ಹುಬ್ಬಳ್ಳಿ: ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ನಿರ್ಮೂಲನೆಗಾಗಿ ಪ್ಯಾಕಿಂಗ್ ಮಾಡಲು ಪರಿಸರ ಸ್ನೇಹಿ ವಸ್ತುಗಳ ಬಳಕೆಗೆ ವ್ಯಾಪಾರಸ್ಥರು ಮುಂದಾಗಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಹೇಳಿದರು.
ಇಲ್ಲಿನ ಪಾಲಿಕೆ ಅಯುಕ್ತರ ಕಚೇರಿಯ ಸಭಾಭವನದಲ್ಲಿ ನಡೆದ ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು 2016 ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು 2016 ಅಡಿಯಲ್ಲಿ ಪರಸರಸ್ನೇಹಿ ವಸ್ತುಗಳ ಬಳಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ಯಾಕಿಂಗ್‌ಗೆ ಬಳಸುವ ಪ್ಲಾಸ್ಟಿಕ್ ಬದಲಾಗಿ ಪರಿಸರಸ್ನೇಹಿ ವಸ್ತುಗಳ ಬಳಕೆಗೆ ಮುಂದಾಗಬೇಕು. ಇದರಿಂದ ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಸಾಧ್ಯವಿದೆ.
ಇದರಿಂದ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣದ ಕಡಿಮೆಯಾಗಲಿದೆ ಎಂದು ಹೇಳಿದರು. ತಮ್ಮ ಗ್ರಾಹಕರಿಗೆ ಹೊಮ್ ಡೆಲಿವರಿ ಮೂಲಕ ಆಹಾರ ವಿತರಣೆ ಮಾಡುವ ಪ್ಯಾಕೆಟ್‌ಗಳು ಸಹ ಪರಿಸರ ಸ್ನೇಹಿ ವಸ್ತುಗಳಾಗಿರಬೇಕು. ಅವುಗಳ ಮರು ಸಂಗ್ರಹಣೆಗಾಗಿ ಗ್ರಾಹಕರಿಗೆ ವಿವಿಧ ರೂಪದಲ್ಲಿ ಸಂಭಾವನೆ ಅಥವಾ ರಿಯಾಯಿತಿ ನೀಡುವ ಮೂಲಕ ತ್ಯಾಜ್ಯ ನಿರ್ವಹಣೆ ಕುರಿತು ಹಾಗೂ ಪ್ಲಾಸ್ಟಿಕ್ ನಿಷೇಧದ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಇತರೆ ನಗರಗಳಲ್ಲಿ ಹಾಗೂ ರೇಲ್ವೆ ನಿಲ್ದಾಣಗಳಲ್ಲಿ ಬಳಕೆಯಾದ ಪ್ಲಾಸ್ಟಿಕ್ ಬಾಟಲ್‌ಗಳ ಸಂಗ್ರಹಣೆಗೆಂದು ಘಟಕಗಳನ್ನು ಸ್ಥಾಪಿಸಿದ್ದು, ಅಂತಹ ಮಾದರಿಗಳನ್ನು ಸಹ ಅಳವಡಿಸಬಹುದಾಗಿರುತ್ತದೆ. ವಿವಿಧ ಉತ್ಪಾದನೆಗಳ ಬೈ-ಬ್ಯಾಕ್ ಪದ್ಧತಿಯನ್ನು ಸಹ ಅಳವಡಿಸಿದಲ್ಲಿ ಪ್ರಮುಖವಾಗಿ ಇಲೇಕ್ಟ್ರಾನಿಕ್ ತ್ಯಾಜ್ಯದಿಂದ ಸುಧಾರಣೆ ನಗರದಲ್ಲಿ ಕಂಡುಕೊಳ್ಳಬಹುದಾಗಿದೆ ಎಂದರು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮಾತನಾಡಿ, ಪ್ಯಾಕಿಂಗ್ ವಸ್ತುಗಳ ಸಂಗ್ರಹ, ಮರುಬಳಕೆ ಕುರಿತು ಸಮಗ್ರ ಮಾಹಿತಿ ಇಲಾಖೆಯ ವೆಬ್‌ಸೈಟ್ ನಲ್ಲಿ ಲಭ್ಯವಿದೆ. ಉತ್ಪಾದನೆ ಸಂದರ್ಭದಲ್ಲಿ ಸಮಗ್ರವಾಗಿ ಪ್ಯಾಕಿಂಗ್ ಆಗುವಂತಹ 50 ಮೈಕ್ರಾನಗಿಂತಲೂ ಹೆಚ್ಚಿಗಿರುವ ಪ್ಯಾಕಿಂಗ್ ವಸ್ತುಗಳು ನಿಷೇಧವಾಗಿಲ್ಲ. ಆದರೂ ಪರಿಸರ ರಕ್ಷಣೆ ದೃಷ್ಟಿಯಿಂದ ಪರ್ಯಾಯ ವಸ್ತುಗಳ ಬಳಕೆ ಮಾಡಬೇಕು ಎಂದರು.
ಮೈ ಗ್ರೀನ್ ಬಿನ್ ಸಂಸ್ಥೆಯ ಸುರೇಶ ನಾಯರ ಕಾಂಪೋಸ್ಟ್ ಘಟಕದ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಪರಿಸರ ಅಧಿಕಾರಿ ಶೋಭಾ ಪೋಳ, ಪಾಲಿಕೆ ಪರಿಸರ ಅಭಿಯಂತರ ಆರ್. ವಿಜಯಕುಮಾರ, ಮಿಶ್ರಾ ಪೇಡಾ, ಡಾ| ಮಿನೋಸ್ ಪಿಜ್ಜಾ, ಕೆ.ಎಫ್.ಸಿ, ಪೈ ಇಲೆಕ್ಟ್ರಾನಿಕ್ಸ ಲಿಮಿಟೆಡ್, ಎಲ್.ವಿ.ಟಿ ಇಂಡಸ್ಟ್ರೀಜ್, ವ್ಯಾಪಾರಸ್ಥರು ಹಾಗೂ ಉತ್ಪಾದಕರು ಪಾಲ್ಗೊಂಡಿದ್ದರು.