Advertisement

ಸರ್ಕಾರದ ವಿಶೇಷ ಸೌಲಭ್ಯ ಬಳಸಿಕೊಳ್ಳಿ

07:28 AM Feb 13, 2019 | Team Udayavani |

ತುಮಕೂರು: ಸಮಾಜದಲ್ಲಿ ಹಿಂದುಳಿದ ಸವಿತಾ ಸಮಾಜದ ಸಮುದಾಯಕ್ಕೆಂದು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿದ್ದು, ವಿಶೇಷ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದು ಜಿಪಂ ಅಧ್ಯಕ್ಷೆ ಲತಾ ರವಿಕುಮಾರ್‌ ತಿಳಿಸಿದರು.

Advertisement

ನಗರದ ಬಾಲಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಮತ್ತು ತಾಲೂಕು ನಗರ ಸವಿತಾ ಸಮಾಜ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಅವರ ವೃತ್ತಿಯೇ ಮುಖ್ಯವಾಗಿರುತ್ತದೆ. ಸರ್ಕಾರವು ಇಂಥಸಮುದಾಯಗಳಿಗೆ ವಿಶೇಷ ಸೌಲಭ್ಯ ಜಾರಿಗೊಳಿಸಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.

ಕ್ಷೌರಿಕ ಸಲಕರಣೆ:  ಜಿಪಂ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಮಾತನಾಡಿ, ಜಿಲ್ಲಾ ಪಂಚಾಯತ್‌ ವತಿಯಿಂದ ಜಿಲ್ಲೆಯ ಗೌರವಾನ್ವಿತರ ಅನುದಾನದಡಿ ಉಚಿತ ಕ್ಷೌರಿಕ ಸಲಕರಣೆ ನೀಡಲಾಗುತ್ತಿದ್ದು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. 

ಒಗ್ಗಟ್ಟಾಗಿ ಬದುಕಿ: ಕಾರ್ಯಕ್ರಮದಲ್ಲಿ ಸ್ವದೇಶಿ ಚಿಂತಕ ಎಸ್‌.ವಿಶ್ವನಾಥ್‌ ಉಪನ್ಯಾಸ ನೀಡುತ್ತಾ ಹಿಂದಿನ ಕಾಲದಲ್ಲಿ  ಸಮಾಜದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುವುದಕ್ಕೆ ವೃತ್ತಿಗಳನ್ನು ಮಾಡುತ್ತಿದ್ದರು. ಆ ವೃತ್ತಿಗಳೇ ಇಂದು ಜಾತಿಗಳಾಗಿ ಮಾರ್ಪಟ್ಟಿವೆ. ಜಾತಿ-ಮತ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಬದುಕಬೇಕೆಂದು ತಿಳಿಸಿದರು. 

ಸಾನ್ನಿಧ್ಯವಹಿಸಿ ಮಾತನಾಡಿದ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮಿ ಮೃಗದಂತಿರುವ ಮನುಷ್ಯನನ್ನು ಸುಂದರ ರೂಪ ಕೊಡುವನೇ ಕ್ಷೌರಿಕ. ಕ್ಷೌರಿಕ ಕತ್ತಿ ಹಿಡಿಯುವುದು ಸುಂದರಗೊಳಿಸುವುದಕ್ಕೆ ಮಾತ್ರ ಎಂದು ತಿಳಿಸಿದರು. 

Advertisement

ಕಾರ್ಯಕ್ರಮದಲ್ಲಿ ನೀರಾವರಿ ಇಲಾಖೆಯ ನಿವೃತ್ತ ಸರ್ಕಾರಿ ನೌಕರ ಟಿ.ವಿ.ಸೀತಾರಾಮಯ್ಯ, ಕುಲಕಸುಬದಾರರಾದ ಟಿ.ಸಿ.ಪುಂಡರೀಕ ಹಾಗೂ ಓ.ಕೆ.ವರದರಾಜು, ಹಿರಿಯ ಸಮಾಜ ಸೇವಕರಾದ ನಾರಾಯಣಪ್ಪ ಹಾಗೂ ಸ್ಯಾಕೊಫೋನ್‌ ಕಲಾವಿದೆ ಯಶಸ್ವಿನಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸುಮನ ದಾಸರಾಜು ಮತ್ತು ಸಂಗಡಿಗರಿಂದ ಅಂಬಿಗ ನಾ ನಿನ್ನ ನಂಬಿದೆ ಎಂಬ ಭಕ್ತಿಗೀತೆಗಳ ಗಾಯನ ಏರ್ಪಡಿಸಲಾಗಿತ್ತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ, ಜಿಲ್ಲಾ ಸವಿತಾ ಸಮಾಜ ಗೌರವಾಧ್ಯಕ್ಷ ಟಿ.ವಿ.ರಂಗನಾಥ, ಸುಪ್ರೀಂ ಸುಬ್ರಮಣ್ಯ, ಎಂ.ರಾಜಣ್ಣ, ಅಧ್ಯಕ್ಷ ಮಂಜೇಶ್‌, ಕೆ.ವಿ.ನಾರಾಯಣಪ್ಪ, ಟಿ.ಸಿ.ಮಂಜುನಾಥ್‌, ಬಿ.ರಂಗನಾಥ್‌ ಕಟ್‌ವೆಲ್‌, ಎ.ಎಸ್‌.ಸುರೇಶ್‌ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next