Advertisement
ನಗರದಲ್ಲಿ ಹಲವಾರು ಪುರಾತನ ದೇವಾಲಯ, ಚರ್ಚ್, ಮಸೀದಿಗಳಿವೆ. ಆದರೆ ಸ್ಥಳೀಯರು ಹೊರತುಪಡಿಸಿ ಮಾಹಿತಿ ಕೊರತೆಯಿಂದಾಗಿ ಧಾರ್ಮಿಕ ಸ್ಥಳಗಳಿಗೆ ತೆರಳುವ ಪ್ರವಾಸಿಗರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಪ್ರಸ್ತುತ ಪ್ರಭಾವಿ ಮಾಧ್ಯಮವಾಗಿರುವ ಸಾಮಾಜಿಕ ತಾಣಗಳನ್ನೇ ಬಳಸಿಕೊಂಡು ನಗರದ ದೇವಸ್ಥಾನಗಳ ಇಂಚಿಂಚು ಮಾಹಿತಿಯನ್ನು ರಾಜ್ಯ, ಹೊರ ರಾಜ್ಯದ ಜನತೆಗೆ ತಿಳಿಸುವ ಉದ್ದೇಶದಿಂದ ಧಾರ್ಮಿಕ ಪ್ರವಾಸೋದ್ಯಮ ಪ್ರಚುರಪಡಿಸುವ ಚಿಂತನೆ ಶಾಸಕ ಡಿ. ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಡೆಯುತ್ತಿದೆ. ಇದರ ಮೊದಲ ಭಾಗವಾಗಿ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಬಗ್ಗೆ ಶುಕ್ರವಾರ ಸಮಗ್ರ ಮಾಹಿತಿ-ಚಿತ್ರಣವನ್ನು ತಮ್ಮ ಫೇಸ್ಬುಕ್ ಪೇಜ್‌ನಲ್ಲಿ ಪ್ರಕಟಿಸಿದ್ದಾರೆ.
ಪುರಾತನ ಮತ್ತು ಕಾರ್ಣಿಕದ ದೇವಸ್ಥಾನ, ದೈವಸ್ಥಾನ, ಚರ್ಚ್, ಮಸೀದಿಗಳ ವೈಶಿಷ್ಟ್ಯ, ಇತಿಹಾಸ, ಅಲ್ಲಿನ ಕೆತ್ತನೆಗಳು, ವಿಶೇಷ ಹಬ್ಬ, ಆಚರಣೆಗಳು, ಪೂಜಾದಿ ವಿಶೇಷಗಳು, ಆ ಧಾರ್ಮಿಕ ಕೇಂದ್ರಕ್ಕೆ ತೆರಳುವ ರೂಟ್‌ಮ್ಯಾಪ್ ಸಹಿತ ಆ ಧಾರ್ಮಿಕ ಕೇಂದ್ರದ ಸಮಗ್ರ ಮಾಹಿತಿಗಳನ್ನು ಸಾಮಾಜಿಕ ತಾಣಗಳಾದ ಟ್ವಿಟರ್, ಫೇಸ್ಬುಕ್, ಇನ್‌ಸ್ಟಾಗ್ರಾಂಗಳಲ್ಲಿ ಪ್ರಕಟಿಸಿ, ಹೆಚ್ಚು ಶೇರ್ ಆಗುವಂತೆ ನೋಡಿಕೊಳ್ಳಲಾಗುತ್ತದೆ. ಫೇಸ್ಬುಕ್ ಪೇಜ್‌ಗಳಲ್ಲಿ ಹಲವಾರು ಮಂದಿ ಫಾಲೋವರ್ಗಳಿರು ವುದರಿಂದ ಈ ಮಾಹಿತಿ ರಾಜ್ಯ ಮಾತ್ರವಲ್ಲ, ಹೊರ ರಾಜ್ಯದ ಮಂದಿಗೂ ತಲುಪುತ್ತದೆ. ಆ ಮೂಲಕ ನಗರದ ದೇವಾಲಯಗಳಿಗೆ ಪ್ರವಾಸಿಗರು ಬರುವುದಕ್ಕೆ ಅವಕಾಶ ನೀಡುವುದು ಉದ್ದೇಶ. ರೈಲು, ಬಸ್ ನಿಲ್ದಾಣಗಳ ಮೂಲಕ ಜನ ಸಂಚಾರ ಹೆಚ್ಚಿರುವುದರಿಂದ ಇಂತಹ ಕಡೆಗಳಲ್ಲಿ ಧಾರ್ಮಿಕ ಪ್ರವಾಸೋದ್ಯಮದ ಬಗ್ಗೆ ಮಾಹಿತಿ ನೀಡುವ ಕೌಂಟರ್ ತೆರೆಯುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ರೈಲು ನಿಲ್ದಾಣದಿಂದ ಯಾವ ಧಾರ್ಮಿಕ ಕೇಂದ್ರಕ್ಕೆ ಎಷ್ಟು ದೂರ ಇದೆ ಎಂಬುವುದನ್ನೂ ತಿಳಿಸಲಾಗುತ್ತದೆ. ಇದರಿಂದ ರೈಲು ಮುಖಾಂತರ ಇತರೆಡೆ ಗಳಿಗೆ ತೆರಳಬೇಕಾ ದವರು ನಿಲ್ದಾಣ ದಲ್ಲಿ ಕುಳಿತುಕೊಳ್ಳುವ ಬದಲು ಧಾರ್ಮಿಕ ಕೇಂದ್ರಗಳನ್ನು ವೀಕ್ಷಿಸಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ಶಾಸಕರು. ಲಾಡ್ಜ್ಗಳಲ್ಲಿ ಹೊರಭಾಗದ ಪ್ರವಾಸಿಗರು ಉಳಿದುಕೊಳ್ಳುವುದರಿಂದ ವಿವಿಧ ಲಾಡ್ಜ್ಗಳ ಮಾಲಕರ ಜತೆ ಚರ್ಚಿಸಿ ಅಲ್ಲಿಯೂ ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಫಲಕಗಳನ್ನು ಹಾಕುವ ಬಗ್ಗೆ ಚಿಂತನೆ ನಡೆಯುತ್ತಿವೆ.
Related Articles
ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರೊಂದಿಗೆ ನಮ್ಮ ನಗರದ ಪುರಾತನ ಧಾರ್ಮಿಕ ಕೇಂದ್ರಗಳ ವೈಶಿಷ್ಟ್ಯವನ್ನು ರಾಜ್ಯ, ದೇಶದ ಉದ್ದಗಲಕ್ಕೂ ತಲುಪಿಸುವ ಉದ್ದೇಶವಿದೆ. ಸಾಮಾಜಿಕ ಜಾಲತಾಣಗಳನ್ನೇ ಬಳಸಿಕೊಂಡು ಈ ಕೆಲಸ ಮಾಡಲಾಗುವುದು. ಶಿವರಾತ್ರಿ ದಿನದಿಂದ ಈ ಕೆಲಸ ಅಧಿಕೃತ ಆರಂಭ ಕಂಡಿದೆ. ರೈಲು, ಬಸ್ ನಿಲ್ದಾಣಗಳಲ್ಲಿ ಕೌಂಟರ್ ತೆರೆದು ಅಲ್ಲಿಯೂ ಧಾರ್ಮಿಕ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಪಸರಿಸುವ ಉದ್ದೇಶವಿದೆ.
– ಡಿ. ವೇದವ್ಯಾಸ ಕಾಮತ್, ಶಾಸಕರು
Advertisement
ಮೂಲ ಸೌಕರ್ಯಕ್ಕೆ ಆದ್ಯತೆಪ್ರವಾಸಿಗರನ್ನು ಆಕರ್ಷಿಸುವುದರೊಂದಿಗೆ ಅವರಿಗೆ ಧಾರ್ಮಿಕ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನೂ ಒದಗಿಸುಕೊಡುವ ನಿಟ್ಟಿನಲ್ಲಿಯೂ ಚಿಂತನೆ ನಡೆಯಲಿದೆ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲದೆಡೆ ಅದನ್ನೂ ಕಲ್ಪಿಸಿಕೊಡಲಾಗುತ್ತದೆ.