Advertisement

ಅಕ್ರಮ ತಡೆಯಲು ಸಿ-ವಿಜಲ್‌ ಆ್ಯಪ್‌ಬಳಸಿ

05:24 PM Apr 04, 2019 | Team Udayavani |

ನರಗುಂದ: ಚುನಾವಣಾ ಆಯೋಗ ಸಿ-ವಿಜಲ್‌ ಆ್ಯಪ್‌ ನ್ನು ಸಾರ್ವತ್ರಿಕಗೊಳಿಸಲಾಗಿದೆ. ಚುನಾವಣೆಯಲ್ಲಿ ಅಕ್ರಮಗಳು ಕಂಡು ಬಂದಲ್ಲಿ ಆಪ್‌ ಮೂಲಕ ಮಾಹಿತಿ ರವಾನಿಸಿದರೆ ನೇರವಾಗಿ ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತದೆ ಎಂದು ಜಿಪಂ ಮುಖ್ಯ ಕಾರ್ಯದರ್ಶಿ ಮಂಜುನಾಥ ಚವ್ಹಾಣ ಹೇಳಿದರು.

Advertisement

ಬುಧವಾರ ಪಟ್ಟಣದ ಕೃಷಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆವರು, ಸಿ-ವಿಜಲ್‌ ಆ್ಯಪ್‌ನ್ನು ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಡೌನಲೋಡ್‌ ಮಾಡಿಕೊಳ್ಳಬಹುದು. ಅಕ್ರಮಗಳ ಛಾಯಾಚಿತ್ರ ತೆಗೆದು ಅಪ್‌ಲೋಡ್‌ ಮಾಡಿದರೆ ಕ್ಷಣಾರ್ಧದಲ್ಲಿ ಚುನಾವಣಾ ಆಯೋಗ ಸ್ವಯಂ ದೂರು ದಾಖಲಿಸಿಕೊಂಡು ಸಂಬಂಧಿಸಿದ ಫ್ಲೈಯಿಂಗ್‌ ಸ್ಕ್ವಾಡ್‌ಗೆ ಮಾಹಿತಿ ನೀಡುತ್ತದೆ. ಆ ಮೂಲಕ 100 ನಿಮಿಷದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಚುನಾವಣಾ ಆ್ಯಪ್‌: ಮತ್ತೂಂದು ಚುನಾವಣಾ ಆ್ಯಪ್‌ ಬಿಡುಗಡೆ ಮಾಡಲಾಗಿದ್ದು, ಅಂಗವಿಕಲರು ನೇರವಾಗಿ ವೀಲ್‌ಚೇರ್‌ ಸೌಲಭ್ಯಕ್ಕೆ ಬೇಡಿಕೆ ಸಲ್ಲಿಸಬಹುದು. ಎಲ್ಲ ಮತದಾರರು ಆ ಮೂಲಕ ಮತದಾನ ವಿವರ, ಬೂತ್‌ ಸಂಖ್ಯೆ ಮುಂತಾದ ಮಾಹಿತಿ ನೇರವಾಗಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಖಚಿತ ಮಾಡಿಕೊಳ್ಳಲು ಎಸ್‌ಎಂಎಸ್‌, ಆನ್‌ಲೈನ್‌ನಲ್ಲಿ ಎಪಿಕ್‌ ಕಾರ್ಡ್‌ ಅಥವಾ ಹೆಸರು ನಮೂದಿಸಿ ಖಚಿತ ಮಾಡಿಕೊಳ್ಳಬಹುದು. ದೂರವಾಣಿ ಸಂಖ್ಯೆ 1950 ಟೋಲ್‌ ಫೀ ಸ್ಥಾಪಿಸಲಾಗಿದ್ದು, ಈ ಮೂಲಕ ಚುನಾವಣಾ ಮಾಹಿತಿ ಪಡೆಯಬಹುದು ಎಂದರು. ಮಿಂಚಿನ ನೋಂದಣಿ: ಜಿಲ್ಲೆಯಲ್ಲಿ 32 ಸಾವಿರ ಯುವ ಮತದಾರರು ಮತದಾನದಿಂದ ಹೊರಗುಳಿದ ಮಾಹಿತಿಯಿದೆ. ಮಿಂಚಿನ ನೋಂದಣಿ ಮುಂತಾದ ಜಾಗೃತಿಯಿಂದ 18,700 ಯುವ ಮತದಾರರ ಹೊಸ ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ 9,300 ಅಂಗವಿಕಲರನ್ನು ಗುರುತಿಸಲಾಗಿತ್ತು. ಈ ಬಾರಿ 13
ಸಾವಿರ ಅಂಗವಿಕಲರಲ್ಲಿ 12,212 ಅಂಗವಿಕಲರನ್ನು ಗುರುತಿಸಿದ್ದು, 605 ಅಂಧರು, 379 ಮೂಗರು, 1907 ಮೊಣಕಾಲಿನ ಸಮಸ್ಯೆ ಉಳ್ಳವರು, 471 ಇತರೆ ಮತದಾರರನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

