Advertisement

ಶೌಚಾಲಯ ನಿರ್ಮಾಣಕ್ಕೆ ದಂಡದ ಮೊತ್ತ ಬಳಕೆ

12:19 PM Jun 06, 2018 | |

ಬೆಂಗಳೂರು: ಬಸ್‌ ನಿಲ್ದಾಣ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಗಳಿಂದ ದಂಡದ ರೂಪದಲ್ಲೇ ಸುಮಾರು 62 ಲಕ್ಷ ರೂ. ಸಂಗ್ರಹವಾಗಿದ್ದು, ಹೀಗೆ ದಂಡದಿಂದ ಬಂದ ಹಣದಲ್ಲೇ ಕೆಎಸ್‌ಆರ್‌ಟಿಸಿ ಸುಮಾರು 25 ಶೌಚಾಲಯಗಳನ್ನು ನಿರ್ಮಿಸಲು ಮುಂದಾಗಿದೆ.

Advertisement

ಹೌದು, ಕಳೆದ ಎರಡು ವರ್ಷಗಳಲ್ಲಿ ಕೆಎಸ್‌ಆರ್‌ಟಿಸಿ ವ್ಯಾಪ್ತಿಯ ವಿವಿಧ ಬಸ್‌ ನಿಲ್ದಾಣಗಳ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡಿದ 61,779 ಪ್ರಯಾಣಿಕರಿಗೆ ದಂಡ ವಿಧಿಸಿದ್ದು, ಅದರಿಂದ 62 ಲಕ್ಷ ರೂ. ಸಂಗ್ರಹವಾಗಿದೆ. ಈ ಹಣದಲ್ಲಿ ಕನಿಷ್ಠ 25 ಶೌಚಾಲಯಗಳನ್ನು ನಿರ್ಮಿಸಬಹುದು ಎಂದು ನಿಗಮವು ಅಂದಾಜು ಮಾಡಿದೆ. ಮುಂದಿನ ದಿನಗಳಲ್ಲಿ ಈ ಹಣವನ್ನು ಶೌಚಾಲಯ ನಿರ್ಮಾಣಕ್ಕಾಗಿಯೇ ವಿನಿಯೋಗಿಸಲು ನಿರ್ಧರಿಸಿದೆ. 

ದಂಡ ಸಂಗ್ರಹ: ನಿಲ್ದಾಣದ ಆವರಣದಲ್ಲಿ ಸಾರ್ವಜನಿಕ ಶೌಚಾಲಯಗಳಿದ್ದೂ ಅದನ್ನು ಉಪಯೋಗಿಸದೆ, ಕಂಡಲ್ಲೆಲ್ಲಾ ಮೂತ್ರ ವಿಸರ್ಜನೆ ಮಾಡಿದವರ ವಿರುದ್ಧ ಸಾವಿರ ರೂ. ದಂಡ ವಸೂಲು ಮಾಡಲಾಗಿದೆ. ಒಟ್ಟಾರೆ ಸಂಗ್ರಹವಾದ ದಂಡದ ಮೊತ್ತದಲ್ಲಿ ಅರ್ಧಕ್ಕರ್ಧ 2016ರ ಜನವರಿಯಿಂದ 2017ರ ಮಾರ್ಚ್‌ ಅವಧಿಯಲ್ಲೇ ಸಂಗ್ರಹವಾಗಿದೆ. ಈ ಅವಧಿಯಲ್ಲಿ 30,594 ಪ್ರಯಾಣಿಕರಿಂದ 30.59 ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ. 2017ರ ಏಪ್ರಿಲ್‌ನಿಂದ 2018ರ ಮಾರ್ಚ್‌ನಲ್ಲಿ 29.82 ಲಕ್ಷ  ಹಾಗೂ 2018 ಏಪ್ರಿಲ್‌ನಲ್ಲಿ 1,35,900 ರೂ. ದಂಡ ಸಂಗ್ರಹವಾಗಿದೆ ಎಂದು ನಿಗಮ ತಿಳಿಸಿದೆ. 

46 ಕಡೆ ಮಳೆ ನೀರು ಕೊಯ್ಲು: ಇನ್ನು ನಿಗಮದ ವ್ಯಾಪ್ತಿಯ ಘಟಕ/ ಕಾರ್ಯಾಗಾರ/ ಕಚೇರಿಗಳು ಸೇರಿದಂತೆ ಈಗಾಗಲೇ 46 ಸ್ಥಳಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಲಾಗಿದ್ದು, ಸುಮಾರು ಎಂಟು ಸ್ಥಳಗಳಲ್ಲಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಉಳಿದ ಸ್ಥಳಗಳಲ್ಲಿ ಕಾರ್ಯಗತಗೊಳಿಸಲಾಗುವುದು. ಜತೆಗೆ 28 ಘಟಕಗಳಲ್ಲಿ ನೀರು ಮರುಬಳಕೆ ಸ್ಥಾವರಗಳನ್ನು ನಿರ್ಮಿಸಲಾಗಿದ್ದು, ಪ್ರತಿ ವರ್ಷ 2 ಲಕ್ಷ ಲೀ. ನೀರನ್ನು ಸಂಸ್ಕರಿಸಿ, ಮರುಬಳಕೆ ಮಾಡಲಾಗುತ್ತಿದೆ. ಉಳಿದ 54 ಘಟಕಗಳಲ್ಲಿ ಟೆಂಡರ್‌ ಪ್ರಕ್ರಿಯೆ ನಡೆದಿದೆ. 

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ಕೆಎಸ್‌ಆರ್‌ಟಿಸಿಯ ಕೇಂದ್ರೀಯ ವಿಭಾಗದ 2ನೇ ಘಟಕದಲ್ಲಿ ಸಾಲುಮರದ ತಿಮ್ಮಕ್ಕ ಅವರು ಸಸಿ ನೆಟ್ಟರು. ಇದಕ್ಕೆ ನಿರ್ದೇಶಕ (ಸಿಬ್ಬಂದಿ ಮತ್ತು ಪರಿಸರ) ಕೆ. ಶ್ರೀನಿವಾಸ್‌, ಮುಖ್ಯ ಮೆಕಾನಿಕಲ್‌ ಎಂಜಿನಿಯರ್‌ ಡಾ.ಕೆ. ರಾಮಮೂರ್ತಿ, ಪ್ರಧಾನ ವ್ಯವಸ್ಥಾಪಕ (ಸಿಬ್ಬಂದಿ) ಬಿ.ಸಿ. ರೇನುಕೇಶ್ವರ್‌, ಮುಖ್ಯ ಕಾನೂನು ಅಧಿಕಾರಿ ಎಸ್‌. ಮನೋಹರ್‌ ಮತ್ತಿತರರು ಸಾಥ್‌ ನೀಡಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next