Advertisement

ಮೂಲೆಗಳ ಬಳಕೆ

11:42 AM Nov 13, 2017 | |

ಮನೆಯಲ್ಲಿ ಕಿಚನ್‌ ಪ್ಲಾಟ್‌ಫಾರ್ಮ್ “ಎಲ್‌’ ಆಕಾರದಲ್ಲಿತ್ತು ಅಂತಿಟ್ಟುಕೊಳ್ಳಿ ಕೆಳಗಿನ ಹಾಗೂ ಮೇಲಿನ ಸ್ಥಳ ಕೈಗೆ ಸುಲಭದಲ್ಲಿ ಸಿಗುವುದಿಲ್ಲ. ಹಾಗೆಯೇ ಮೂಲೆಯಲ್ಲಿ ಕುರ್ಚಿ- ಸೋಫ‌ ಎಲ್‌ ಆಕಾರದಲ್ಲಿ ಹಾಕಿದರೆ ಇಕ್ಕಟ್ಟಾಗುತ್ತದೆ. ಇನ್ನು ಡಬಲ್‌ ಬೆಡ್‌ ಅನ್ನು ಮೂಲೆಗೆ ಇಟ್ಟರೆ, ಒಬ್ಬರು ಈಕಡೆಗೆ ಮಲಗಿದ್ದಾಗ ಮತ್ತೂಬ್ಬರು ಗೋಡೆಬದಿಗೆ ಹೋಗಿ ಮಲಗಲು ಕಷ್ಟ.

Advertisement

ಮೂಲೆಗಳಲ್ಲಿ ಕಸ ಕಡ್ಡಿ ಸೇರಿಕೊಳ್ಳುವುದಿರಲಿ, ಅನಗತ್ಯ ವಸ್ತುಗಳು “ಮೂಲೆಗುಂಪು’ ಆದ ವಸ್ತುಗಳು ಶೇಖರಗೊಳ್ಳುವುದೂ ಉಂಟು- ಈ ಕಾರಣಕ್ಕಾಗಿಯೇ ನಮ್ಮಲ್ಲಿ “ಮೂಲೆಗುಂಪು’ ಎಂದರೆ ನಿರ್ಲಕ್ಷಕ್ಕೆ ಒಳಗಾದದ್ದು ಎಂಬ ಪದಪ್ರಯೋಗ ಬಂದಿರುವುದು.  ಹಾಗಾಗಿ ಮನೆ ಫ್ಲ್ಯಾನ್‌ ಮಾಡುವಾಗ ನಾವು ನಮ್ಮ ಮನೆಯ ಮೂಲೆಗಳನ್ನು ಹೇಗೆ ಪ್ರಯೋಜನಕ್ಕೆ ಪಡೆಯಬಹುದು ಎಂಬುದನ್ನು ನಿರ್ಧರಿಸಿದರೆ ಮುಂದೆ ಆಗಬಹುದಾದ ಕಿರಿಕಿರಿಯನ್ನು ತಡೆಯಬಹುದು!

ಮೂಲೆಗಳ ನಿರ್ವಹಣೆ: ನೀವು ನಿಮ್ಮ ಮನೆಯ ಸೋಫ‌ ಸೆಟ್‌ ಅನ್ನು ಒಂದು ಮೂಲೆಗೆ ಎಲ್‌ ಆಕಾರದಲ್ಲಿ ಇಡಲು ಬಯಸಿದರೆ, ಮೂಲೆಯಲ್ಲಿ ಒಂದು ಸುಂದರ ಕಾರ್ನರ್‌ ಟೇಬಲ್‌ ಇಡಿ. ಇದರ ಮೇಲೆ ಸುಂದರ ಕಲಾಕೃತಿಗಳನ್ನು, ಕಲಾತ್ಮಕ ಗಡಿಯಾರ, ಕ್ಯಾಲೆಂಡರ್‌, ಲ್ಯಾಂಡ್‌ಲೈನ್‌ ಫೋನ್‌ ಗಳನ್ನು ಇಡಲೂ ಬಹುದು. ನಿಮ್ಮಲ್ಲಿ ಲ್ಯಾಂಡ್‌ ಲೈನ್‌ ಟೆಲೆಫೋನ್‌ ಇದ್ದರೆ, ಫೋನ್‌ ಇಡಲೂ ಕೂಡ ಇದು ಸೂಕ್ತ.

ಮೊಬೈಲ್‌ ಚಾರ್ಜರ್‌ಗಳನ್ನೂ ಕೂಡ ಗೋಡೆಗೆ ಅಳವಡಿಸಿದರೆ, ಟಿವಿ ನೋಡುತ್ತ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಬೆಡ್‌ ರೂಮಿನ ಮೂಲೆಯಲ್ಲಿ ಸಣ್ಣದೊಂದು ಸ್ಟಡಿ ಟೇಬಲ್‌ ಇಡಬಹುದು. ಈ ಸ್ಥಳದಲ್ಲಿ ವಿದ್ಯುತ್‌ ಸಂಪರ್ಕ ಹಾಗೂ ಇಂಟೆರ್‌ ನೆಟ್‌ ಸೌಲಭ್ಯ ನೀಡಿದರೆ ಮಕ್ಕಳು ಅದೇ ಸ್ಥಳವನ್ನು  ಉಪಯೋಗಿಸಬಹುದು.

