ನ್ಯೂಯಾರ್ಕ್ : ಅಮೆರಿಕದಲ್ಲಿ ಕೋವಿಡ್ 19 ತನ್ನ ಪಟ್ಟನ್ನು ಇನ್ನಷ್ಟು ಬಿಗಿಗೊಳಿಸುತ್ತಿರುವಂತೆಯೇ, ಅದೀಗ ಯುದ್ಧ ವಿಮಾನ ವಾಹಕ ನೌಕೆ ಯುಎಸ್‌ಎಸ್ ಥಿಯೋಡರ್ ರೂಸ್‌ವೆಲ್ಟ್ನೊಳಕ್ಕೂ ನುಗ್ಗಿದೆ. ಅದರಲ್ಲಿರುವ ನೌಕಾಪಡೆ ಯೋಧರು, ಸಿಬಂದಿ, ಪೈಲಟ್‌ಗಳು, ಅಧಿಕಾರಿಗಳನ್ನು ಕಾಡುತ್ತಿದ್ದು, ಇದರಿಂದ ಆಘಾತಕ್ಕೊಳಗಾಗಿರುವ ಹಡಗಿನ ಕ್ಯಾಪ್ಟನ್ ಕೂಡಲೇ ಕ್ರಮ ಕೈಗೊಳ್ಳುವಂತೆ ಅಮೆರಿಕ ನೌಕಾಪಡೆಗೆ ಮೊರೆ ಇಟ್ಟಿದ್ದಾರೆ.
ಕ್ಯಾಪ್ಟನ್ ಬ್ರೆಟ್ ಕ್ರೋಝಿಯರ್ ಅವರು ಈ ಕುರಿತಾಗಿ ಪತ್ರವೊಂದನ್ನು ಬರೆದಿದ್ದು ಅದು ಮಾಧ್ಯಮಗಳ ಕೈಗೆ ಸಿಕ್ಕಿದೆ. ಸುಮಾರು 4 ಸಾವಿರ ಸಿಬಂದಿಯನ್ನು ಕೂಡಲೇ ಸ್ಥಳಾಂತರಿಸುವಂತೆ ಅವರು ಹೇಳಿದ್ದಾರೆ. ಅಲ್ಲದೇ ಅವರನ್ನು ಕ್ವಾರಂಟೈನ್‌ನಲ್ಲಿ ಇಡಬೇಕು. ಅಲ್ಲಿವರೆಗೆ ಬೇರೆ ಸಿಬಂದಿ ನಿಯೋಜಿಸಲು ಕೇಳಿಕೊಂಡಿದ್ದಾರೆ ಎಂದು ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ.
ಇದರೊಂದಿಗೆ ಸುಮಾರು ಶೇ. 10ರಷ್ಟು ಸಿಬಂದಿ ಹಡಗಿನಲ್ಲೇ ಇರಬೇಕಿದ್ದು ಅವರು ಶುಚಿಗೊಳಿಸಬೇಕಿದೆ. ಜತೆಗೆ ವಿಮಾನ ವಾಹಕ ನೌಕೆಯಲ್ಲಿರುವ ಪರಮಾಣು ರಿಯಾಕ್ಟರ್ ಅನ್ನು ಚಾಲನೆ ಯಲ್ಲಿಡಬೇಕಾದರೆ ಸಿಬಂದಿ ಅಗತ್ಯವಿದೆ. ಸದ್ಯ ಶಾಂತಿಯ ಸಮಯವಾದ್ದರಿಂದ ಸಿಬಂದಿಯನ್ನು ಹೊರಗೆ ತೆಗೆದುಕೊಂಡು ಹೋಗಲು ಮತ್ತು ಬೇರೆಯ ಸಿಬಂದಿ ನಿಯೋಜಿಸಲು ಸಮಸ್ಯೆ ಇರದು ಎಂದು ಹೇಳಿದ್ದಾರೆ.
ಆದರೆ ಕ್ಯಾಪ್ಟನ್ ಪತ್ರಕ್ಕೆ ನೌಕಾಪಡೆ ಸ್ಪಂದಿಸುವಂತೆ ಕಾಣುತ್ತಿಲ್ಲ. ನೌಕಾಪಡೆಯ ಪ್ರಮುಖ ಹಡಗು ಇದಾಗಿದ್ದು, ಅಮೆರಿಕದ ಪರಮಾಣು ರಿಯಾಕ್ಟರ್‌ಗಳು ಗಡಿ ಮತ್ತು ಸಂಚಾರಗಳನ್ನು ಇದು ವೀಕ್ಷಿಸುತ್ತಿದೆ. ಪ್ರತಿ ಕ್ಷಣವೂ ಹೈ ಅಲರ್ಟ್ ಆಗಿ ಇರಬೇಕಾದ್ದರಿಂದ ಸಿಬಂದಿಯನ್ನು ಅಲ್ಲಿಂದ ವರ್ಗಾಯಿಸುವುದು ಸಾಧ್ಯವೇ ಇಲ್ಲ ಎಂದು ಫೆಸಿಫಿಕ್ ಸಾಗರ ನಿರ್ವಹಣೆ ನೋಡಿಕೊಳ್ಳುತ್ತಿರುವ ನೌಕಾಪಡೆ ಕಮಾಂಡರ್ ಅಡ್ಮಿರಲ್ ಜಾನ್ ಅಕ್ವಿಲಿನೋ ಹೇಳಿದ್ದಾರೆ.
ಸದ್ಯ ಹಡಗಿನಲ್ಲಿ ಪೂರ್ಣ ಪ್ರಮಾಣದ ಯುದ್ಧ ವಿಮಾನಗಳು, ವ್ಯಾಪಕ ಶಸ್ತ್ರಾಸ್ತ್ರಗಳು, ಭಾರೀ ಪ್ರಮಾಣದ ತೈಲ ಇವೆ. ನಿರ್ವಹಣೆಗೆ ಬೇರೆ ಸಿಬಂದಿ ನಿಯೋಜಿಸುವುದು ಕಷ್ಟ. ಆದ್ದರಿಂದ ನೌಕೆಯನ್ನು ಅಮಾನತಿನಲ್ಲಿಡಬೇಕಾದ ಸಂದರ್ಭದಲ್ಲಿ ಇವುಗಳೆಲ್ಲವನ್ನೂ ಖಾಲಿ ಮಾಡುವುದು ಕಷ್ಟದ ಕೆಲಸ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಸುಮಾರು 70 ಮಂದಿ ನೌಕಾಪಡೆ ಸೈನಿಕರಿಗೆ ಕೋವಿಡ್ 19 ತಗಲಿದ್ದು, ಇನ್ನಷ್ಟು ಮಂದಿಗೆ ತಗಲುವ ಭೀತಿ ಇದೆ. ಆದರೆ ಸದ್ಯ ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ಎಲ್ಲರೂ ನೌಕಾಪಡೆ ಹಡಗಿನಲ್ಲೇ ಇದ್ದಾರೆ. ಇದು ವೈರಸ್ ಹರಡುವ ಸಾಧ್ಯತೆಯನ್ನು ಇನ್ನಷ್ಟು ಹೆಚ್ಚಿಸಿದೆ.