Advertisement

ಅಮೆರಿಕ –ಇರಾನ್‌ ನಡುವಿನ ಸಂಘರ್ಷ: ತೈಲ ಸಂಕಷ್ಟ ಆರಂಭ

09:55 AM Jan 08, 2020 | Team Udayavani |

ಮುಂಬಯಿ/ಹೊಸದಿಲ್ಲಿ: ಅಮೆರಿಕ ಮತ್ತು ಇರಾನ್‌ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಭಾರತ ಸಹಿತ ಜಗತ್ತಿನ ಹಲವಾರು ಷೇರು, ತೈಲ ಮಾರುಕಟ್ಟೆಗಳು ತಲ್ಲಣ ಅನುಭವಿಸುತ್ತಿವೆ. ಭಾರತದಲ್ಲಿ ನಾಲ್ಕೈದು ದಿನಗಳಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಯಾಗುತ್ತಲೇ ಇದೆ. ಇದರ ನಡುವೆಯೇ ಸೋಮವಾರ ಷೇರುಪೇಟೆ ಭಾರೀ ಕುಸಿತ ಕಂಡಿದೆೆ. ಚಿನ್ನದ ಬೆಲೆಯೂ ಗಗನಮುಖೀಯಾಗುತ್ತಿದೆ.

Advertisement

ಈ ಎರಡು ರಾಷ್ಟ್ರಗಳ ನಡುವಿನ ಜಗಳದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 70 ಡಾಲರ್‌ಗೆ ತಲುಪಿದೆ. ಅದರ ಛಾಯೆ ದೇಶದ ತೈಲೋತ್ಪನ್ನ ಮಾರುಕಟ್ಟೆಯಲ್ಲಿಯೂ ಅನುರಣಿಸಿದೆ. ದಿಲ್ಲಿಯಲ್ಲಿ ಪೆಟ್ರೋಲ್‌ ಬೆಲೆ ಲೀ.ಗೆ 15 ಪೈಸೆ, ಡೀಸೆಲ್‌ ಬೆಲೆ ಲೀ.ಗೆ 17 ಪೈಸೆಯಷ್ಟು ಹೆಚ್ಚಾಗಿದೆ. ದಿಲ್ಲಿಯ ಪೆಟ್ರೋಲ್‌ ಬಂಕ್‌ ಗಳಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 75.69 ರೂ.ಗೆ ತಲುಪಿದೆ. 2018ರ ಬಳಿಕ ಇದು ಅತ್ಯಂತ ಗರಿಷ್ಠ ಮಟ್ಟ ವಾಗಿದೆ. ಡೀಸೆಲ್‌ ಬೆಲೆ 68.68 ರೂ.ಗೆ ಏರಿದೆ. ಇದು ಸತತ ಐದನೇ ದಿನ ಬೆಲೆ ಏರಿಕೆಯಾಗಿದೆ.

ಷೇರುಪೇಟೆ ಹೊಯ್ದಾಟ
ಭಾರತ ಸಹಿತ ವಿಶ್ವದ ಹಲವು ರಾಷ್ಟ್ರಗಳ ಷೇರು ಮಾರುಕಟ್ಟೆಯಲ್ಲಿ ಸೋಮವಾರ ಭಾರೀ ಹೊಯ್ದಾಟ ವಾಗಿದೆ. ಬಿಎಸ್‌ಸಿ ಸೆನ್ಸೆಕ್ಸ್‌ ಒಂದೇ ದಿನ 788 ಅಂಕ ಕುಸಿದು ಆರು ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಇದರಿಂದಾಗಿ ಒಟ್ಟಾರೆ ಮೂರು ಗಂಟೆಗಳ ಅವಧಿಯಲ್ಲಿ ಬಾಂಬೆ ಸ್ಟಾಕ್‌ಎಕ್ಸ್‌ಚೇಂಜ್‌ ಹೂಡಿಕೆದಾರರಿಗೆ ಮೂರು ಲಕ್ಷ ಕೋಟಿ ರೂ.ನಷ್ಟವಾಗಿದೆ.

13 ಪೈಸೆ ಕುಸಿತ
ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 13 ಪೈಸೆ ಕುಸಿದಿದೆ. ದಿನದ ಆರಂಭದಲ್ಲಿ ಡಾಲರ್‌ ಎದುರು 72.03 ರೂ.ಗಳಿದ್ದ ರೂಪಾಯಿ ಅಂತಿಮವಾಗಿ 71.93 ರೂ.ಗಳಲ್ಲಿ ಮುಕ್ತಾಯವಾಯಿತು.

Advertisement

10 ಗ್ರಾಂ ಚಿನ್ನಕ್ಕೆ 720 ರೂ. ಏರಿಕೆ
ದಿಲ್ಲಿ ಚಿನಿವಾರ ಪೇಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನಕ್ಕೆ 720 ರೂ. ಏರಿಕೆಯಾಗಿದೆ. ಹೀಗಾಗಿ ಚಿನ್ನದ ಬೆಲೆ 41,730 ರೂ.ಗೆ ಜಿಗಿದಿದೆ. ಕಳೆದ ಶುಕ್ರವಾರ (ಜ.3) ಪ್ರತಿ 10 ಗ್ರಾಂ ಚಿನ್ನಕ್ಕೆ 41,010 ರೂ. ಆಗಿತ್ತು. ಪ್ರತಿ ಕೆ.ಜಿ. ಬೆಳ್ಳಿ ಬೆಲೆ 1,105 ರೂ. ಏರಿಕೆಯಾಗಿದೆ. ಹೀಗಾಗಿ 48,325 ರೂ.ಗಳಿಂದ 49,430 ರೂ.ಗೆ ಜಿಗಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕೂಡ ಪ್ರತಿ ಔನ್ಸ್‌ ಚಿನ್ನ 1,575 ಅಮೆರಿಕನ್‌ ಡಾಲರ್‌ಗೆ ಜಿಗಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next