ಮೂಲೆಗಳನ್ನು “ನಿವಾರಿಸಿ’: ಸಾಮಾನ್ಯವಾಗಿ ಎಲ್‌ ಆಕಾರದಲ್ಲಿ ಫ‌ರ್ನಿಚರ್ ಜೋಡಿಸಿದರೆ ಮೂಲೆ ಕಾಟ ಶುರುವಾಗುತ್ತದೆ.  ಅದೇ ಒಂದು ಬದಿಗೆ, ಇಲ್ಲವೆ ಎದರುಬದಿರು  ಇಟ್ಟರೆ, ಮೂಲೆಗಳ ತೊಂದರೆ ಹೆಚ್ಚಿರುವುದಿಲ್ಲ.  ಹಾಗಾಗಿ ಮನೆಯ ವಿನ್ಯಾಸ ಮಾಡುವಾಗ ಈ ಸಂಗತಿಯನ್ನು ಗಮನದಲ್ಲಿ ಇಟ್ಟುಕೊಂಡು ವಾರ್ಡ್‌ ರೋಬ್‌ ಮಾಡುವುದಿದ್ದರೆ ಗೋಡೆಯಿಂದ ಗೋಡೆಗೆ ಮಾಡಿ. ಆಗ “ಮೂಲೆ’ ಬರುವುದಿಲ್ಲ.

Advertisement

ಗೋಡೆ ಬದಿಯಲ್ಲಿರುವುದು ಮೂಲೆ ಎಂಬುದು ನಿಜವಾದರೂ ಈ ಕೊನೆಯ ಬಾಗಿಲನ್ನೂ ಕೂಡ ಸಂಪೂರ್ಣವಾಗಿ ತೆಗೆಯಲು ಆಗುವ ಕಾರಣ, ಇಡಿ ವಾರ್ಡ್‌ ರೋಬ್‌ ಒಳಗೆ ನಮ್ಮ ಕೈಗೆ ಸಿಗುವಂತೆ ಬಟ್ಟೆಬರೆಯನ್ನು ಜೋಡಿಸಿಕೊಳ್ಳಬಹುದು! ಡೈನಿಂಗ್‌ ರೂಮಿನ ಮೂಲೆಯಲ್ಲಿ ಫ್ರಿಡ್ಜ್ ಅನ್ನು ಗೋಡೆಗೆ ಒತ್ತರಿಸಿ ಇಟ್ಟರೆ ಗಾಳಿ ಆಡುವುದು ಕಡಿಮೆಯಾಗಿ ಕಂಪ್ರಸರ್‌ನ ಕಾರ್ಯಕ್ಷಮತೆ ತಗ್ಗಬಹುದು.

ಹಾಗಾಗಿ ಸ್ವಲ್ಪ ಜಾಗ ಬಿಟ್ಟು ಫ್ರಿಡ್ಜ್ ಅನ್ನು ಇಡುವುದು ಸೂಕ್ತ. ನೀವು ಸೋಫ‌ಸೆಟ್‌ ಅನ್ನು ಎಲ್‌ ಆಕಾರದಲ್ಲಿ ಜೋಡಿಸಿದ್ದರೆ, ಎದುರು ಮೂಲೆಯಲ್ಲಿ ಟಿವಿ ಇಡಲು ಸೂಕ್ತ ಸ್ಥಳ ದೊರಕಿದಂತಾಗುತ್ತದೆ. ಎರಡೂ ಬದಿ ಕುಳಿತಿರುವವರಿಗೆ ಟಿವಿ ವೀಕ್ಷಣೆ ಸಮಾನಂತರ ಕೋನದಲ್ಲಿ ದೊರಕಿದಂತಾಗುತ್ತದೆ. ಚೌಕಾಕಾರದ ಮನೆಯ ಪ್ಲಾನ್‌ಗಳಲ್ಲಿ ಮೂಲೆಗಳು ಸಾಮಾನ್ಯವಾಗಿ ಕಂಡುಬರುತ್ತದೆಯೇ ವಿನಃ ಇತರೆ ಆಕಾರಗಳಲ್ಲಿ ಅಲ್ಲ.

