Advertisement

ಅಡಿಕೆ ಹಳದಿ ರೋಗ ಸಂತ್ರಸ್ತರಿಗಿಲ್ಲ ಪರಿಹಾರ

01:28 AM Oct 07, 2021 | Team Udayavani |

ಪುತ್ತೂರು: ಅಡಿಕೆ ಹಳದಿ ರೋಗ ಬಾಧಿತ ಪ್ರದೇಶದ ಬೆಳೆಗಾರರ ನೆರವಿಗೆಂದು ಬಜೆಟ್‌ನಲ್ಲಿ ಮೀಸಲಿರಿಸಿದ 25 ಕೋ.ರೂ. ಅನುದಾನವನ್ನು ಸಂಶೋಧನೆಗೆ ಬಳಸಲು ನಿರ್ಧರಿಸಿದ್ದು, ಬೆಳೆಗಾರರಿಗೆ ನಷ್ಟ ಪರಿಹಾರ ಸಿಗುವ ನಿರೀಕ್ಷೆ ಕಮರಿದೆ.

Advertisement

8.5 ಕೋ.ರೂ.ಗಳನ್ನು ಶಿವಮೊಗ್ಗ ತೋಟಗಾರಿಕಾ ಸಂಶೋಧನಾ ಕೇಂದ್ರಕ್ಕೂ ಉಳಿದ ಮೊತ್ತವನ್ನು ತೋಟಗಾರಿಕಾ ಇಲಾಖೆ ಮೂಲಕ ಹಳದಿ ರೋಗ ಪೀಡಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಲೆಂದು ಮೀಸಲಿಡಲಾಗಿದೆ.

ಡ್ಯಾಮೇಜ್‌ ಕಿಟ್‌

ಹಳದಿ ರೋಗ ಪೀಡಿತ ಅಡಿಕೆ ತೋಟದ ಮಾಲಕರಿಗೆ ನಷ್ಟ ಪರಿಹಾರ ನೀಡುವ ಬದಲು ಡ್ಯಾಮೇಜ್‌ ಪ್ಯಾಕೇಜ್‌ ಕಿಟ್‌ ನೀಡುವ ಉದ್ದೇಶ ತೋಟಗಾರಿಕೆ ಇಲಾಖೆಯದ್ದು ಎನ್ನಲಾಗಿದೆ. ಜತೆಗೆ ಸಂಶೋಧನೆಗೆ ಹಣ ಖರ್ಚು ಮಾಡಲು ನಿರ್ಧರಿಸಲಾಗಿದೆ. ಬೆಳೆಗಾರರ ಪ್ರಕಾರ, 20 ವರ್ಷಗಳಿಂದ ಸಂಶೋಧನೆ ನೆಪದಲ್ಲಿ ಹಲವು ಅಧ್ಯಯನಗಳು ನಡೆದರೂ ಪ್ರಯೋಜನ ಶೂನ್ಯ. ಆದ್ದರಿಂದ ತೋಟಗಾರಿಕೆ ಇಲಾಖೆ ಮೂಲಕ ಸಂಶೋಧನೆಗೆಂದು ಹತ್ತಾರು ಕೋಟಿ ವ್ಯಯಿಸುವುದು ವ್ಯರ್ಥ. ಹಾಗಾಗಿ ಎಕರೆಗೆ ಇಂತಿಷ್ಟು ಮೊತ್ತದ ಪರಿಹಾರ ಮೊತ್ತ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸುಳ್ಯದ ಸಮಸ್ಯೆ ಪರಿಹಾರಕ್ಕೆ ಮನವಿ
ಸುಳ್ಯದಲ್ಲಿ ತೀವ್ರವಾಗಿ ಬಾಧಿಸಿರುವ ಹಳದಿ ರೋಗದಿಂದ ಅಡಿಕೆ ತೋಟ ನಾಶ ಹೊಂದಿದವರಿಗೆ ಹಾಗೂ ಪರ್ಯಾಯ ಬೆಳೆ ಅಳವಡಿಸಿಕೊಳ್ಳದಿದ್ದವರಿಗೆ ಪರಿಹಾರವಾಗಿ ಬಜೆಟ್‌ನಲ್ಲಿ 25 ಕೋಟಿ ರೂ. ಪ್ಯಾಕೇಜ್‌ ಘೋಷಿಸುವಂತೆ ಶಾಸಕ ಸಚಿವ ಎಸ್‌. ಅಂಗಾರ ನೇತೃತ್ವದಲ್ಲಿ ಕರಾವಳಿ ಶಾಸಕರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಜತೆಗೆ ಅಡಿಕೆಯ ಹಳದಿ ರೋಗ ನಿವಾರಣೆಗೆ ಉನ್ನತ ಮಟ್ಟದ ಸಂಶೋಧನೆಗೆ ಆದೇಶ ನೀಡುವಂತೆಯೂ ಆಗ್ರಹಿಸಿದ್ದರು. ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅನುದಾನ ಮೀಸಲಿಟ್ಟಿದ್ದರು.

