ವಾಷಿಂಗ್ಟನ್: ಉತ್ತರ ಇರಾಕ್ ನ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಇರಾನ್ ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಗೆ ಸಂಬಂಧಿಸಿದ ಪೂರ್ವ ಸಿರಿಯಾದ ಎರಡು ಪ್ರದೇಶಗಳ ಮೇಲೆ ಶುಕ್ರವಾರ (ಅಕ್ಟೋಬರ್ 27) ಅಮೆರಿಕದ ಸೇನಾ ಪಡೆ ವೈಮಾನಿಕ ದಾಳಿ ನಡೆಸಿರುವುದಾಗಿ ಪೆಂಟಗಾನ್ ತಿಳಿಸಿದೆ.
ಇದನ್ನೂ ಓದಿ:Mangaluru: ಪೊಲೀಸ್ ಆಯುಕ್ತರ ಹೆಸರಲ್ಲಿ ವಾಟ್ಸಪ್ ಕರೆ ಮಾಡಿ ತುರ್ತು ಹಣಕ್ಕೆ ಬೇಡಿಕೆ !
ಕಳೆದವಾರ ಇರಾನ್ ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಅಮೆರಿಕದ ಸೇನಾ ನೆಲೆ ಹಾಗೂ ಸೈನಿಕರ ಮೇಲೆ ಡ್ರೋನ್ ಹಾಗೂ ಮಿಸೈಲ್ ದಾಳಿ ನಡೆಸಿತ್ತು.
ಒಂದೆಡೆ ಇಸ್ರೇಲ್, ಹಮಾಸ್ ನಡುವಿನ ಯುದ್ಧ ಮುಂದುವರಿದಿದ್ದು, ಮತ್ತೊಂದೆಡೆ ಇರಾನ್ ನ ರೆವಲ್ಯೂಷನರಿ ಗಾರ್ಡ್ ಹಮಾಸ್ ಗೆ ಬೆಂಬಲವಾಗಿ ಅಮೆರಿಕದ ಸೇನಾ ನೆಲೆಗಳ ಮೇಲೆ ಮಿಸೈಲ್ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರವಾಗಿ ಅಮೆರಿಕ ಮಿಲಿಟರಿ ಪಡೆ ವೈಮಾನಿಕ ದಾಳಿ ಆರಂಭಿಸಿರುವುದಾಗಿ ವರದಿ ವಿವರಿಸಿದೆ.
ಮುಂದಿನ ದಿನಗಳಲ್ಲಿ ಇರಾನ್ ನ ರೆವಲ್ಯೂಷನರಿ ಗಾರ್ಡ್ ತೀವ್ರವಾಗಿ ದಾಳಿ ನಡೆಸುವುದನ್ನು ತಡೆಗಟ್ಟಲು ಅಮೆರಿಕ ಸೇನಾ ಪಡೆ ಈ ವೈಮಾನಿಕ ದಾಳಿಗೆ ಮುಂದಾಗಿರುವುದಾಗಿ ಪೆಂಟಗಾನ್ ಬಿಡುಗಡೆಗೊಳಿಸಿರುವ ಪ್ರಕಟನೆಯಲ್ಲಿ ತಿಳಿಸಿದೆ.
ಪೆಂಟಗಾನ್ ಹೇಳಿಕೆಯ ಪ್ರಕಾರ, ಅಕ್ಟೋಬರ್ 17ರಿಂದ ಇರಾನ್ ನ ರೆವಲ್ಯೂಷನರಿ ಗಾರ್ಡ್ ಇರಾಕ್ ನಲ್ಲಿರುವ ಅಮೆರಿಕದ ಸೇನಾ ನೆಲೆ ಮತ್ತು ಸೈನಿಕರ ಮೇಲೆ 12 ಬಾರಿ ದಾಳಿ ನಡೆಸಿದ್ದು, ಸಿರಿಯಾದ ನಾಲ್ಕು ನೆಲೆಗಳ ಮೇಲೆ ಮಿಸೈಲ್ ದಾಳಿ ನಡೆಸಿರುವುದಾಗಿ ವಿವರಿಸಿದೆ.