Advertisement

ದಿಲ್ಲಿ ಬಾಲಕ ನಿಸಾರ್‌ಗೆ ಉಸೇನ್‌ ಬೋಲ್ಟ್ ತರಬೇತಿ!

06:50 AM Jan 07, 2018 | Team Udayavani |

ಕಿಂಗ್‌ಸ್ಟನ್: ಮಿಂಚಿನ ಓಟಗಾರ ಉಸೇನ್‌ ಬೋಲ್ಟ್ ಅವರಿಂದ ಓಟದ ತರಬೇತಿ ಪಡೆಯುವುದನ್ನೊಮ್ಮೆ ಕಲ್ಪಿಸಿಕೊಳ್ಳಿ. ಭಾರತದಲ್ಲಿ ಕೈಗಾಡಿ ಎಳೆಯುವವರ ಮಗ ನಿಸಾರ್‌ ಅಹಮ್ಮದ್‌ ಅವರಿಗೆ ಇಂಥದ್ದೊಂದು ಅಪೂರ್ವ ಅವಕಾಶ ಲಭಿಸಿದೆ. ಬಾಲಕ ನಿಸಾರ್‌, ಜಮೈಕಾದ ಕಿಂಗ್‌ಸ್ಟನ್‌ನಲ್ಲಿರುವ ಉಸೇನ್‌ ಬೋಲ್ಟ್ ಅವರ “ರೇಸರ್‌ ಟ್ರ್ಯಾಕ್‌ ಕ್ಲಬ್‌’ನಲ್ಲಿ ತರಬೇತಿ ಪಡೆಯಲು ಆಯ್ಕೆಯಾಗಿದ್ದಾರೆ.

Advertisement

ಸದ್ಯ ಹೊಸದಿಲ್ಲಿಯ ಸಣ್ಣ ಮುರುಕಲು ಮನೆಯಲ್ಲಿ ವಾಸಿಸುತ್ತಿರುವ ನಿಸಾರ್‌, ಇನ್ನುಮುಂದೆ ಇತರ 14 ಮಂದಿಯೊಂದಿಗೆ ಜಮೈಕಾದಲ್ಲಿ ಉಸೇನ್‌ ಬೋಲ್ಟ್ ಅವರ ಕ್ಲಬ್‌ನಲ್ಲಿ ತರಬೇತಿ ಪಡೆಯಲಿದ್ದಾರೆ.

ಪ್ರೋತ್ಸಾಹದ ನಂಬಿಕೆ
ಉಸೇನ್‌ ಬೋಲ್ಟ್ ಅವರಿಂದ ತರಬೇತಿ ಪಡೆಯುವ ಅವಕಾಶ ಲಭಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಿಸಾರ್‌, “ತರಬೇತಿಗಾಗಿ ಜಮೈಕಾಕ್ಕೆ ತೆರಳಲು ನಾನು ತುಂಬಾ ಉತ್ಸುಕನಾಗಿದ್ದೇನೆ. ರಿಕ್ಷಾ ಎಳೆಯುತ್ತಿರುವ ನನ್ನ ತಂದೆ ಈವರೆಗೆ ಗಳಿಸಿದ್ದೆಲ್ಲವೂ ನನಗಾಗಿ ಖರ್ಚಾಗಲಿದೆ’ ಎಂದು ಹೇಳಿದ್ದಾರೆ.

“ಈ ಬಗ್ಗೆ ನೆರವು ನೀಡುವಂತೆ ಕ್ರೀಡಾಮಂತ್ರಿಗಳನ್ನು ವಿನಂತಿಸಬೇಕೆಂದಿದ್ದೇನೆ. ಕ್ರೀಡಾ ಸಚಿವರಿಂದ ಪ್ರೋತ್ಸಾಹ ಸಿಗುವ ಬಗ್ಗೆ ನನಗೆ ನಂಬಿಕೆಯೂ ಇದೆ. ನನಗೆ ಕಾಮನ್ವೆಲ್ತ್‌ ಗೇಮ್ಸ್‌ ಟ್ರಯಲ್ಸ್‌ಗಾಗಿ ತರಬೇತಿ ಪಡೆಯುವ ಆಸೆಯಿದೆ. ಟ್ರಯಲ್ಸ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳಬಲ್ಲೆನೆಂಬ ವಿಶ್ವಾಸವೂ ಇದೆ’ ಎಂದು ನಿಸಾರ್‌ ಹರ್ಷ ವ್ಯಕ್ತಿಪಡಿಸಿದರು.

