ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರದೇಶ, ದಿಡ್ಡಿ ಹನುಮಂತ ದೇವಸ್ಥಾನ, ಪೊಲೀಸ್ ಠಾಣೆ ಹಾಗೂ ಸಂಜೀವಿನಿ ಆಸ್ಪತ್ರೆಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಭೇಟಿ ನೀಡಿ ಪರಿಶೀಲಿಸಿದರಲ್ಲದೆ ಗಲಭೆ ಸೃಷ್ಟಿಸುವವರ ವಿರುದ್ಧ ಕೋಕಾ ಕಾಯ್ದೆ ಪ್ರಯೋಗಕ್ಕೆ ಒತ್ತಾಯಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಎಲ್ಲಾ ಭಾಗಗಳಿಂದ ಜನರು ಗಲಭೆಗೆ ಬಂದಿದ್ದಾರೆ. ಹೀಗಾಗಿ ಪೂರ್ವ ನಿಯೋಜಿತ ಕೃತ್ಯ ಎನ್ನುವುದರಲ್ಲಿ ಅನುಮಾನವಿಲ್ಲ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರು ಗಲಭೆಯಲ್ಲಿ ಪಾಲ್ಗೊಂಡಿದ್ದರು. ಕನಿಷ್ಟ ಸಾವಿರ ಜನರ ಬಂಧನ ಆಗಬೇಕು. ಬೇಕಾದರೆ ಪೊಲೀಸ್ ಇಲಾಖೆಗೆ ನಾವೇ ಹೆಸರು ಕೊಡುತ್ತೇವೆ ಎಂದರು.
ಕಾಂಗ್ರೆಸ್ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರು, ಮುಖಂಡ ಅಲ್ತಾಫ್ ಕಿತ್ತೂರರನ್ನು ಬಂಧಿಸಬೇಕು. ಇವರಿಬ್ಬರೂ ಗಲಭೆಗೆ ಕುಮ್ಮಕ್ಕು ನೀಡಿ ನಂತರ ಠಾಣೆ ಬಳಿ ಬಂದು ನಾಟಕವಾಡಿದ್ದಾರೆ. ಅಭಿಷೇಕ ಹಿರೇಮಠ ಇಟ್ಟಿರುವ ಸ್ಟೇಟಸ್‌ನಲ್ಲಿ ಅಂತಹ ಅವಹೇಳನಕಾರಿ ಅಂಶವೇನಿದೆ. ಉದ್ದೇಶಪೂರ್ವಕ ಗಲಾಟೆ ಮಾಡಬೇಕು ಎನ್ನುವ ಕಾರಣಕ್ಕೆ ನೆಪವಾಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಗಲಭೆಯ ಪ್ರಮುಖ ರೂವಾರಿ ವಾಸಿಂ ಪಠಾಣ ಈ ಕೃತ್ಯದ ಬಗ್ಗೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಏಕಕಾಲಕ್ಕೆ ಇಷ್ಟೊಂದು ಜನರನ್ನು ಗಲಾಟೆಗೆ ಕರೆಸಿದ್ದಾರೆ. ಗೋಪನಕೊಪ್ಪ, ಮಂಟೂರು ರಸ್ತೆ, ಗಣೇಶಪೇಟೆ ಸೇರಿದಂತೆ ವಿವಿಧ ಭಾಗಗಳಿಂದ ಬಂದಿದ್ದಾರೆ. ಈ ವ್ಯಕ್ತಿ ರಜಾಕ್ ಅಕಾಡೆಮಿ, ರೀ ಬಿಲ್ಟ್ ಬಾಬರ್ ಮಸೀದಿ ಎನ್ನುವ ಸಂಘಟನೆ ಮಾಡಿಕೊಂಡಿದ್ದಾನೆ. ದೇವಸ್ಥಾನಗಳಿಗೆ ಕಲ್ಲು ತೂರಿರುವುದನ್ನು ನೋಡಿದರೆ ಇದು ಹಿಂದೆ ಮುಸ್ಲಿಂ ದೊರೆಗಳ ಮನಸ್ಥಿತಿಯನ್ನು ತೋರುತ್ತದೆ. ಕೇವಲ ಕಾನೂನು ಪಾಲನೆಗಾಗಿ ಮಾತ್ರ ಕಾಯ್ದೆಗಳನ್ನು ಹಾಕಿದರೆ ಹಿಂದೂ ಸಮಾಜ ಪಾಠ ಕಲಿಸುವ ಕೆಲಸ ಮಾಡಲಿದೆ ಎಂದರು.