ಸಾಗರ: ಮೂರು ವರ್ಷಗಳ ಹಿಂದೆ ನಡೆದ ಲೋಕಸಭೆ ಚುನಾವಣೆಯಲ್ಲಿ ಅಧಿಕಾರಿಗಳನ್ನು ಬೂತ್ ಮೇಲ್ವಿಚಾರಣೆಗೆ ಕಳಿಸಲು ತಾಲೂಕಿನ ತುಮರಿ ಭಾಗದ ಖಾಸಗಿ ವಾಹನಗಳನ್ನು ಪಡೆದುಕೊಳ್ಳುವಲ್ಲಿ ದಾಖಲೆಗಳ ಸಬೂಬು ಹೇಳದಿದ್ದ ಚುನಾವಣಾ ಆಯೋಗವನ್ನು ಪ್ರತಿನಿಧಿಸುವ ಅಧಿಕಾರಿಗಳು ನಂತರದಲ್ಲಿ ದಾಖಲೆಗಳ ಸಲ್ಲಿಕೆಯಲ್ಲಿ ದೋಷಗಳಾಗಿವೆ ಎಂದು ಆಕ್ಷೇಪಿಸಿ ಈವರೆಗೆ ಬಾಡಿಗೆ ಹಣ ನೀಡದಿರುವ ಪ್ರಕರಣ ಬಯಲಿಗೆ ಬಂದಿದೆ.
2019ರಲ್ಲಿ ನಡೆದ ಚುನಾವಣೆಗೆ ಜಿಲ್ಲೆಯಲ್ಲಿ 134 ಖಾಸಗಿ ವಾಹನ ಬಳಸಿಕೊಳ್ಳುವುದಕ್ಕೆ ಜಿಲ್ಲಾಡಳಿತ ನಿರ್ಧಾರ ಮಾಡಿತ್ತು. ಆ ಪ್ರಕಾರ ಚುನಾವಣಾ ಮುಂದಿನ ದಿನದಿಂದ ಮೂರು ದಿನಗಳ ಕಾಲ ಈ ವಾಹನಗಳ ಸೇವೆಯನ್ನು ಪಡೆದಿತ್ತು. ಈ ಹಿನ್ನೆಲೆಯಲ್ಲಿ ತುಮರಿ ಭಾಗದ 8 ವಾಹನಗಳ ಸೇವೆ ಪಡೆಯಲಾಗಿದ್ದರೂ, ಅವುಗಳ ಬಾಡಿಗೆ ಬಿಲ್ ಮೊತ್ತವನ್ನು ಮೂರು ವರ್ಷಗಳಿಂದ ಬಾಕಿ ಉಳಿಸಿಕೊಂಡಿದೆ.
ಕಳೆದ ಮೂರು ವರ್ಷದಿಂದ ಹತ್ತಾರು ಬಾರಿ ಸಾಗರ ತಹಸೀಲ್ದಾರ್ ಕಚೇರಿಯ ಚುನಾವಣಾ ವಿಭಾಗಕ್ಕೆ ಅಲೆದಿದ್ದು ಯಾವುದೇ ಪ್ರಯೋಜನ ಆಗಿಲ್ಲ. ಈಗ ನಾವು ದಾಖಲೆಗಳನ್ನು ಸರಿಯಾಗಿ ನೀಡಿಲ್ಲ ಎಂದು ಅಧಿಕಾರಿಗಳು ಸುಳ್ಳು ಹೇಳುತ್ತಿದ್ದು, ಈವರೆಗೂ ನಾಲ್ಕು ಬಾರಿ ವಾಹನಗಳ ದಾಖಲೆ ನೀಡಿದ್ದೇವೆ. ನಾವು ವಾಹನ ಕುರಿತಾದ ದಾಖಲೆ ನೀಡಿದ ಮೇಲೆಯೇ ನಮಗೆ ಚುನಾವಣಾ ಸೇವೆಗೆ ಅವಕಾಶ ನೀಡಲಾಗಿತ್ತು. ಈ ರೀತಿಯ ಶೋಷಣೆಯನ್ನು ಅನುಭವಿಸಿದ ನಂತರ ಬಿಲ್ ಮೊತ್ತ ಲಭ್ಯವಾಗುತ್ತದೆ ಎಂಬ ಆಸೆಯನ್ನೇ ಕೈ ಬಿಟ್ಟಿದ್ದೇವೆ ಎಂದು ಇಲ್ಲಿನ ವಾಹನ ಮಾಲೀಕ ಮತ್ತು ಚಾಲಕ ಸಂಘದ ಕಾರ್ಯದರ್ಶಿ ಅಕ್ಷಯ್ ಜೈನ್ ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ:ಮಂಗಳೂರು ಕಂಬಳ: ಶಾಸಕ ಭರತ್ ಶೆಟ್ಟಿಯವರ ಕೋಣಗಳಿಗೆ ಪ್ರಥಮ ಬಹುಮಾನ
ಸಂಘದ ಪ್ರಮುಖ ಪಟಾಕಿ ಮಹೇಶ್, ಜನಪರ ಹೋರಾಟ ವೇದಿಕೆ ಅಧ್ಯಕ್ಷ, ಮಾಜಿ ಗ್ರಾಪಂ ಅಧ್ಯಕ್ಷ ಜಿ.ಟಿ ಸತ್ಯನಾರಾಯಣ ಮೊದಲಾದವರು ಬಾಕಿ ಇರುವ ಮೊತ್ತವನ್ನು ಜಿಲ್ಲಾಧಿಕಾರಿಗಳು ಗಮನ ಹರಿಸಿ ಬೇಗ ಪಾವತಿ ಆಗುವಂತೆ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.