Advertisement

ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ

01:41 PM Oct 29, 2019 | Suhan S |

ವಿಜಯಪುರ: ಕೃಷಿಯಲ್ಲಿ ಭೂಮಿ ಸಾಮರ್ಥ್ಯವನ್ನು ರಸಗೊಬ್ಬರಗಳ ಬಳಕೆ ಮೂಲಕ ಹೆಚ್ಚಿಸಬೇಕು. ಆ ಮೂಲಕ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು 2022ರ ವೇಳೆಗೆ ಭಾರತದ ರೈತರ ಆದಾಯ ದ್ವಿಗುಣಗೊಳಿಸಲು ಶ್ರಮಿಸಬೇಕು ಎಂದು ವಿಜಯಪುರ ಕೃಷಿ ಕಾಲೇಜಿನ ಡೀನ್‌ ಡಾ| ಎಸ್‌.ಬಿ. ಕಲಘಟಗಿ ಸಲಹೆ ನೀಡಿದರು.

Advertisement

ವಿಜಯಪುರ ಕೃಷಿ ವಿಜ್ಞಾನ ಕೇಂದ್ರ, ಕೋರಮಂಡಲ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಸಗೊಬ್ಬರ ಬಳಕೆ ಮತ್ತು ಜಾಗೃತಿ ಕುರಿತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರೈತರು ರಸಗೊಬ್ಬರ ಬಳಕೆ ವಿಷಯದಲ್ಲಿ ನಿರ್ಲಕ್ಷ ತೋರಬಾರದು. ಭೂಮಿ ಪರಿಸ್ಥಿತಿ ಅರಿಯದೇ ಮನಬಂದಂತೆ ರಸಗೊಬ್ಬರ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಎಚ್ಚರ ವಹಿಸಬೇಕು ಎಂದು ಕಿವಿ ಮಾತು ಹೇಳಿದರು.

ವಿಜಯಪುರ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೊಧನಾ ನಿರ್ದೇಶಕ ಡಾ| ಎಚ್‌.ಬಿ. ಬಬಲಾದ ಮಾತನಾಡಿ, ದೇಶದಲ್ಲಿ ಸುಮಾರು 280 ಮೆಟ್ರಿಕ್‌ ಟನ್‌ ಆಹಾರ ಉತ್ಪಾದನೆ ಮಾಡುತ್ತಿದ್ದೇವೆ. ಆಹಾರ ಉತ್ಪಾದನೆ ಹೆಚ್ಚಿಸಲು ಅಧಿಕ ಪ್ರಮಾಣದಲ್ಲಿ ಯೂರಿಯಾ ಹಾಗೂ ಇತರ ಗೊಬ್ಬರ ಬಳಕೆ ಮಾಡುತ್ತಿದ್ದು, ಅವುಗಳನ್ನು ನಾವು ಸಮರ್ಪಕವಾಗಿ ಕೃಷಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದರು. ಕೋರಮಂಡಲ ಇಂಟರನ್ಯಾಷನಲ್‌ ಪ್ರತಿನಿಧಿ ಅಬ್ದುಲ್‌ ರಜಾಕ್‌ ಮಾತನಾಡಿ, ವಿವಿಧ ಬೆಳೆಗಳಿಗೆ ರಸಗೊಬ್ಬರಗಳ ಬಳಕೆ ಮತ್ತು ಬಳಸುವ ಪ್ರಮಾಣ ಹಾಗೂ ರಸಗೊಬ್ಬರಗಳ ಬಳಕೆಯ ಮಹತ್ವದ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಹ ವಿಸ್ತರಣಾ ನಿರ್ದೇಶಕ ಡಾ| ಆರ್‌.ಬಿ. ಬೆಳ್ಳಿ ಮಾತನಾಡಿ, ರೈತರು ರಸಗೊಬ್ಬರಗಳ ಬಳಕೆ ಕುರಿತು ಸೂಕ್ತ ಮಾಹಿತಿ ಹೊಂದಿರಬೇಕು. ಜೊತೆಗೆ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಜೈವಿಕ ಗೊಬ್ಬರವನ್ನು ಕೂಡ ಸಮರ್ಪಕವಾಗಿ ಬಳಕೆ ಮಾಡಬೇಕು. ಇದರಿಂದ ಕೃಷಿಯಲ್ಲಿ ಹೆಚ್ಚಿನ ಆದಾಯ ಪಡೆಯಲು ಸಾಧ್ಯ. ರೈತರು ಆಧುನಿಕ ಸುಸ್ಥಿರ, ಸಾವಯವ, ಸಮಗ್ರ ಕೃಷಿ ತಂತ್ರಜ್ಞಾನಗಳನ್ನು ಬಳಸಿಕೊಂಡರೆ ರೈತರ ಆದಾಯ ದ್ವಿಗುಣಗೊಳಿಸಲು ನೆರವಾಗುತ್ತದೆ ಎಂದು ಹೇಳಿದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ| ಪ್ರೇಮಾ ಪಾಟೀಲ, ಡಾ| ಸಂಗೀತಾ ಜಾಧವ, ಡಾ| ಶಿವಲಿಂಗಪ್ಪ ಹೋಟಕರ, ಬಿ.ಮಲ್ಲಪ್ಪ ಹಾಗೂ ನೂರಾರು ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿಜಯಪುರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಎಸ್‌.ಎ. ಬಿರಾದಾರ ಸ್ವಾಗತಿಸಿದರು. ಎಸ್‌ .ಸಿ. ರಾಠೊಡ ನಿರೂಪಿಸಿದರು. ಡಾ| ವಿವೇಕ್‌ ದೇವರನಾವದಗಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next