Advertisement

ತೈಲದ ತೆರಿಗೆಯನ್ನು ಬಡವರ ಯೋಜನೆಗೆ ಬಳಸಿ: ಎಚ್‌.ಡಿ. ಕುಮಾರಸ್ವಾಮಿ

10:13 PM Sep 16, 2021 | Team Udayavani |

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ನಿಂದ ಬರುತ್ತಿರುವ ತೆರಿಗೆ ಹಣದಿಂದ ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ಜನರ ಅನುಕೂಲಕ್ಕೆ ರಾಜ್ಯ ಸರಕಾರ ವಿಶೇಷ ಯೋಜನೆ ಘೋಷಿಸಬೇಕು ಎಂದು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

Advertisement

ವಿಧಾನಸಭೆಯಲ್ಲಿ  ಬೆಲೆ ಏರಿಕೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಲಾಕ್‌ಡೌನ್‌ ಪರಿಣಾಮವಾಗಿ ಸಾಕಷ್ಟು ಜನರು ಸಂಕಷ್ಟಕ್ಕೆ ಸಿಲುಕಿದರು. ಈ ವಿಚಾರದಲ್ಲಿ ರಾಜಕೀಯ ಪಕ್ಷದ ಆಧಾರದಲ್ಲಿ ಚರ್ಚಿಸುವ ಬದಲು ಎಲ್ಲರೂ ಒಟ್ಟಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಸಬೇಕಿದೆ ಎಂದರು.

ದೇಶದ ಪ್ರತಿಯೊಬ್ಬ ವ್ಯಕ್ತಿ ಯಾವುದಾದರೂ ರೀತಿಯಲ್ಲಿ  ವರ್ಷದಲ್ಲಿ 1 ಲಕ್ಷ ರೂ. ತೆರಿಗೆ ಕಟ್ಟುತ್ತಾನೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ನಾವು ಬಡವರಿಗೆ ಒಂದು ಹೊತ್ತಿನ ಊಟ ಕೊಡಲು ಸಾಧ್ಯವಾಗುತ್ತಿಲ್ಲ. ಹಾಗಿರುವಾಗ ಸರಕಾರ ತೈಲದ ತೆರಿಗೆ ಹಣದಿಂದ ಬಡವರಿಗೆ ಹೊಸ ಯೋಜನೆ ರೂಪಿಸಬೇಕಿದೆ ಎಂದರು.

ಒಂದು ವರ್ಷದಲ್ಲಿ ಪೆಟ್ರೋಲ್‌, ಡೀಸೆಲ್‌ ತೆರಿಗೆಯಿಂದ 19 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ.  ಕಾರ್ಪೊರೇಟ್‌ ಕಂಪೆನಿಗಳಿಂದ ಬರುತ್ತಿದ್ದ ತೆರಿಗೆ 5.6 ಲಕ್ಷ ಕೋಟಿ ಯಿಂದ  4.2 ಲಕ್ಷ ಕೋಟಿ ರೂ.ಗೆ  ಇಳಿದಿದೆ.  ಆದರೆ, ಸಾಮಾನ್ಯ ಜನರಿಂದ ಸಂಗ್ರಹವಾಗುತ್ತಿದ್ದ 2 ಲಕ್ಷ ಕೋಟಿ ರೂ. ಈಗ ಮೂರು ಲಕ್ಷ ಕೋಟಿ ರೂ.ಗೆ ಏರಿದೆ ಎಂದು ವಿವರಿಸಿದರು.

 ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ಧಾಳಿ:

Advertisement

ನಾನು ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡುವಾಗ ಸಿದ್ದರಾಮಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿದರು. ಅವರು ಚುನಾವಣೆ ಹೋಗುವ ಮುನ್ನ 5 ಕೆ.ಜಿ. ಬದಲು 7 ಕೆ.ಜಿ. ಅಕ್ಕಿ ಕೊಡುವುದಾಗಿ ಘೋಷಿಸಿದರು. ಆದರೆ 5 ಕೆ.ಜಿ.ಗೆ ಮಾತ್ರ ಅನುದಾನ ಮೀಸಲಿಟ್ಟು, 7 ಕೆ.ಜಿ. ಯೋಜನೆಯನ್ನು ಜಾರಿ ಮಾಡಲೇಬೇಕೆಂದು ಒತ್ತಡ ಹೇರಿದರು ಎಂದರು.

ಕ್ಷೇತ್ರ ಪುನರ್‌ವಿಂಗಡಣೆಗೆ ಆಯೋಗ: ವಿಧೇಯಕ ಅಂಗೀಕಾರ:

ಬೆಂಗಳೂರು:  ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ ಕ್ಷೇತ್ರ ಪುನರ್‌ವಿಂಗಡಣೆಗೆ ಆಯೋಗ ರಚನೆ ಮಾಡುವ ಉದ್ದೇಶದ  ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ವಿಧೇಯಕವು ವಿಪಕ್ಷ ಕಾಂಗ್ರೆಸ್‌ ಸಭಾತ್ಯಾಗದೊಂದಿಗೆ ಅಂಗೀಕಾರಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next