ಬೆಂಗಳೂರು: ಇಂಗ್ಲಿಷ್ ಅಂಕಿಗಳ ಹಾವಳಿಯಿಂದ ಅಳಿವಿನ ಅಂಚಿನಲ್ಲಿರುವ ಕನ್ನಡದ ಅಂಕಿಗಳನ್ನು ಮುಖ್ಯ ನೆಲೆಗೆ ತರಬೇಕಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಹೇಳಿದ್ದಾರೆ.
ಕನ್ನಡ ಅನುಷ್ಠಾನ ಮಂಡಳಿ ಗುರುವಾರ ಮಲ್ಲೇಶ್ವರ ಆಟದ ಮೈದಾನದ ಮುಂಭಾಗ ಹಮ್ಮಿಕೊಂಡಿದ್ದ “ಕನ್ನಡ ಅಂಕಿ ಬಳಕೆ ಸಪ್ತಾಹ’ ಉದ್ಘಾಟಿಸಿ ಮಾತನಾಡಿದ ಅವರು, ಅಂಕಿಗಳು ಭಾಷೆಯ ಸಂವಹನ ಸಂಕೇತಗಳು. ಒಂದು ಭಾಷೆ ವಿಸ್ತರಣೆಗೆ ಅಂಕಿಗಳು ಬಹಳ ಮುಖ್ಯ. ಹಾಗಾಗಿ 1 ರಿಂದ 10 ಅಂಕಿಗಳು ಕಲಿಯುವುದು ಕಷ್ಟವಲ್ಲ ಎಂದರು.
ಕನ್ನಡ ಅಂಕಿಗಳಲ್ಲಿ ಇರುವ ವೈಶಿಷ್ಟತೆ ಬೇರೆ ಯಾವ ಭಾಷೆಯ ಅಂಕಿಗಳಲ್ಲೂ ಕಾಣಲು ಸಾಧ್ಯವಿಲ್ಲ. ಆದರೆ, ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಅಂಕಿಗಳಿಗಿಂತ ಮೂರು ನೂರು ವರ್ಷ ಹಿಂದೆ ನಮ್ಮ ನೆಲದಲ್ಲಿ ನೆಲೆ ಕಂಡುಕೊಂಡ ಇಂಗ್ಲಿಷ್ ಭಾಷೆಯ ಅಂಕಿಗಳೇ ಇದು ಮುಖ್ಯವಾಗಿವೆ. ಇಂಗ್ಲಿಷ್ ಅಂಕಿಗಳು ಮುಖ್ಯ ಎಂಬ ಧೋರಣೆ ಕನ್ನಡಿಗರು ಬಿಡಬೇಕು ಎಂದು ಆವರು ಕರೆ ನೀಡಿದರು.
ಮರೆತು ಹೋಗುತ್ತಿರುವ ಕನ್ನಡ ಅಂಕಿಗಳನ್ನು ಪರಿಚಯಿಸುವ ಕೆಲಸ ಆಗಬೇಕಿದೆ. ಇದಕ್ಕೆ ಮುಖ್ಯವಾಗಿ ಪೊಲೀಸರಿಗೆ ತರಬೇತಿ ನೀಡಬೇಕು. ಜೊತೆಗೆ ಪ್ರತಿಯೊಬ್ಬರಿಗೂ ಕೆಲಸಕ್ಕೆ ಸೇರುವ ಮೊದಲು ಅವರಿಗೆ ಕನ್ನಡ ಅಂಕಿಗಳ ಪರಿಚಯ ಇದೆ ಅಥವಾ ಇಲ್ಲ ಎಂದು ಒಂದು ಸಣ್ಣ ಪರೀಕ್ಷೆ ನಡೆಸಿದರೆ ಒಳ್ಳೆಯದು. ಕನ್ನಡ ಅಂಕಿಗಳ ಬಳಕೆ ಮತ್ತು ಉಳಿಕೆಗೆ ಕನ್ನಡ ಅನುಷ್ಠಾನ ಮಂಡಳಿ ಅಭಿಯಾನ ರೂಪದಲ್ಲಿ ಕೆಲಸ ಮಾಡುತ್ತಿದ್ದು, ಸರ್ಕಾರದ ಮಟ್ಟದಲ್ಲೂ ಇದರ ಬಗ್ಗೆ ಚಿಂತನೆಗಳು ನಡೆಯಬೇಕು ಎಂದರು.
ಕನ್ನಡ ಅನುಷ್ಠಾನ ಮಂಡಳಿ ಅಧ್ಯಕ್ಷ ಆರ್.ಎ. ಪ್ರಸಾದ್ ಮಾತನಾಡಿ, ಕನ್ನಡ ಅಂಕಿ ಬಳಕೆ ಸಪ್ತಾಹದ ಅಂಗವಾಗಿ ಒಂದು ವಾರದಲ್ಲಿ ನಗರದಲ್ಲಿ ಎರಡು ಸಾವಿರ ವಾಹನಗಳಿಗೆ ಕನ್ನಡ ಅಂಕಿಗಳನ್ನು ಬರೆಸುವ ಗುರಿ ಇಟ್ಟುಕೊಳ್ಳಲಾಗಿದೆ. ಆಂಗ್ಲ ಭಾಷೆಯ ಅಬ್ಬರದಲ್ಲಿ ಕನ್ನಡದ ತೇರು ಎಳೆಯುವ ಕೆಲಸ ಮಂಡಳಿ ಮಾಡುತ್ತಿದೆ.
ವಾಹನಗಳಿಗೆ ಒಂದು ಬದಿಯಲ್ಲಿ ಕನ್ನಡದ ಅಂಕಿಗಳನ್ನು ಬರೆಸಲು ಕಾನೂನಿನಲ್ಲಿ ಅವಕಾಶವಿದೆ. ಹಾಗಾಗಿ, ಕನ್ನಡ ಅಂಕಿಗಳನ್ನು ಬರೆಸಿದ ವಾಹನಗಳಿಗೆ ದಂಡ ವಿಧಿಸಿ, ದೂರು ದಾಖಲಿಸುವುದನ್ನು ಕರ್ತವ್ಯಚ್ಯುತಿ ಎಂದು ಪರಿಗಣಿಸಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಅನ್ನುವುದು ಮಂಡಲಿಯ ಒತ್ತಾಯ ಎಂದರು.
ಇದಕ್ಕೂ ಮೊದಲು ದ್ವಿಚಕ್ರವಾಹನವೊಂದಕ್ಕೆ ಕನ್ನಡ ಅಂಕಿಗಳನ್ನು ಬರೆಯುವ ಮೂಲಕ ಡಾ. ವಸುಂಧರಾ ಭೂಪತಿ ಹಾಗೂ ಮಲ್ಲೇಶ್ವರಂ ಶಾಸಕ ಡಾ. ಸಿ.ಎನ್. ಅಶ್ವಥನಾರಾಯಣ ಸಪ್ತಾಹಕ್ಕೆ ಚಾಲನೆ ನೀಡಿದರು.