1,043.38 ಹೆಕ್ಟೇರ್‌ ಬಾಧಿತ ಪ್ರದೇಶ
ದ.ಕ. ಜಿಲ್ಲೆಯಲ್ಲಿ ಅಡಿಕೆ ಹಳದಿ ರೋಗದಿಂದ ಸುಳ್ಯ ತಾಲೂಕಿನ ಹಲವು ಗ್ರಾಮಗಳು ತತ್ತರಿಸಿವೆ. ಬಾಧಿತ ಪ್ರದೇಶಗಳ ವ್ಯಾಪ್ತಿ ಮತ್ತು ತೀವ್ರತೆಯ ಅಂಕಿ-ಅಂಶಗಳನ್ನು ನಿಖರ ಅಧ್ಯಯನ ಮಾಡಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಲುವಾಗಿ ಜನವರಿಯಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಸಂಪಾಜೆ, ಅರಂತೋಡು, ಆಲೆಟ್ಟಿ, ಉಬರಡ್ಕ, ಮರ್ಕಂಜ, ನೆಲ್ಲೂರು ಕೆಮ್ರಾಜೆ, ಮಡಪ್ಪಾಡಿ, ಕೊಡಿಯಾಲ, ಕೊಲ್ಲಮೊಗ್ರು, ಹರಿಹರ ಪಳ್ಳತ್ತಡ್ಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲು ತಂಡ ರಚಿಸಲಾಗಿತ್ತು. 13,993 ಸರ್ವೇ ನಂಬರ್‌ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದ್ದು, ಒಟ್ಟು 7,048 ಸರ್ವೇ ನಂಬರ್‌ ವ್ಯಾಪ್ತಿಯಲ್ಲಿ ರೋಗ ಬಾಧೆ ಕಂಡುಬಂದಿದೆ. 1,043.38 ಹೆಕ್ಟೇರ್‌ಗಳಲ್ಲಿ ಸುಮಾರು 14,29,440 ಅಡಿಕೆ ಮರಗಳು ರೋಗಬಾಧಿತ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ:11.5 ಲಕ್ಷ ಬಾಡಿಗೆಕೊಡುವ ವಾಲ್ಟ್ ಡಿಸ್ನಿ ಇಂಡಿಯಾ

Advertisement

ಜನಪ್ರತಿನಿಧಿಗಳ ಮೌನಸಮ್ಮತಿ
ಸುಳ್ಯದ ಬೆಳೆಗಾರರ ಹಿತದೃಷ್ಟಿಯಿಂದ ಕರಾವಳಿ ಶಾಸಕರು ನೀಡಿದ ಮನವಿಯ ಮೇರೆಗೆ ಯಡಿಯೂರಪ್ಪ ಸರಕಾರದ ಅವಧಿಯಲ್ಲಿ 25 ಕೋ.ರೂ. ಪ್ಯಾಕೇಜ್‌ ಘೋಷಿಸಲಾಗಿತ್ತು. ಈ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂದು ಅಧಿಕಾರಿಗಳು ಶಾಸಕರ ಅಭಿಪ್ರಾಯ ಪಡೆಯದೆ ಸಂಶೋಧನಾ ಕೇಂದ್ರ ಮತ್ತು ತೋಟಗಾರಿಕೆ ಇಲಾಖೆ ಮೂಲಕ ಖರ್ಚು ಮಾಡಲು ನಿರ್ಧರಿಸಿದ್ದು ಬೆಳೆಗಾರರ ಕೆಂಗಣ್ಣಿಗೆ ಗುರಿಯಾಗಿದೆ. ಅಧಿಕಾರಿಗಳ ಏಕಪಕ್ಷೀಯ ತೀರ್ಮಾನಕ್ಕೆ ಜನಪ್ರತಿನಿಧಿಗಳು ಮೌನಸಮ್ಮತಿ ಅಚ್ಚರಿಗೆ ಕಾರಣವಾಗಿದೆ.

ಅಡಿಕೆ ಬೆಳೆಗಾರರ ನೆರವಿಗೆಂದು ಮೀಸಲಿರಿಸಿದ ಮೊತ್ತವನ್ನು ಅಧ್ಯಯನಕ್ಕೆ ಬಳಸಲು ಅಧಿಕಾರಿಗಳು ನಿರ್ಧರಿಸಿರುವುದು ಸರಿಯಲ್ಲ. ಶಾಸಕರ ನೇತೃತ್ವದಲ್ಲಿಯೇ ಹಣ ಬಳಕೆಯ ಬಗ್ಗೆ ನಿರ್ಧಾರ ಆಗಬೇಕು. ಈ ಬಗ್ಗೆ ಬೆಂಗಳೂರಿನಲ್ಲಿ ನಡೆದ ಟಾಸ್ಕ್ಫೋರ್ಸ್‌ ಸಭೆಯಲ್ಲಿ ಪ್ರಸ್ತಾವಿಸಿದ್ದೇನೆ. ಹಳದಿ ರೋಗ ಪೀಡಿತ ಪ್ರದೇಶದ ಬೆಳೆಗಾರರಿಗೆ ಸಾಲ ಕಟ್ಟಲು ನೋಟಿಸ್‌ ಬರುತ್ತಿದೆ. ಅವರು ಎಲ್ಲಿಂದ ಕಟ್ಟುವುದು. ಈ ಬಗ್ಗೆ ಜನಪ್ರತಿನಿಧಿಗಳು ಧ್ವನಿ ಎತ್ತಬೇಕು.
ಕಿಶೋರ್‌ ಕುಮಾರ್‌ ಕೊಡ್ಗಿ,
ಕ್ಯಾಂಪ್ಕೋ ಅಧ್ಯಕ್ಷ

ಪ್ಯಾಕೇಜ್‌ ಮೊತ್ತ ಬಳಕೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಹಳದಿ ರೋಗಕ್ಕೆ ತುತ್ತಾಗಿರುವ ತೋಟಗಳ ಬೆಳೆಗಾರರ ಹಿತಕ್ಕಾಗಿಯೇ ಈ ಹಣ ಬಳಸಲು ಕ್ರಮ ಕೈಗೊಳ್ಳಲಾಗುವುದು.
 - ಎಸ್‌. ಅಂಗಾರ,
ಜಿಲ್ಲಾ ಉಸ್ತುವಾರಿ ಸಚಿವ, ದ.ಕ. ಜಿಲ್ಲೆ

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next