Advertisement

Govt., ಎಸ್‌ಸಿ-ಎಸ್‌ಟಿ ಹಣ ಅನ್ಯ ಯೋಜನೆಗೆ ಬಳಕೆ

01:14 AM Jul 26, 2024 | Team Udayavani |

ಬೆಂಗಳೂರು: ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ (ಎಸ್‌ಸಿಎಸ್‌ಪಿ- ಟಿಎಸ್‌ಪಿ) ಹಣವನ್ನು ಸರಕಾರ ವಿವಿಧ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು, “ಇದು ಶಿಕ್ಷಾರ್ಹ ಅಪರಾಧವಾಗಿದೆ.

Advertisement

ಕೂಡಲೇ ಈ ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗ‌ಳ ಮೂಲಸೌಕರ್ಯಗಳಿಗೆ ಮತ್ತು ವಿದ್ಯಾರ್ಥಿ ವೇತನಕ್ಕೆ ಹಂಚಿಕೆ ಮಾಡಬೇಕು’ ಎಂದು ಶಿಫಾರಸು ಮಾಡಿದೆ.

ಮೇಲ್ಮನೆಯಲ್ಲಿ ಗುರುವಾರ ಸಮಿತಿಯು ಎಸ್‌ಸಿಎಸ್‌ಪಿ- ಟಿಎಸ್‌ಪಿ ಅನುದಾನ ಮತ್ತು ನೇಮಕಾತಿ ಕುರಿತು ಸರಕಾರ ಕೈಗೊಳ್ಳಬೇಕಾದ ಕ್ರಮಗಳ ವರದಿ ಮಂಡಿಸಿತು. ಅದರಲ್ಲಿ ಸಾರಿಗೆ ಇಲಾಖೆಯು ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದ್ದು, ಇದಕ್ಕಾಗಿ ಎಸ್‌ಸಿಎಸ್‌ಪಿ- ಟಿಎಸ್‌ಪಿ ಅನುದಾನ ಬಳಸಿರುವುದಾಗಿ ಹೇಳಿದೆ. ಇದು ಕಾಯ್ದೆಗೆ ವಿರುದ್ಧವಾಗಿದೆ ಎಂದಿದೆ.

ಎಲ್ಲ ವರ್ಗಗಳಿಗೆ ವಿದ್ಯಾರ್ಥಿಗಳ ಪಾಸ್‌ ನೀಡುತ್ತಿದ್ದು, ಇದಕ್ಕಾಗಿ ಎಸ್‌ಸಿಎಸ್‌ಪಿ- ಟಿಎಸ್‌ಪಿ ಅನುದಾನ ಬಳಸಲಾಗುತ್ತಿದೆ. ಬಹುತೇಕ ಇಲಾಖೆಗಳು ಇದೇ ರೀತಿ ಶೋಷಿತ ಸಮುದಾಯಗಳಿಗೆ ನೀಡಿದ ಅನುದಾನವನ್ನು ಸಾಮೂಹಿಕವಾಗಿ ಬಳಸಿಕೊಳ್ಳುತ್ತಿರುವುದಾಗಿ ಹೇಳಿವೆ. ಅದರಲ್ಲೂ ಶಿಕ್ಷಣ ಇಲಾಖೆಯಲ್ಲಿ ಪುಸ್ತಕಗಳು, ಶೂಗಳಿಗೆಂದು ಎಲ್ಲ ಶೇ. 45ರಷ್ಟು ಹಣವನ್ನು ಖರ್ಚು ಮಾಡುತ್ತಿರುವುದಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಈ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಅನ್ಯಾಯ ಮಾಡಿದಂತಾಗುತ್ತಿದೆ. ಅಲ್ಲದೆ ಇದು ಶಿಕ್ಷಾರ್ಹ ಪ್ರಕರಣ ಎಂದು ಸಮಿತಿ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

“ಕಟ್ಟಡ ಕಾಮಗಾರಿ ಸೆಸ್‌: ಪಾಲು ಸಿಗಲಿ’
ಕಟ್ಟಡ ಕಾಮಗಾರಿಯಲ್ಲಿ ಸಂಗ್ರಹವಾಗುವ ಶೇ. 1ರಷ್ಟು ಸೆಸ್‌ ಮೊತ್ತದಲ್ಲಿ ಶೇ. 24.1ರಷ್ಟನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕೆ ಖರ್ಚು ಮಾಡಲು ಕಾಯ್ದೆಯಲ್ಲಿ ಸೇರ್ಪಡೆಗೊಳಿಸಬೇಕು. ಹೀಗೆ ಸೇರ್ಪಡೆ ಮಾಡುವ ಅನುದಾನದಲ್ಲಿ ಆ ವರ್ಗಗಳ ಮಕ್ಕಳಿಗಾಗಿ ಕಾರ್ಯಕ್ರಮ ರೂಪಿಸಬೇಕು ಎಂದೂ ವರದಿ ಶಿಫಾರಸು ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next