ಹಬ್ಬ ಎಂದರೆ ಸಂಭ್ರಮ. ದೇವರ ವಿಶೇಷ ಪೂಜೆ, ಹೊಸ ಬಟ್ಟೆ, ಸಿಹಿತಿಂಡಿಗಳ ಜತೆ ಪಟಾಕಿ ಇಲ್ಲದೆ ಹೋದರೆ ಹಬ್ಬಗಳು ಸಂಪೂರ್ಣವಾಗಲು ಸಾಧ್ಯವೆ. ಅದರಂತೆ ಪ್ರಸ್ತುತ ದಿನಗಳಲ್ಲಿ ಬರುತ್ತಿರುವ ಸಾಲು ಸಾಲು ಹಬ್ಬಗಳಿಂದ ಸಹಜವಾಗಿಯೆ ಪಟಾಕಿಗಳ ಹಾವಳಿ ಹೆಚ್ಚಾಗಿದೆ. ಆದರೆ ಪಟಾಕಿಗಳಿಂದ ಆಗುವ ಅನಾಹುತಗಳನ್ನು ಈ ಸಂದರ್ಭದಲ್ಲಿ ಮರೆಯುವಂತಿಲ್ಲ.
ಪಟಾಕಿಗಳಿಂದ ಆಗುತ್ತಿರುವ ಅನಾಹುತಗಳು ನಿನ್ನೆ, ಮೊನ್ನೆಯದಲ್ಲ. ಅದಕ್ಕಾಗಿಯೆ ಸರಕಾರ ಇದೀಗ ಅಪಾಯಕಾರಿ ಪಟಾಕಿಗಳನ್ನು ನಿಷೇಧಿಸಿದ್ದು ಜನರ ಸಂಭ್ರಮಕ್ಕೆ ಕಡಿವಾಣ ಬಿದ್ದಂತಾಗಿದೆ. ಈ ನಿರ್ಧಾರಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ ಬೆಂಗಳೂರಿನ ಅತ್ತಿಬೆಲೆಯ ಪಟಾಕಿ ಅಂಗಡಿಯ ಸ್ಫೋಟದ ಅನಾಹುತ. ಅದಕ್ಕಾಗಿ ಕೇವಲ ಹಸುರು ಪಟಾಕಿಗಳಿಗೆ ಮಾತ್ರ ಬಳಸಬೇಕು ಎಂದು ಹೇಳಲಾಗುತ್ತಿದೆ.
ಹಬ್ಬ, ಹರಿದಿನ, ಮದುವೆ, ಸಂಭ್ರಮ ಸಮಾರಂಭಗಳಲ್ಲಿ ಇನ್ನೂ ಹಸುರು ಪಟಾಕಿಗಳನ್ನೇ ಬಳಸಬೇಕು ಎಂದು ಕಡಾಯಗೊಳಿಸಿದರೆ ಎಷ್ಟು ವಿಶೇಷವಾಗಿರಬಹುದು ಅಲ್ಲವೆ. ಎಲ್ಲರು ಇವುಗಳ ಬಳಕೆ ಆರಂಭಿಸಿದರೆ ಪರೋಕ್ಷವಾಗಿ ಪರಿಸರಕ್ಕೆ ನಮ್ಮದೊಂದು ಕೊಡುಗೆ ನೀಡಿದಂತಾಗುತ್ತದೆ. ಹಸುರು ಪಟಾಕಿ ಹೆಸರೇ ಹೇಳುವಂತೆ ಅಲ್ಪ ಮಟ್ಟಿಗೆ ಪರಿಸರ ಸ್ನೇಹಿಯಾಗಿವೆ. ಈ ಪಟಾಕಿಗಳಿಂದ ಅತಿಯಾದ ಶಬ್ಧ ಹಾಗೂ ವಾಯು ಮಾಲಿನ್ಯ ಉಂಟಾಗುವುದಿಲ್ಲ. ಹಾಗೂ ಇವುಗಳಲ್ಲಿ ರಾಸಾಯನಿಕಗಳು ಇರುವುದಿಲ್ಲ. ಇದರಿಂದಾಗಿ ಹಬ್ಬಗಳಲ್ಲಿ ಆಗುವ ಮಾಲಿನ್ಯವನ್ನು ಆದಷ್ಟು ಕಡಿಮೆ ಮಾಡಬಹುದು.
ಪರಿಸರ ಸ್ನೇಹಿ ಆಗಿರುವ ಈ ಪಟಾಕಿಗಳನ್ನು ಮಿತವಾಗಿ ಬಳಸುವುದರಿಂದ ಪ್ರಕೃತಿ, ಪ್ರಾಣಿ, ಪಕ್ಷಿ, ಮನುಷ್ಯರ ಜೀವವನ್ನು ಉಳಿಸಿದಂತಾಗುತ್ತದೆ ಹಾಗೂ ಇಷ್ಟು ವರ್ಷಗಳಲ್ಲಿ ಆದಂತಹ ಅನಾಹುತಗಳನ್ನು ಮುಂದಿನ ದಿನಗಳಲ್ಲಿ ತಪ್ಪಿಸಿದಂತಾಗುತ್ತದೆ. ಅತಿಯಾದರೆ ಅಮೃತವು ವಿಷವಾಗುತ್ತದೆ ಎನ್ನುವ ಗಾದೆಯಂತೆ ಯಾವುದೇ ಸಂಭ್ರಮವಾಗಲಿ ಮಿತವಾಗಿದ್ದರೆ ಉತ್ತಮ. ನಮಗಿಂತ ಮೀರಿದ ಶಕ್ತಿ ಪ್ರಕೃತಿ ಅದಕ್ಕೆ ಹಾನಿಯಾದರೆ ನಮ್ಮ ಜೀವನವನ್ನೇ ಅಪಾಯಕ್ಕೆ ಒಡ್ಡಿದಂತಾಗುತ್ತದೆ. ಹೀಗಾಗಿ ಪಟಾಕಿಗಳು ಮಾತ್ರವಲ್ಲ, ಉಳಿದಂತೆ ಪರಿಸರ ಸ್ನೇಹಿ ಪರಿಕರಗಳನ್ನೇ ಹೆಚ್ಚು ಬಳಕೆ ಮಾಡುವುದು ಒಳಿತು.
-ಚಂದ್ರಶೇಖರ್ ವಿ.
ಎಸ್.ಡಿ.ಎಂ., ಉಜಿರೆ