ಮೈಸೂರು: ಪ್ಲಾಸ್ಟಿಕ್ ಬಳಕೆ ಅನೇಕ ಕಾಯಿಲೆಗಳಿಗೆ ಕಾರಣವಾಗಿದ್ದು, ಪರಿಸರವನ್ನು ನಾಶ ಮಾಡುತ್ತಿದೆ. ಆದ್ದರಿಂದ ನಾವು ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಟ್ಟೆ ಚೀಲ ಬಳಸುವ ಮೂಲಕ ನಮ್ಮ ಅರೋಗ್ಯ ಮತ್ತು ಪರಿಸರ ಕಾಪಾಡಿಕೊಳ್ಳಬೇಕಾಗಿದೆ ಎಂದು ಜೆಎಸ್‌ಎಸ್ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕರಾದ ಪ್ರೊ.ಬಿ.ವಿ.ಸಾಂಬಶಿವಯ್ಯ ಹೇಳಿದರು.
ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜು ವತಿಯಿಂದ ಮೂಡಹಳ್ಳಿಯಲ್ಲಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಕಾರ್ಯಕ್ರಮವಾದ ಉನ್ನತ ಭಾರತ ಅಭಿಯಾನ ಮತ್ತು ಸ್ವತ್ಛತಾ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ಲಾಸ್ಟಿಕ್ ಬಳಕೆ ಬೆಳೆದು ಬಂದ ಬಗೆ ಹಾಗೂ ಅದರಿಂದಾಗುತ್ತಿರುವ ಅನಾನುಕೂಲತೆಗಳ ಬಗ್ಗೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟ ಅವರು ಪ್ಲಾಸ್ಟಿಕ್ ಬಳಕೆ ತ್ಯಜಿಸುವುದು ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಅಲ್ಲದೇ, ನಾವು ಜೀವಿಸುವ ಪರಿಸರವನ್ನು ಸ್ವತ್ಛವಾಗಿಡುವುದು ವೈಯಕ್ತಿಕವಾಗಿ ಎಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಭಾರ ಪ್ರಾಚಾರ್ಯ ಪ್ರೊ.ಡಿ.ಎಸ್.ಸದಾಶಿವಮೂರ್ತಿ, ಗ್ರಾಪಂ ಅಧ್ಯಕ್ಷ ನಂದೀಶ್ ಕುಮಾರ್, ಪಂಚಾಯತ್ ಅಧಿಕಾರಿ ಶಿವಕುಮಾರ್, ಆಲತ್ತೂರು ಗ್ರಾಮದ ಮುಖಂಡ ನಂಜುಂಡಸ್ವಾಮಿ, ಶಾಲಾ ಮುಖ್ಯ ಶಿಕ್ಷಕಿ ಪ್ರೇಮ ಇತರರಿದ್ದರು.
ಪ್ಲಾಸ್ಟಿಕ್ ಚೀಲ ಪಡೆದು ಬಟ್ಟೆ ಬ್ಯಾಗ್ ವಿತರಣೆ: ಜೆಎಸ್‌ಎಸ್ ಕಾಲೇಜಿನ ಸ್ವಯಂ ಸೇವಕರು ಗ್ರಾಮದ ಬೀದಿಗಳಲ್ಲಿ ಜಾಥಾ ನಡೆಸಿ ಬೀದಿ ನಾಟಕಗಳ ಮೂಲಕ ಪ್ಲಾಸ್ಟಿಕ್ ನಿಂದಾಗುವ ಅನಾನುಕೂಲಗಳನ್ನು ಪ್ರದರ್ಶಿಸಿದರು. ಗ್ರಾಮಸ್ಥರಿಂದ ಪ್ಲಾಸ್ಟಿಕ್ ಚೀಲಗಳನ್ನು ಪಡೆದು ಬದಲಿಗೆ ಬಟ್ಟೆ ಬ್ಯಾಗ್‌ಗಳನ್ನು ವಿತರಿಸಿದರು. ಈ ಅಭಿಯಾನವನ್ನು ಆಲತ್ತೂರು, ಮಾದಯ್ಯನ ಹುಂಡಿ, ಹದಿನಾರು ಮೋಳೆ, ಮಲ್ಲರಾಜಯ್ಯನ ಹುಂಡಿ ಗ್ರಾಮಗಳಲ್ಲೂ ನಡೆಸಲಾಯಿತು.