ಜೈಪುರ್/ದೆಹಲಿ: ರಾಜಸ್ಥಾನದ ಅಂಗಡಿ ಮಾಲೀಕರೊಬ್ಬರು 300 ರೂಪಾಯಿ ಬೆಲೆಯ ಆಭರಣವನ್ನು 6 ಕೋಟಿ ರೂಪಾಯಿಗೆ ಮಾರಾಟ ಮಾಡಿ ವಂಚಿಸಿರುವುದಾಗಿ ಅಮೆರಿಕದ ಮಹಿಳೆಯೊಬ್ಬರು ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:Renuka Swamy Case: ದರ್ಶನ್‌ಗೆ ಮರಣದಂಡನೆ- ಜೀವಾವಧಿ ಶಿಕ್ಷೆಯಾಗಲಿ; ನಟಿ ರಮ್ಯಾ ಟ್ವೀಟ್
ಅಮೆರಿಕದ ಪ್ರಜೆಯಾದ ಚೇರಿಷ್ ಎಂಬಾಕೆ ರಾಜಸ್ಥಾನದ ಜೈಪುರದ ಜೋಹ್ರಿ ಬಜಾರ್ ಶಾಪ್ ನಲ್ಲಿ ಆಭರಣ ಖರೀದಿಸಿದ್ದರು. ಈ ಆಭರಣವನ್ನು ಏಪ್ರಿಲ್ ತಿಂಗಳಲ್ಲಿ ಅಮೆರಿಕದಲ್ಲಿ ನಡೆದ ವಸ್ತುಪ್ರದರ್ಶನದಲ್ಲಿ ಪ್ರದರ್ಶನಕ್ಕೆ ಇಟ್ಟ ವೇಳೆ ಇದು ನಕಲಿ ಆಭರಣ ಎಂಬುದು ಪತ್ತೆಯಾಗಿತ್ತು.
300 ರೂಪಾಯಿ ಆಭರಣವನ್ನು 6 ಕೋಟಿ ರೂಪಾಯಿಗೆ ಮಾರಾಟ ಮಾಡುವ ಮೂಲಕ ಮೋಸ ಎಸಗಿದ್ದಾರೆಂದು ತಿಳಿದ ಚೇರಿಷ್ ರಾಜಸ್ಥಾನಕ್ಕೆ ಬಂದು ಅಂಗಡಿ ಮಾಲೀಕ ಗೌರವ್ ಸೋನಿ ಜತೆ ವಾಗ್ವಾದಕ್ಕೆ ಇಳಿದಿದ್ದರು ಎಂದು ವರದಿ ವಿವರಿಸಿದೆ.
ಆದರೆ ಅಂಗಡಿ ಮಾಲೀಕ ಆಕೆಯ ಆರೋಪವನ್ನು ಒಪ್ಪದೇ ಹೋದಾಗ, ಅಮೆರಿಕದ ಮಹಿಳೆ ಜೈಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಮೆರಿಕ ರಾಯಭಾರಿ ಕಚೇರಿಯ ನೆರವನ್ನು ಯಾಚಿಸಿದ್ದಾರೆ.
2022ರಲ್ಲಿ ಗೌರವ್ ಸೋನಿ ನನಗೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಈ ಆಭರಣಕ್ಕಾಗಿ ಆರು ಕೋಟಿ ರೂಪಾಯಿ ಪಾವತಿಸಿದ್ದೇನೆ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರವ್ ಹಾಗೂ ತಂದೆ ರಾಜೇಂದ್ರ ಸೋನಿ ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.