Advertisement
ಈಗಷ್ಟೇ ಮಕ್ಕಳಿಗೆ ವಾರ್ಷಿಕ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಘೋಷಣೆಯಾಗಿವೆ. ಆದರೆ ಬೇಸಿಗೆ ರಜೆ ವಿವಿಧ ಕೌಶಲ್ಯ ಬೆಳೆಸಿಕೊಳ್ಳಲು ಆಟೋಟ, ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸಬೇಕಿದ್ದ ಮಕ್ಕಳು ಇದೀಗ ರಾಜಕೀಯ ಪಕ್ಷಗಳ ಧ್ವಜಗಳನ್ನು ಹಿಡಿದು ರಾಜಕಾರಣಿಗಳ ಹಿಂದೆ ಸುತ್ತಾಡುತ್ತಿರುವುದು ಜಿಲ್ಲಾದ್ಯಂತ ಕಂಡು ಬರುತ್ತಿದೆ. ಒಂದು ರೀತಿ ಮಕ್ಕಳನ್ನು ಪಕ್ಷಗಳು ಬಾಲ ಕಾರ್ಮಿಕರ ರೀತಿಯಲ್ಲಿ ಪಕ್ಷಗಳ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
Related Articles
Advertisement
ಇಂತಹ ಸಂದರ್ಭದಲ್ಲಿ ಚಿಣ್ಣರನ್ನು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದರಿಂದ ಮಕ್ಕಳ ಮೇಲೆ ಕೂಡ ಇದರ ದುಷ್ಪರಿಣಾಮ ಬೀರುತ್ತದೆ. ಅದರಲ್ಲೂ ಅಪ್ರಾಪ್ತರನ್ನು ಪ್ರಚಾರ ಕಾರ್ಯಗಳಿಗೆ ಬಳಸಿಕೊಳ್ಳುತ್ತಿರುವುದರಿಂದ ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಆಗುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗದೇ ಕೈ ಕಟ್ಟಿ ಕೂತಿರುವುದು ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲೆಯ ಚಿಂತಾಮಣಿ, ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ, ಚಿಕ್ಕಬಳ್ಳಾಪುರ ಮತ್ತಿತರ ಕಡೆಗಳಲ್ಲಿ ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದರೂ ಅಧಿಕಾರಶಾಹಿ ಮಾತ್ರ ಕಂಡು ಕಾಣದಂತೆ ವರ್ತಿಸುತ್ತಿರುವುದು ಆಡಳಿತಶಾಹಿ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಮಕ್ಕಳ ಬಳಕೆಯಲ್ಲಿ ಗೌರಿಬಿದನೂರು ಮೊದಲು: ಮಕ್ಕಳನ್ನು ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರ ಕಾರ್ಯಗಳಿಗೆ ಬಳಸಿಕೊಳ್ಳುವ ವಿಚಾರದಲ್ಲಿ ಜಿಲ್ಲೆಯ ಗೌರಿಬಿದನೂರು ತಾಲೂಕು ಮೊದಲ ಸ್ಥಾನದಲ್ಲಿದೆ. ವಿಪರ್ಯಾಸ ಅಂದ್ರೆ ಬಾಲ್ಯ ವಿವಾಹದಲ್ಲಿ ಗೌರಿಬಿದನೂರು ಮೊದಲ ಸ್ಥಾನದಲ್ಲಿದೆ. ಇದೀಗ ಮಕ್ಕಳನ್ನು ಸಹ ಚುನಾವಣಾ ಪ್ರಚಾರ ಕಾರ್ಯಗಳಿಗೆ ಬಳಸಿಕೊಳ್ಳುವುದು ಇಲ್ಲಿ ಹೆಚ್ಚಾಗಿದ್ದು, ಇಷ್ಟಾದರೂ ಸ್ಥಳೀಯ ಮಕ್ಕಳ ಕಲ್ಯಾಣ ಇಲಾಖೆಯಾಗಲಿ ಅಥವಾ ಸ್ವಯಂ ಸೇವಾ ಸಂಸ್ಥೆಗಳಾಗಲಿ ಇದುವರೆಗೂ ಧ್ವನಿ ಎತ್ತಿಲ್ಲ.
ಗೌರಿಬಿದನೂರು ತಾಲೂಕಿನ ತೊಂಡೇಬಾವಿ, ಮಂಚೇನಹಳ್ಳಿ ಹೋಬಳಿಗಳಲ್ಲಿ ಮಕ್ಕಳನ್ನು ಹೆಚ್ಚಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಒಂದು ರೀತಿ ಬೇಸಿಗೆಯ ಉರಿಬಿಸಿಲಿನಲ್ಲಿ ಮಕ್ಕಳನ್ನು ಸಾಕಷ್ಟು ಶೋಷಣೆ ಮಾಡುತ್ತಿರುವ ರಾಜಕೀಯ ಪಕ್ಷಗಳಿಗೆ ಬುದ್ಧಿ ಕಲಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಿದೆ.
ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಕುರಿತು ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. 18 ವರ್ಷ ಮೇಲ್ಪಟ್ಟ ಯುವಕರು ಪ್ರಚಾರದಲ್ಲಿ ಭಾಗವಹಿಸಬಹುದು. ಆದರೆ ಅಪ್ರಾಪ್ತರನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವಂತಿಲ್ಲ. ಈ ಬಗ್ಗೆ ಯಾರದಾರೂ ದೂರು ಕೊಟ್ಟರೆ ಸಂಬಂಧಪಟ್ಟ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. -ಬಿ.ಶಿವಸ್ವಾಮಿ, ಸಹಾಯಕ ಚುನಾವಣಾ ಅಧಿಕಾರಿ, ಚಿಕ್ಕಬಳ್ಳಾಪುರ * ಕಾಗತಿ ನಾಗರಾಜಪ್ಪ