ತುರುವೇಕೆರೆ: ರೈತರು ಕೃಷಿ ಇಲಾಖೆಗಳಿಂದ ಸಿಗುವ ವಿವಿಧ ಸವಲತ್ತು ಪಡೆದುಕೊಳ್ಳು ವುದರ ಜೊತೆಗೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಆರ್ಥಿಕವಾಗಿ ಲಾಭ ಹೊಂದಬೇಕು ಎಂದು ಕಸಬಾ ಜಿಲ್ಲಾ ಪಂಚಾಯಿತಿ ಸದಸ್ಯೆ ರೇಣುಕಾ ಹೇಳಿದರು.
ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಕೃಷಿ ಇಲಾಖೆ, ತಾಲೂಕು ಪಂಚಾಯಿತಿ, ತೋಟಗಾರಿಕೆ, ಕಂದಾಯ ಹಾಗು ಹಲವು ಇಲಾಖೆಗಳ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಸಮಗ್ರ ಕೃಷಿ ಅಭಿಯಾನದಡಿ ‘ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ’ಮಾಹಿತಿ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೃಷಿಗೆ ಶಾಶ್ವತ ಯೋಜನೆ ರೂಪಿಸಿ: ಪ್ರತಿಯೊಂದು ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಪ್ರಾಮಾಣಿಕವಾಗಿ ಹಾಗೂ ಜವಾ ಬ್ದಾರಿಯಿಂದ ಸರ್ಕಾರದ ವಿವಿಧ ಯೋಜನೆ ಫಲಾನುಭವಿಗಳಿಗೆ ತಲುಪಿಸಿದರೆ ದೇಶ ಅಭಿವೃದ್ಧಿಯಾಗುವಲ್ಲಿ ಎರಡು ಮಾತಿಲ್ಲ. ಗ್ರಾಮದ ಕಟ್ಟಕಡೆಯ ರೈತನ ಮನೆ ಬಾಗಿಲಿಗೆ ತಲುಪದೆ ಸರ್ಕಾರದ ಎಷ್ಟೋ ಯೋಜನೆ ಗಳು ಹಳ್ಳ ಹಿಡಿದಿರುವ ನಿದರ್ಶನಗಳಿವೆ. ಪ್ರಕೃತಿಯ ಮುನಿಸಿನಿಂದ ಇಂದು ರೈತರ, ಸಾಮಾನ್ಯರ ಬದುಕು ತಳಹೊಡೆದ ದೋಣಿ ಯಂತಾಗಿದೆ. ಇಂತಹ ದಯನೀಯ ಸ್ಥಿತಿಯಲ್ಲಿರುವ ರೈತರಿಗೆ ಸರ್ಕಾರಗಳು ಕೃಷಿಗೆ ಶಾಶ್ವತ ಯೋಜನೆ ರೂಪಿಸಬೇಕು ಎಂದು ಹೇಳಿದರು.
ರೈತರಿಗೆ ಮಾಹಿತಿ ತಿಳಿಸಿ: ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್.ಆರ್. ಪ್ರಮೋದ್ ಕುಮಾರ್ ಮಾತನಾಡಿ, ನಮ್ಮ ಕೃಷಿ ಇಲಾಖೆಯಲ್ಲಿ ಕೃಷಿಗೆ ಸಂಬಂಧಪಟ್ಟ ನೂರಾರು ಯೋಜನೆಗಳಿದ್ದು, ಅವುಗಳ ಬಗ್ಗೆ ಕೂಲಂಕಷ ಮಾಹಿತಿ ಹಳ್ಳಿಯ ಪ್ರತಿಯೊಬ್ಬ ರೈತರಿಗೂ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಜೊತೆಗೆ ರೈತರು ಹವಾಮಾನ ಆಧಾರಿತ ಹಾಗೂ ಕಡಿಮೆ ನೀರಿನಿಂದ ಬೆಳೆಯುವ ಬೆಳೆಗಳನ್ನು ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬೇಕು. ಈ ಮಾಹಿತಿ ರಥಯಾತ್ರೆ ತಾಲೂಕಿನ ನಾಲ್ಕು ಹೋಬಳಿ ಕೇಂದ್ರಗಳಲ್ಲಿಯೂ ಸಂಚರಿಸಲಿದೆ ಎಂದು ಹೇಳಿದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ನಾಗರತ್ನ, ಜಿಲ್ಲಾ ಕೃಷಿಕ ಸಮಾಜದ ಚನ್ನಕೇಶವ, ಕಸಬಾ ಕೃಷಿ ಅಧಿಕಾರಿ ಎಸ್.ನರಸಿಂಹರಾಜು, ಸಿಬ್ಬಂದಿ ಇದ್ದರು.