆ ರಾಜನಾಗುವವರ ಅಧಿಕಾರಾವಧಿ ಐದು ವರ್ಷಗಳು. ಹೀಗೆ ರಾಜನಾಗಿ ಮೆರೆದವನ ಅಧಿಕಾರಾವಧಿ ಮುಗಿದ ತತ್‌ಕ್ಷಣವೇ ನದಿಯ ಆಚೆ ದಡದಲ್ಲಿರುವ ಭೀಕರವಾದ ಕಾಡಿನಲ್ಲಿ ಬಿಟ್ಟುಬರಲಾಗುತ್ತಿತ್ತು. ಕಾಡಿನ ಕ್ರೂರಪ್ರಾಣಿಗಳ ಬಾಯಿಗೆ ಸಿಲುಕಿ, ಅವನು ಪ್ರಾಣಬಿಡುತ್ತಿದ್ದನು. ಐದು ವರ್ಷಗಳ ಅಧಿಕಾರಾವಧಿಯ ಬಳಿಕದ ಕ್ರೂರ ವಾಸ್ತವದ ಅರಿವಿದ್ದೂ ಹಲವು ಜನರು ಐದು ವರ್ಷಗಳ ಸುಖವನ್ನು ಹಂಬಲಿಸಿ ರಾಜರಾಗುತ್ತಿದ್ದರು. ತಮ್ಮ ಅಧಿಕಾರ ಮುಗಿದೊಡನೆಯೇ ತಮ್ಮನ್ನು ಬಿಟ್ಟು ಬಿಡುವಂತೆ ಗೋಳಾಡುತ್ತಿದ್ದರು. ಆದರೆ ಹಿಂದಿನ ಕ್ಷಣದವರೆಗೂ ಆಜ್ಞಾ ಪಾಲಕರಾಗಿದ್ದವರು ಈಗ ರಾಜರಲ್ಲ ದವರ ಮಾತನ್ನು ಕೇಳಲು ಸರ್ವಥಾ ಸಿದ್ಧರಿರಲಿಲ್ಲ. ಸ್ವಲ್ಪವೂ ದಯೆತೋರದೆ ನದಿಯಾಚೆಗಿನ ಅರಣ್ಯಕ್ಕೆ ಎಸೆದು ಬರು ತ್ತಿದ್ದರು. ಕಾಲ ಹೀಗೆಯೇ ಸಾಗುತ್ತಿತ್ತು.

ಸಾಮಾನ್ಯ ಪ್ರಜೆಯಾಗಿದ್ದ ಒಬ್ಬ ವ್ಯಕ್ತಿ ರಾಜನಾದ. ಐದು ವರ್ಷಗಳು ಕಳೆದು ಹೋದವು. ಆತನೀಗ ರಾಜನಲ್ಲ. ಎಲ್ಲವನ್ನೂ ತ್ಯಜಿಸಿ, ಆಚೆ ತೀರದ ದುರ್ಗಮ ಕಾಡಿಗೆ ತೆರಳಬೇಕು. ಹಿಂದಿನ ರಾಜರುಗಳಂತೆ ಈತನನ್ನು ಒತ್ತಾಯಪೂರ್ವಕವಾಗಿ ಎಳೆದುತರುವ ಸಂದರ್ಭ ಬರಲಿಲ್ಲ. ಮುಗುಳ್ನಗುತ್ತಾ ಈತನಾಗಿಯೇ ನದಿ ತೀರಕ್ಕೆ ನಡೆದುಬಂದ. ಆತನನ್ನು ನದಿಯ ಇನ್ನೊಂದು ದಡಕ್ಕೆ ಸಾಗಿಸುವ ದೋಣಿ ಸಿದ್ಧವಾಗಿ ನಿಂತಿತ್ತು. ತನ್ನ ಮಂತ್ರಿಗಳು, ಸೇವಕರು, ಪ್ರಜೆಗಳತ್ತ ನಗುನಗುತ್ತಲೇ ಕೈಬೀಸಿದ ಆತ ನಿರಾಳನಾಗಿ ದೋಣಿಯಲ್ಲಿ ಕುಳಿತು, ದೋಣಿ ನಡೆಸಲು ಅಂಬಿಗನಿಗೆ ಸೂಚಿಸಿದ. ನನ್ನನ್ನು ಬಿಟ್ಟುಬಿಡಿ. ಭಿಕ್ಷೆ ಬೇಡಿಯಾದರೂ ಬದುಕುತ್ತೇನೆ.