ಕೋಚ್‌ ಸುರೇಂದರ್‌ ಸಂತಸ
ಬಾಲಕ ನಿಸಾರ್‌ ಆಯ್ಕೆಗೊಂಡಿರುವ ಬಗ್ಗೆ ಖುಷಿಗೊಂಡಿರುವ ಆತನ ಕೋಚ್‌ ಸುರೇಂದರ್‌ ಸಿಂಗ್‌ ಪ್ರತಿಕ್ರಿಯಿಸಿ, “ನಿಸಾರ್‌ ಒಬ್ಬ ಅದ್ಭುತ ಪ್ರತಿಭಾವಂತ. ಕ್ರೀಡಾ ತರಬೇತಿ ಆರಂಭಿಸಿದಾಗಿನಿಂದಲೂ ಅವರು ದಿನದಿಂದ ದಿನಕ್ಕೆ ಸುಧಾರಣೆಗೊಳ್ಳುತ್ತಿದ್ದುದೇ ಇದಕ್ಕೆ ಉತ್ತಮ ಉದಾಹರಣೆ’ ಎಂದಿದ್ದಾರೆ.

Advertisement

“ನಿಸಾರ್‌ ಅವರಿಗೆ ಕ್ರೀಡಾ ತರಬೇತಿಗಾಗಿ ಜಮೈಕಾಕ್ಕೆ ಹೋಗುವ ಅವಕಾಶ ಸಿಕ್ಕಿರುವುದು ನಿಜಕ್ಕೂ ದೊಡ್ಡ ಸಂಗತಿ. ಅವರು ಇದರ ಸದುಪಯೋಗ ಪಡೆಯಲಿದ್ದಾರೆ. ಬರಿಗಾಲಿನಲ್ಲಿ ಓಡುತ್ತಿದ್ದ ಪ್ರತಿಭಾವಂತ ಬಡ ಹುಡುಗನನ್ನು ನಾನು ಸ್ವಲ್ಪಮಟ್ಟಿಗೆ ತರಬೇತುಗೊಳಿದ್ದೇನೆೆ. ಅದರೆ ಅವರಿಗಿರುವ ಪ್ರತಿಭೆಗೆ ತಕ್ಕಂತೆ ಇನ್ನೂ ಒಳ್ಳೆಯ ತರಬೇತಿಯ ಅಗತ್ಯವಿದೆ’ ಎಂದು ಕೋಚ್‌ ಸುರೇಂದರ್‌ ಸಿಂಗ್‌ ಅಭಿಪ್ರಾಯಪಟ್ಟರು.

2013ರಿಂದ ವಿಜೇಂದರ್‌ ಸಿಂಗ್‌ ಅವರ “ಟೂಟ್‌ಲಗೇ’ ಕ್ಲಬ್‌ನಿಂದ ಕ್ರೀಡಾ ತರಬೇತಿ ಪಡೆಯುತ್ತಿದ್ದ ಬಾಲಕ ನಿಸಾರ್‌ ಅಹಮ್ಮದ್‌, ನವೆಂಬರ್‌ನಲ್ಲಷ್ಟೇ ಮುಕ್ತಾಯಗೊಂಡ 33ನೇ ಜೂನಿಯರ್‌ ನ್ಯಾಶನಲ್‌ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌ನ ಅಂಡರ್‌-16ರ ಬಾಲಕರ ವಿಭಾಗದ 100 ಮೀ. ಓಟವನ್ನು 10.85 ಸೆಕೆಂಡ್‌ಗಳಲ್ಲಿ ಪೂರೈಸಿ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next