ದೇವನಹಳ್ಳಿ: ಗ್ರಾಮಗಳು ಸರ್ವತೋಮುಖ ಅಭಿವೃದ್ಧಿಗೆ ಅನುದಾನವನ್ನು ಬಳಸಿಕೊಳ್ಳಬೇಕು. ತಾಲೂಕಿನಲ್ಲಿ ಶಾಲೆಗಳು ಉತ್ತಮ ಕಟ್ಟಡಗಳನ್ನು ಹೊಂದಿವೆ. ಖಾಸಗಿ ಶಾಲೆಗಿಂತಲೂ ಕಡಿಮೆ ಇಲ್ಲದಂತೆ ನಿರ್ಮಾಣವಾಗುತ್ತಿದೆ ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಬೆಟ್ಟಕೋಟೆ ಗ್ರಾಮದಲ್ಲಿ ಸಿಎಸ್‌ಆರ್ ಅನುದಾನದ ಕುಡಿಯುವ ನೀರಿನ ಪೈಪ್‌ಲೈನ್, ನೀರಿನ ಸಂಪ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಅವರು ಮಾತನಾಡಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಾಮಾಜಿಕ ಹೊಣೆಗಾರಿಕೆ ಅನುದಾನದಡಿಯಲ್ಲಿ ಗ್ರಾಮಗಳ ಶಾಲೆ ಹಾಗೂ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ಇದರಿಂದ ಗ್ರಾಮಗಳು ಅಭಿವೃದ್ಧಿಯಾಗುತ್ತಿವೆ ಎಂದರು.
ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈ ಯೋಜನೆ ಪ್ರಾರಂಭಿಸಿರುವುದರಿಂದ ಬೆಟ್ಟಕೋಟೆ ಗ್ರಾಮಕ್ಕೂ ಕಾವೇರಿ ನೀರನ್ನು ಸರಬರಾಜು ಮಾಡಿದರೆ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 2 ಕಾಮಗಾರಿ ಪ್ರಾರಂಭದಿಂದ ಬೆಟ್ಟಕೋಟೆ ಗ್ರಾಮಸ್ಥರಿಗೆ ಅನಾನುಕೂಲವಾಗಿದೆ. ರೈತರು ಬೆಳೆಯುವ ರೇಷ್ಮೆ ಹಾಗೂ ಇನ್ನಿತರ ತರಕಾರಿ ಬೆಳೆಗಳಿಗೆ ಮನೆಗಳಿಗೆ ಧೂಳು ಅವರಿಸುತ್ತಿರುವುದರಿಂದ ಜಿಲ್ಲಾಧಿಕಾರಿ ಹಾಗೂ ಪ್ರಾಧಿಕಾರದ ಅಧ್ಯಕ್ಷರು ಇದರ ಬಗ್ಗೆ ಕ್ರಮ ತೆಗೆದುಕೊಂಡು ರೈತರಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ದೇವನಹಳ್ಳಿ ಅಭಿವೃದ್ಧಿಗೆ ಅದ್ಯತೆ: ಶಾಸಕರ ಅನುದಾನದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವಾರು ಯೋಜನೆಗಳಿಂದ ಅಭಿವೃದ್ಧಿಗೆ ಅದ್ಯತೆ ನೀಡಲಾಗಿದೆ. ಗ್ರಾಮಗಳ ರಸ್ತೆಗಳ ಅಭಿವೃದ್ಧಿ, ಆನಾರೋಗ್ಯದಿಂದ ಕೂಡಿರುವವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ನೀಡುವುದು, ಮೂಲಭೂತ ಸೌಲಭ್ಯ ಬೇಕಾಗಿದ್ದಲ್ಲಿ ನಮಗೆ ಮನವಿ ಪತ್ರದ ಮುಖಾಂತರ ನೀಡಿದರೆ, ಅದಕ್ಕೆ ಅದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.
ಬೆಟ್ಟಕೋಟೆಯಲ್ಲಿ ಶಾಲೆ ನಿರ್ಮಾಣ: ಗ್ರಾಪಂ ಅಧ್ಯಕ್ಷೆ ಸೌಮ್ಯ ನಂದೀಶ್ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಅದ್ಯತೆ ನೀಡುತ್ತಿದ್ದೇವೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರು ಬೆಟ್ಟಕೋಟೆ ಗ್ರಾಮಕ್ಕೆ ಶಾಲೆ ನಿರ್ಮಿಸಿಕೊಟ್ಟಿದ್ದಾರೆ. ನೀರಿನ ಪೈಪ್‌ಲೈನ್ ನಿರ್ಮಾಣ ಮಾಡುವುದರಿಂದ ಗ್ರಾಮಗಳು ಅಭಿವೃದ್ಧಿಯಾಗುತ್ತಿವೆ ಎಂದರು.
ಈ ವೇಳೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿ ಮೋಹನ್, ರಮೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಮಾಜಿ ಅಧ್ಯಕ್ಷ ಆರ್.ಮುನೇಗೌಡ, ತಾಪಂ ಅಧ್ಯಕ್ಷೆ ಚೈತ್ರಾ, ಟಿಎಪಿಎಂಸಿ ಮಾಜಿ ಅಧ್ಯಕ್ಷ ಶ್ರೀನಿವಾಸ್, ಚನ್ನರಾಯಪಟ್ಟಣ ಹೋಬಳಿ ಜೆಡಿಎಸ್ ಅಧ್ಯಕ್ಷ ಮುನಿರಾಜು, ಗ್ರಾಪಂ ಸದಸ್ಯರಾದ ಚನ್ನರಾಯಪ್ಪ, ಲಕ್ಷ್ಮಮ್ಮ, ವೆಂಕಟೇಗೌಡ, ತಾಲೂಕು ಕೃಷಿಕ ಸಮಾಜ ನಿರ್ದೇಶಕ ರಾಜೇಶ್, ಟಿಎಪಿಎಂಸಿ ನಿರ್ದೆಶಕ ಗುರಪ್ಪ, ಮುಖಂಡರಾದ ಮುನಿರಾಜು, ಶಿವಾನಂದ್, ಎಪಿಎಂಸಿ ನಾಮಿನಿ ನಿರ್ದೇಶಕ ಜಯರಾಮೇಗೌಡ, ಪಿಡಿಒ ಬೀರೇಶ್ ಉಪಸ್ಥಿತರಿದ್ದರು.
ಪಶು ಆರೋಗ್ಯ ಕೇಂದ್ರ ತೆರೆಯಲು ಸರ್ಕಾರದಿಂದ ಅದೇಶವಿಲ್ಲ. ಬೆಂಗಳೂರು ನಗರದಲ್ಲಿ ಯಾವುದಾದರು ಕೇಂದ್ರ ಇಲ್ಲಿಗೆ ವರ್ಗಾವಣೆ ಮಾಡಿಸುವಂತೆ ಮಾಡಲಾಗುವುದು.
-ಎಲ್.ಎನ್.ನಾರಾಯಣಸ್ವಾಮಿ, ಶಾಸಕ