ಇನ್ನು ರಾಜನಾಗಲು ಬಯಸುವುದಿಲ್ಲ ಎಂದು ಗೋಳಾಡುತ್ತಿದ್ದ ಮಾಜಿ ರಾಜರುಗಳನ್ನೇ ಇದುವರೆಗೂ ಕಂಡಿದ್ದ ವಯೋವೃದ್ಧ ಅಂಬಿಗನಿಗೆ ಈತನ ವರ್ತನೆ ಅಚ್ಚರಿ ಹುಟ್ಟಿಸಿತ್ತು. ದೋಣಿ ಸಾಗುತ್ತಿದ್ದಂತೆ ಆತನ ನಿರಾಳತೆಗೆ ಕಾರಣ ತಿಳಿದುಕೊಳ್ಳುವ ಪ್ರಯತ್ನ ಮಾಡಿದ. ಮಾಜಿ ರಾಜ ನಿರಾಳತೆ ಯಿಂದಲೇ ಹೇಳುತ್ತಾ ಹೋದ- ಮಾಜಿ ರಾಜನನ್ನು ಆಚೆ ದಡಕ್ಕೆ ಸಾಗಿಸಲು ಐದು ವರ್ಷಗಳಿಗೊಮ್ಮೆ ದೋಣಿ ಚಲಾಯಿ ಸುವ ನೀನು ಈ ಐದು ವರ್ಷಗಳಲ್ಲಿ ಆಚೆ ತೀರವನ್ನು ಗಮನಿಸಿಯೇ ಇಲ್ಲವೆಂದು ಕಾಣುತ್ತದೆ, ಇರಲಿ. ನಾನೇ ಹೇಳುತ್ತೇನೆ. ನಾನು ರಾಜನಾದ ಮೊದಲ ವರ್ಷ ಆ ದುರ್ಗಮ ಕಾಡಿಗೆ ಬೇಟೆಗಾರರನ್ನು ಕಳುಹಿಸಿಕೊಟ್ಟು, ಅಲ್ಲಿದ್ದ ಕ್ರೂರ ಪ್ರಾಣಿಗಳನ್ನೆಲ್ಲ ನಾಶಪಡಿಸಿದೆ. ಎರಡನೇ ವರ್ಷ ಮರ ಕಡಿಯುವವರ ಮೂಲಕ ಕಾಡನ್ನು ಬಯಲಾಗಿಸಿದೆ. ಮೂರನೇ ವರ್ಷದಲ್ಲಿ ಶಿಲ್ಪಿಗಳನ್ನು ಅಲ್ಲಿಗೆ ಕಳುಹಿಸಿಕೊಟ್ಟೆ. ಭವ್ಯ ವಾದ ಅರಮನೆಯ ನಿರ್ಮಾಣವಾ ಯಿತು. ಕೋಟೆ – ಕೊತ್ತಲಗಳನ್ನು ನಿರ್ಮಿಸಿ ರಕ್ಷಣ ವ್ಯವಸ್ಥೆ ಬಲಪಡಿಸುವಷ್ಟರಲ್ಲಿ ನಾಲ್ಕನೆಯ ವರ್ಷವೂ ಕಳೆದು ಹೋಯಿತು. ಮರು ವರ್ಷವೇ ನನ್ನ ಪರಿವಾರದವರನ್ನು, ಒಂದಷ್ಟು ಪ್ರಜೆಗಳನ್ನು ಕಳುಹಿಸಿ ಕೊಟ್ಟೆ. ರಾಜ ಪದವಿಯನ್ನು ತ್ಯಜಿಸಿರುವ ನಾನು ಇದೀಗ ನಾನೇ ಸೃಷ್ಟಿಸಿರುವ ರಾಜ್ಯವನ್ನು ಆಳಲು ತಯಾರಾಗಿದ್ದೇನೆ. ಮಾಜಿ ರಾಜನ ಈ ಮಾತು ಮುಗಿಯುವಷ್ಟರಲ್ಲಿ ದೋಣಿಯು ನದಿಯ ಆಚೆ ದಡವನ್ನು ತಲುಪಿಯಾಗಿತ್ತು. ತಮ್ಮನ್ನಾಳುವವನ ಸ್ವಾಗತಕ್ಕೆ ಸಿದ್ಧ ರಾಗಿ ನಿಂತಿದ್ದ ಪ್ರಜೆಗಳೆಲ್ಲ ರಾಜನನ್ನು ಕಂಡು ಸಂತಸದಿಂದ ಜಯ ಘೋಷ ಮಾಡತೊಡಗಿದರು. ದೋಣಿಯಿಂದಿಳಿದ ರಾಜ ನಗುನಗುತ್ತಲೇ ಪ್ರಜೆಗಳ ಜತೆಗೆ ತನ್ನ ಅರಮನೆಯತ್ತ ಸಾಗತೊಡಗಿದ.

ತತ್ಕಾಲದ ಮೋಜು ಭವಿಷ್ಯದಲ್ಲಿ ನಮ್ಮನ್ನು ಪರಿತಪಿಸುವಂತೆ ಮಾಡುತ್ತದೆ. ವರ್ತಮಾನದ ಸುಖ, ಸಂತೋಷ, ಸಂಪತ್ತು, ಅಧಿಕಾರಗಳ ಗುಂಗಿನಲ್ಲಿ ಮೈಮರೆತು ಕುಳಿತುಕೊಳ್ಳುವುದಕ್ಕಿಂತ ಭವಿಷ್ಯದ ಕುರಿತು ಸ್ಪಷ್ಟವಾಗಿ ಆಲೋಚಿಸಿ, ಕಾರ್ಯ ನಿರ್ವಹಿಸಬೇಕಾದದ್ದು ತುಂಬಾ ಮುಖ್ಯ. ಎಷ್ಟೇ ದುಡ್ಡು ಕೊಟ್ಟರೂ ದೊರೆಯದ ಅಮೂಲ್ಯ ಸಂಪತ್ತಾದ ಸಮಯ ವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ನಮ್ಮ ಭವಿಷ್ಯವನ್ನು ಉತ್ತಮ ವಾಗಿಸಿಕೊಳ್ಳೋಣ.
- ವಿಶ್ವನಾಥ ಎನ್‌. ನೇರಳಕಟ್ಟೆ

Advertisement
Advertisement

Udayavani is now on Telegram. Click here to join our channel and stay updated with the latest news.

Next