ನೆಲಮಂಗಲ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಂಕವಸೂಲಿ ಮಾಡುವ ಟೋಲ್‌ಗಳ ತುರ್ತು ಸೇವೆಗಾಗಿರುವ ಆ್ಯಂಬುಲೆನ್ಸ್‌ಗಳನ್ನು ಟೋಲ್ ಸಿಬ್ಬಂದಿಗಳ ಪಿಕಪ್‌ಡ್ರಾಪ್‌ಗೆ ಬಳಕೆಯಾಗುತ್ತಿವೆ.
ತಾಲೂಕಿನ ಮೂಲಕ 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಂಪರ್ಕ ಸೇತುವೆಯಾಗಿರುವ ಎರಡು ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕು ಟೋಲ್‌ಗಳಿದ್ದು, ಬೆಂಗಳೂರಿಗೆ ಪ್ರವೇಶಿಸಲು ನವಯುಗ ಟೋಲ್ ದಾಟಬೇಕಾಗುತ್ತದೆ. ಈ ಹೆದ್ದಾರಿಯಲ್ಲಿ ಪ್ರತಿನಿತ್ಯ ಹಲವು ಅಪಘಾತ ಪ್ರಕರಣಗಳು ದಾಖಲಾಗುತಿದ್ದರೂ, ಈ ಟೋಲ್‌ನವರು ಮಾತ್ರ, ತುರ್ತುಸೇವೆಗಾಗಿ ನೀಡಿರುವ ಆ್ಯಂಬುಲೆನ್ಸ್ ಅನ್ನು ಗಾಯಾಳುಗಳ ರಕ್ಷಣೆ ಮಾಡುವುದನ್ನು ಬಿಟ್ಟು ಎಬಿಸಿ ಎಂಬ ಮೂರು ಪಾಳಿಯಾಗಿ 150ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
ಒಂದೇ ಆ್ಯಂಬುಲೆನ್ಸ್ : ಬೆಂಗಳೂರಿನಿಂದ ನೆಲಮಂಗಲದವರಗೂ 28 ಕಿ.ಮೀ ದೂರವಿರುವ ನವಯುಗ ಟೋಲ್ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುವುದನ್ನು ಕಾಣ ಬಹುದಾಗಿದೆ. ಆದರೆ, ಟೋಲ್‌ನಿಂದ ತುರ್ತು ಸೇವೆಗಾಗಿ ನೀಡಿರುವ ಕೇವಲ ಒಂದು ಆಂಬುಲೆನ್ಸ್ ಕೂಡ ಸಿಬ್ಬಂದಿ ಪಿಕಪ್‌ಡ್ರಾಪ್‌ಗಾಗಿ ಬಳಕೆಯಾಗುತ್ತಿದೆ.ಅಪಘಾತವಾದರೆ ಖಾಸಗಿ ವಾಹನಗಳು ಅಥವಾ ಅದೃಷ್ಟವಿದ್ದರೆ 108 ಅಂಬುಲೆನ್ಸ್ ಮೂಲಕ ಆಸ್ಪತ್ರೆ ಸೇರುವ ಅನಿವಾರ್ಯತೆ ಎದುರಾಗಿದೆ.
ಅಪಘಾತಗಳ ಪ್ರಮಾಣ : ರಾಷ್ಟ್ರೀಯ ಹೆದ್ದಾರಿ 48 ಹಾಗೂ 75ರಲ್ಲಿ 2018ರಲ್ಲಿ 590 ಅಪಘಾತಗಳಾಗಿ, 132 ಜನ ಮೃತರಾಗಿದ್ದಾರೆ. ಇನ್ನೂ 2019ರಲ್ಲಿ 521 ಅಪಘಾತಗಳಿಂದ 133 ಜನ ಸಾವಿಗೀಡಾಗಿದ್ದು, 553 ಜನರು ಗಾಯಾಳುಗಳಾಗಿದ್ದಾರೆ. ಇದರ ಜೊತೆ ಹೊಸವರ್ಷದ ಆರಂಭದ ತಿಂಗಳಿನಲ್ಲಿ 56 ಅಪಘಾತಗಳಾಗಿದ್ದು , 11 ಜನರು ಪ್ರಾಣಬಿಟ್ಟಿದ್ದಾರೆ. ಈ ಪ್ರಮಾಣದ ಅಪಘಾತ ಸಂಭವಿಸುವ ರಸ್ತೆಗಳಲ್ಲಿ ಕೋಟಿಕೋಟಿ ಸುಂಕವಸೂಲಿ ಮಾಡುವ ಟೋಲ್‌ಗಳು ಆ್ಯಂಬುಲೆನ್ಸ್ ಸೇವೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ದುರಂತ.
ಅಧಿಕಾರಿಗಳ ಎಡವಟ್ಟು : ಕಚೇರಿಯಿಂದಲೇ ಸಿಬ್ಬಂದಿಗಳನ್ನು ಅಂಬುಲೆನ್ಸ್ ಮೂಲಕ ಡ್ರಾಪ್ ಮಾಡುವ ಪದ್ಧತಿಯನ್ನು ರೂಢಿ ಮಾಡಿಕೊಂಡಿರುವ ಅಧಿಕಾರಿಗಳ ಎಡವಟ್ಟಿಗೆ ಅಮಾಯಕ ಜೀವಗಳು ಬಲಿಯಾಗಿವೆ. ಈ ಬಗ್ಗೆ ಪ್ರಶ್ನಿಸಿದರೆ ಯಾವೊಬ್ಬ ಅಧಿಕಾರಿಯೂ ಉತ್ತರ ನೀಡುತ್ತಿಲ್ಲ.
ಪ್ರತಿಕ್ರಿಯಿಸಿ ಆ್ಯಂಬುಲೆನ್ಸ್ ಈ ರೀತಿ ಸಿಬ್ಬಂದಿಗಳ ಬಳಕೆಗಾಗಿ ಬಳಸಿಕೊಳ್ಳುತ್ತಿರುವುದು ಬೇಸರ ತಂದಿದೆ. ತಕ್ಷಣ ಪ್ರಕರಣದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. ಮಾನವೀಯತೆಯಿಂದ ವರ್ತಿಸಬೇಕಾಗಿರುವುದು ಟೋಲ್ ಅಧಿಕಾರಿಗಳ ಕರ್ತವ್ಯ.
–ಸೋಮಶೇಖರ್ ,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ
-ಕೊಟ್ರೇಶ್ ಆರ್