ನಂಜನಗೂಡು: ಕಾಲ ಬದಲಾದಂತೆ ಸಮಾಜವೂ ಬದಲಾಗಬೇಕು. ಮಹಿಳೆಯರು ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್ ಬಳಸಬೇಕು ಎಂದು ಹಸಿರು ದಳ ಸಂಸ್ಥೆಯ ಸಚಿತ ಶರ್ಮಿಳಾ ಡಿಸೋಜಾ ಮನವಿ ಮಾಡಿದರು.
ನಗರದ ಜ್ಯುಬಲಿಯೇಂಟ್ಸ್ ಭಾರತೀಯ ಫೌಂಡೇಷನ್ ಆವರಣದಲ್ಲಿ ನಂಜನಗೂಡು ನಗರಸಭೆ, ಜ್ಯುಬಿಲಿಯಂಟ್ ಭಾರತೀಯ ಫೌಂಡೇಷನ್ ಹಾಗೂ ಹಸಿರು ದಳ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸದ್ದ ಆಧುನಿಕ ಯುಗದಲ್ಲಿ ಮುಟ್ಟಿನ ಆಯ್ಕೆ ಹಾಗೂ ಮರುಬಳಕೆಗೆ ಅವಕಾಶವಿಲ್ಲದ ಪ್ಯಾಡ್‌ನಿಂದಾಗುವ ಸಮಸ್ಯೆಗಳ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ನಾವು ಉಪಯೋಗಿಸಿ ಬಿಸಾಡುವ ಪ್ಯಾಡ್‌ಗಳು ಪರಿಸರ ಹಾಗೂ ನಮ್ಮ ಆರೋಗ್ಯಕ್ಕೆ ಮಾರಕವಾಗಿವೆ. ಇವುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕಾಗಿದೆ. ಪರಿಸರಕ್ಕೆ ಮಾರಕವಾಗುವ ರಾಸಾಯನಿಕ ಯುಕ್ತ ಸ್ಯಾನಿಟರಿ ಪ್ಯಾಡ್ ಬದಲು ಹೊಸದಾಗಿ ಅವಿಷ್ಕರಿಸಿರುವ ಸಿಲಿಕಾನ್ ಕಫ್ ಉಪಯೋಗಿಸಿ. ಇದರಿಂದ ಸುಸ್ಥಿರ ಪರಿಸರಕ್ಕೂ ನೆರವಾಗಲಿದೆ ಎಂದರು.
ಮುಟ್ಟಿನ ಸಮಯದಲ್ಲಿ ಈ ಹಿಂದೆ ಮಹಿಳೆಯರು ಹತ್ತಿ ಬಟ್ಟೆ ಬಳಸಲಾಗುತ್ತಿತ್ತು. ಬದಲಾದ ಕಾಲದಲ್ಲಿ ರಾಸಾಯನಿಕ ಯುಕ್ತ ಪ್ಯಾಡ್ ಬಂತು. ಈಗ ಅದರ ಬದಲಾಗಿ ಹತ್ತು ವರ್ಷಗಳ ಕಾಲ ಬಳಸಬಹುದಾದ ( ಒಂದೇ ಕಪ್) ಸಿಲಿಕಾನ್ ಕಫ್ ಆವಿಷ್ಕಾರವಾಗಿದೆ. ಇದು ಪರಿಸರ ಹಾಗೂ ಮಹಿಳೆಯರ ಆರೋಗ್ಯ ಹಾಗೂ ಪರಿಸರದ ಮೇಲೆ ಯಾವುದೇ ಹಾನಿಯಾಗುವುದಿಲ್ಲ. ಇಂತಹ ಪರಿಸರ ಸ್ನೇಹಿ ವಸ್ತುಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ಮುಟ್ಟಿನ ಸಮಸ್ಯೆಗೆ ಸ್ಯಾನಿಟರಿ ಪ್ಯಾಡ್ ಖರೀದಿಗೆ ಪ್ರತಿಯೊಬ್ಬರೂ ಸಹಸ್ರಾರು ರೂ. ವ್ಯಯಿಸುತ್ತಾರೆ. ಬಳಸಿ ಬಿಸಾಡುವ ಈ ಸ್ಯಾನಿಟರ್ ಪ್ಯಾಡ್ ಭೂಮಿಯಲ್ಲಿ ಬೇಗ ಕರಗುವುದಿಲ್ಲ. ಇದರ ಬದಲು ಕೇವಲ ನಾಲ್ಕು ಸಾವಿರ ರೂ. ನೀಡಿದರೆ ಮರು ಬಳಕೆಯ ಸಿಲಿಕಾನ್ ಕಪ್ ದೊರೆಯಲಿದೆ. ಜೀವತಾವಧಿ ಇದನ್ನು ಉಪಯೋಗಿಸಬಹುದು. ಜೊತೆಗೆ ಪರಿಸರ ಹಾಗೂ ಆರೋಗ್ಯಕ್ಕೂ ಸಹಕಾರಿಯಾಗಿರಲಿದೆ ಎಂದು ಹೇಳಿದರು.
ನಂಜನಗೂಡು ನಗರದಲ್ಲಿ ಸುಮಾರು 18 ಸಾವಿರ ಸ್ಯಾನಿಟರ್ ಪ್ಯಾಡ್‌ಗಳನ್ನು ಬಳಸಿ ಬಿಸಾಡಲಾಗುತ್ತಿದೆ. ಇದು ನಗರ ಸ್ವತ್ಛತೆ ಹಾಗೂ ನಗರಸಭೆಗೂ ತೊಂದರೆಯಾಗಲಿದೆ. ಪ್ರತಿಯೊಬ್ಬರೂ ಸ್ವತ್ಛ ನಂಜನಗೂಡು ಅಭಿಯಾನದಲ್ಲಿ ಪಾಲ್ಗೊಂಡು ಪರಿಸರ ಸ್ನೇಹಿ ವಸ್ತುಗಳ ಬಳಕೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಸುಷ್ಮಾ, ಸಹಾಯಕ ಅಧಿಕಾರಿ ಬಸಂತ್ ಕುಮಾರ್, ಜ್ಯುಬಿಲಿಯಂಟ್ ಭಾರತೀಯ ಫೌಂಡೇಷನ್‌ನ ದೀಪಕ್, ರವಿ, ಹಸಿರು ದಳದ ಕಾವ್ಯಾ, ನಟರಾಜ ಇತರರಿದ್ದರು.