ಬಾಗಲಕೋಟೆ: ಜಿಲ್ಲೆಯಲ್ಲಿ ಖನಿಜ ಉತ್ಪಾದಿಸುವ ಪ್ರದೇಶಗಳ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಮೂಲ ಸೌಲಭ್ಯಗಳ ಅಭಿವೃದ್ಧಿಗಾಗಿ 55 ಕೋಟಿ ರೂ.ಗಳ ಡಿಎಂಎಫ್ ಅನುದಾನ ಬಳಕೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಡಿಎಂಎ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ವಿವಿಧ ಖನಿಜಗಳ ಉತ್ಪಾದನೆಗಾಗಿ ಒಟ್ಟು 55 ಕೋಟಿ ರೂ.ಗಳ ಕರ ಸಂಗ್ರಹವಾಗಿದೆ. ಈ ಅನುದಾನವನ್ನು ಜಿಲ್ಲೆಯ ಎಲ್ಲ ಮತಕ್ಷೇತ್ರಗಳ ಖನಿಜ ಉತ್ಪಾದಿಸುವ ಕೈಗಾರಿಕೆ ಬಾಧಿತ ಗ್ರಾಮಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲಾಗುವುದು ಎಂದರು.
ಈ ಕರದಲ್ಲಿ ಈಗಾಗಲೇ 7 ಕೋಟಿ ರೂ. ಖರ್ಚಾಗಿದ್ದು, ಉಳಿದ ಹಣವನ್ನು ಬಳಕೆ ಮಾಡಲಾಗುವುದು. ಬಾದಾಮಿ ತಾಲೂಕಿನಲ್ಲಿ 1.67 ಕೋಟಿ ರೂ., ಬಾಗಲಕೋಟೆಯಲ್ಲಿ 1.55 ಕೋಟಿ ರೂ., ಬೀಳಗಿಯಲ್ಲಿ 32 ಲಕ್ಷ ರೂ., ಹುನಗುಂದ 13.83 ಕೋಟಿ ರೂ., ಜಮಖಂಡಿ 8 ಕೋಟಿ ರೂ., ಮುಧೋಳದಲ್ಲಿ 35 ಕೋಟಿ ಹಾಗೂ ತೇರದಾಳದಲ್ಲಿ 7 ಲಕ್ಷ ರೂ. ಸಂಗ್ರಹವಾಗಿದೆ. ಈ ಅನುದಾನವನ್ನು ಗ್ರಾಮಗಳ ರಸ್ತೆ, ಚರಂಡಿ, ನೀರು, ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಮುಂತಾದವುಗಳಿಗೆ ಬಳಸಲಾಗುವುದು. ದೇವಸ್ಥಾನ ಕಟ್ಟಡ ಮಾರ್ಗಸೂಚಿಯಡಿ ಅವಕಾಶವಿಲ್ಲವೆಂದು ಸಚಿವರು ತಿಳಿಸಿದರು.
ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಬಾಗಲಕೋಟೆ ನಗರಕ್ಕೆ 24/7 ನಿರಂತರ ಕುಡಿಯುವ ನೀರು ಸರಬರಾಜಿಗೆ 60 ಕೋಟಿ ರೂ.ಗಳ ಹೆರಕಲ್ ಯೋಜನೆಯನ್ನು ಇದೇ ಮಾರ್ಚ್ ಒಳಗಾಗಿ ಪೂರ್ಣಗೊಳಿಸಲಾಗುವುದು. ಬರುವ ಏಪ್ರಿಲ್ ಮೊದಲ ವಾರದಿಂದ ನೀರು ಸರಬರಾಜು ಮಾಡಲಾಗುವುದು. ಈಗಾಗಲೇ ಅರಣ್ಯ ಇಲಾಖೆಯವರ ಅನುಮತಿ ದೊರಕಿದೆ ಎಂದು ತಿಳಿಸಿದರು. ಸಂಸದ ಪಿ.ಸಿ ಗದ್ದಿಗೌಡರ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ಕೆ. ರಾಜೇಂದ್ರ. ಎಸ್ಪಿ ಲೋಕೇಶ ಜಗಲಾಸರ ಇದ್ದರು.