ಮಂಗಳೂರು: ದ.ಕ. ಜಿಲ್ಲೆಯ ಪ್ರತಿಯೊಬ್ಬ ರೈತರು ರೈತಸ್ನೇಹಿ ಯೋಜನೆಯಾದ ಕಿಸಾನ್ ಕ್ರೆಡಿಟ್ ಕಾರ್ಡ್‌ನ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧ ವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ವಿವಿಧ ಬ್ಯಾಂಕರ್‌ಗಳ ವಿಶೇಷ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎ. 24ರಂದು ನಡೆಯುವ ಪಂ. ರಾಜ್ ದಿನದಂದು ಪ್ರಧಾನಿಯವರು ಮಹಾ ಗ್ರಾಮಸಭಾ ಕಾರ್ಯಕ್ರಮದಲ್ಲಿ “ಕಿಸಾನ್ ಭಾಗಿದಾರಿ, ಪ್ರಾಥಮಿಕ ಹಮಾರಿ’ ಎಂಬ ಬೃಹತ್ ಆಂದೋ ಲನಕ್ಕೆ ಚಾಲನೆ ನೀಡಲಿದ್ದಾರೆ. ಈ ಆಂದೋಲನ ಮೇ 1ರ ವರೆಗೆ ನಡೆ ಯಲಿದೆ. ಈ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಿ.ಎಂ. ಕಿಸಾನ್ ಫಲಾನುಭವಿಗಳು ಈ ಯೋಜನೆಯ ಸದುಪ ಯೋಗ ಪಡೆಯುವಂತೆ ತಿಳಿಸಿದರು.
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಬೆಳೆ ಸಾಲ ಪಡೆಯಲು ಪ್ರೋತ್ಸಾಹ ನೀಡಬೇಕು. ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಗಳ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸುವಂತೆ ತಿಳಿಸಿದರು.
ಗ್ರಾಮೀಣ ಭಾಗದ ಬ್ಯಾಂಕ್‌ಗಳು, ಸಹಕಾರಿ ಸಂಘಗಳು ಈ ಬಗ್ಗೆ ಹೆಚ್ಚಿನ ಒಲವು ತೋರಿ ಜನರು ಬೆಳೆ ಸಾಲ ಪಡೆಯುವಂತೆ ಪ್ರೋತ್ಸಾಹಿಸಬೇಕು, ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್‌ಗಳಲ್ಲಿ ಶೂನ್ಯ ಬಡ್ಡಿದರದಲ್ಲಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಇತರ ಖಾಸಗೀ ಬ್ಯಾಂಕ್‌ಗಳಲ್ಲಿ ಶೇ. 4ರಷ್ಟು ಬಡ್ಡಿ ದರದಲ್ಲಿ ಈ ಸೌಲಭ್ಯ ದೊರೆಯಲಿದೆ ಎಂದರು.
ಇದನ್ನೂ ಓದಿ:ತೋಕೂರು : 800 ವರ್ಷಗಳ ಇತಿಹಾಸವಿರುವ ದೇವಳದ ಗರ್ಭ ಗುಡಿಯಲ್ಲಿ ಚಿನ್ನದ ಜೋಡಿ ಮಯೂರ ಪತ್ತೆ
ಪಶುಸಂಗೋಪನೆ, ಮೀನುಗಾರಿಕೆ, ಕುಕ್ಕುಟೋದ್ಯಮ ಇತ್ಯಾದಿಗಳಲ್ಲಿ ತೊಡಗಿಸಿಕೊಂಡವರೂ ಈ ಸೌಲಭ್ಯಕ್ಕೆ ಅರ್ಹರು. ಈ ಆಂದೋಲನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಪುತ್ತೂರು ವಿಭಾಗಕ್ಕೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಚ್.ಆರ್. ನಾಯಕ್ ಮತ್ತು ಮಂಗಳೂರು ವಿಭಾಗಕ್ಕೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತಾ ಅವರನ್ನು ನೋಡಲ್ ಅಧಿಕಾರಿಗಳಾಗಿ ನಿಯೋಜಿಸಲಾಯಿತು.
ನಬಾರ್ಡ್ ಅಧಿಕಾರಿ ಸಂಗೀತಾ ಕರ್ತ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಎಂ.ಪಿ, ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಪ್ರಸನ್ನ ಹಾಗೂ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳ ಅಧಿಕಾರಿಗಳು ಉಪಸ್ಥಿತರಿದ್ದರು.