ಇವೆಲ್ಲ  ಸ್ವಲ್ಪ ಕಷ್ಟಕರ ಎಂದೆನಿಸಿದರೂ ನೂತನ ವಿನ್ಯಾಸ ಬಯಸುವವರು ವಿವಿಧ ಆಕಾರದ ಮನೆಗಳ ಪ್ಲಾನ್‌ ಮಾಡಿಸುವುದುಂಟು. ನುರಿತ ಆರ್ಕಿಟೆಕ್ಟ್ ಇಂಜಿನಿಯರ್‌ಗಳಿಗೆ ಹೇಳಿ ಹೆಚ್ಚಾಕಡಿಮೆ ಯಾವುದೇ ಮುಖ್ಯಸ್ಥಳದಲ್ಲಿ ಜಾಗ ವೇಸ್ಟ್‌ ಆಗದಂತೆ ಮೂಲೆ ರಹಿತ ಪ್ಲಾನ್‌ ಮಾಡಿಸಬಹುದು. 

ಲಿವಿಂಗ್‌ ರೂಂ, ಡೈನಿಂಗ್‌,  ಬೆಡ್‌ರೂಂಗಳಲ್ಲಿ  ಚಂದ್ರಾಕೃತಿ, ಪಂಚಮುಖ, ಅಷ್ಟಮುಖ ಇತ್ಯಾದಿಗಳ ಆಕಾರದಲ್ಲಿ ವಿನ್ಯಾಸ ಮಾಡಿಸಿದರೆ, ಮೂಲೆಗಳ ಕಾಟ ಹೆಚ್ಚಿರುವುದಿಲ್ಲ! ಕೆಲವರಿಗೆ ಮೂಲೆಗಳೆಂದರೆ ಆಗುವುದಿಲ್ಲ, ಅಂಥಹವರು  ಮೂಲೆಗಳನ್ನು ತೆರೆವುಗೊಳಿಸಿ ಅಲ್ಲಿ ಕಿಟಕಿಗಳನ್ನು ಇಟ್ಟರೆ, ಒಳಗಿನಿಂದ ನಮಗೆ ಮೂಲೆಯ ಅನುಭವವೇ ಆಗುವುದಿಲ್ಲ! 

ಅಡಿಗೆ ಮನೆಯ ಕಾರ್ನರ್‌ ಪ್ರಾಬ್ಲಮ್‌: ನಮಗೆ ಸಾಮಾನ್ಯವಾಗಿ ಮೂಲೆಗಳು ತೊಂದರೆ ಕೊಡುವುದು ಅಡಿಗೆ ಮನೆಯಲ್ಲೇ, ಇಲ್ಲಿ ನಾನಾ ಕಾರಣಗಳಿಂದಾಗಿ ಎಲ್‌ ಆಕಾರದ ಪ್ಲಾಟ್‌ ಫಾರ್ಮ್ ವ್ಯವಸ್ಥೆ ಅನುಕೂಲಕರ ಹಾಗೂ ಇದು ಅನಿವಾರ್ಯವಾಗಿ ಒಂದು ಮೂಲೆಗೆ ಕಾರಣವಾಗುತ್ತದೆ. ಕಟ್ಟೆಯ ಕೆಳಗೆ ಬಗ್ಗಿ ಮೂಲೆಯಲ್ಲಿ ಏನಾದರೂ ಇಟ್ಟಿದ್ದರೆ ತೆಗೆಯುವುದು ಕಷ್ಟ, ಹಾಗೆಯೇ ಮೇಲೆ ಎತ್ತರದಲ್ಲಿದ್ದರೂ ಕೂಡ ಕೈಗೆ ಎಟುಕುವುದಿಲ್ಲ.

ಹಾಗಾಗಿ ಈಗ ಈ ತೊಂದರೆ ನಿವಾರಿಸಲು “ಇಟಾಲಿಯನ್‌’ ಕಿಚನ್‌ ಜನಪ್ರಿಯಗೊಳಿಸಿದ ಸ್ವಿಂಗಿಂಗ್‌ ಶೆಲ್ಫ್ ಗಳು ಬಹುಉಪಯೋಗದಲ್ಲಿದೆ. ಇವುಗಳನ್ನು ಬೇಕೆಂದಾಗ ಹೊರಗೆ ಎಳೆದುಕೊಂಡು ಸಾಮಾನುಗಳನ್ನು ಇಡಲು, ತೆಗೆಯಲು ಬಳಸಿ ನಂತರ ಇಳಗೆ ತಳ್ಳಿಬಿಡಬಹುದು. ಕೆಲವೊಮ್ಮೆ ಕಟ್ಟೆ ಕೆಳಗಿನ ಸ್ಥಳವನ್ನು ಒಳಗಿನಿಂದ ಕಟ್ಟಿ, ಹೊರಗೆ ತೆರೆದುಕೊಳ್ಳುವಂತೆ ಮಾಡಿದರೆ, ಅಲ್ಲಿಯೇ ಗ್ಯಾಸ್‌ ಸಿಲಿಂಡರ್‌ ಅನ್ನು ಕೂಡ ಇಡಬಹುದು. 

* ಆರ್ಕಿಟೆಕ್ಟ್ ಕೆ.ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next