Advertisement

ಜಿಲ್ಲೆಯ 959 ಮತಗಟ್ಟೆಗಳಲ್ಲಿ ಅಂಗವಿಕಲರಿಗೆ ತಲಾ ಒಂದು ವೀಲ್‌ಚೇರ್‌ ವ್ಯವಸ್ಥೆ ಮಾಡಿದ್ದು,ತೀವ್ರ ಅಂಗವಿಕಲರನ್ನು ಮತಗಟ್ಟೆಗೆ ಕರೆತಂದು ಮರಳಿ ಮನೆಗೆ ಬಿಡಲು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಗದಗ ಎಪಿಎಂಸಿ 102ನೇ ಮತಗಟ್ಟೆ ಅಂಗವಿಕಲರ ಮತಗಟ್ಟೆಯಾಗಿ ಪರಿವರ್ತಿಸಲಾಗಿದೆ. ಇಲ್ಲಿ ಚುನಾವಣೆ ಸಿಬ್ಬಂದಿ ಕೂಡ ಅಂಗವಿಕಲರನ್ನೇ ನಿಯೋಜಿಸಲಾಗಿದೆ ಎಂದರು.

ಕಡಿಮೆ ಮತದಾನ ಮತಗಟ್ಟೆ: ಜಿಲ್ಲೆಯ 94 ಕಡಿಮೆ ಮತದಾನದ ಮತಗಟ್ಟೆ ಗುರುತಿಸಿದ್ದು,ನರಗುಂದ ಮತಕ್ಷೇತ್ರದಲ್ಲಿ 21 ಮತಗಟ್ಟೆಗಳಿವೆ. ಈ ಮತಗಟ್ಟೆ ವ್ಯಾಪ್ತಿಯಲ್ಲಿ ಬೀದಿನಾಟಕ, ವಿಶೇಷ ಕಾರ್ಯಕ್ರಮ ಮೂಲಕ ಮತದಾನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ಮತದಾರರಿಗೆ ನೇರವಾಗಿ ಮತ ಚೀಟಿಯೊಂದಿಗೆ ಚುನಾವಣೆ ಸಮಗ್ರ ಮಾಹಿತಿಯುಳ್ಳ ಮತದಾರರ ಕೈಪಿಡಿ, ಮತದಾನ ಸಂಕಲ್ಪ ಪತ್ರವನ್ನು 1 ವಾರ ಮೊದಲು ನೀಡಲಾಗುತ್ತದೆ. ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ಸಿ.ಬಿ. ಬಾಲರಡ್ಡಿ, ಸ್ವೀಪ್‌ ಸಮಿತಿ ಸದಸ್ಯ ಕಾರ್ಯದರ್ಶಿ ಟಿ. ದಿನೇಶ, ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಸುದ್ದಿಗೋಷ್ಠಿಯಲ್ಲಿದ್ದರು.

ಚುನಾವಣಾ ಜಾಗೃತಿ ಜ್ಯೋತಿ ವಿವಿ ಪ್ಯಾಟ್‌, ಇವಿಎಂ ಪ್ರಾತ್ಯಕ್ಷಿಕೆಯಲ್ಲಿ 1ನೇ ಹಂತದಲ್ಲಿ 4,13,389, 2ನೇ ಹಂತದಲ್ಲಿ 3.33 ಲಕ್ಷ ಮತದಾರರು ಭಾಗಿಯಾಗಿದ್ದಾರೆ. ಮತದಾರರ ಜಾಗೃತಿಗೆ ಏ. 15ರಿಂದ ಚುನಾವಣಾ ಜ್ಯೋತಿ ಹೊರಡಿಸಲಾಗುತ್ತಿದ್ದು, ಜಿಲ್ಲೆಯ ಐದೂ ಮತಕ್ಷೇತ್ರಗಳಲ್ಲಿ ಗ್ರಾಪಂವಾರು ಜ್ಯೋತಿ ಸಂಚರಿಸಲಿದೆ.

ವಿಶೇಷವಾಗಿ ಮಹಿಳೆಯರಿಗೆ ರೂಪಿಸಲಾದ ಪಿಂಕ್‌ ಮತಗಟ್ಟೆಗಳನ್ನು ಸಖೀ ಮತಗಟ್ಟೆ ಎಂದು ಪರಿವರ್ತಿಸಿದ್ದು, ಜಿಲ್ಲೆಯಲ್ಲಿ 12 ಮತಗಟ್ಟೆ ಸ್ಥಾಪಿಸಲಾಗಿದೆ. ನರಗುಂದ ಪಟ್ಟಣದ 89, 78, 97ನೇ ಮತಗಟ್ಟೆಗಳನ್ನು ಸಖೀ ಮತಗಟ್ಟೆಗಳಾಗಿ ನಿರ್ಮಿಸಲಾಗುವುದು.
ಮಂಜುನಾಥ ಚವ್ಹಾಣ, ಜಿಪಂ ಮುಖ್ಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next