ಆಕ್ಲಾಂಡ್: ಆನುವಂಶಿಕ ರೋಗಗಳ ತಲೆಮಾರಿಗೆ ಸಾಗಿಸುವ ಡಿಎನ್‌ಎಗಳಲ್ಲಿರುವ ವಂಶವಾಹಿಗಳನ್ನು ಜೀವಂತ ವ್ಯಕ್ತಿಯಲ್ಲಿ ತಿದ್ದುವ ಪ್ರಯತ್ನವನ್ನು ವಿಜ್ಞಾನಿಗಳು ನಡೆಸಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ 44 ವರ್ಷದ ಬ್ರಿಯಾನ್ ಮೆಡೊಕ್ಸ್ ಮೇಲೆ ಈ ಪ್ರಯೋಗವನ್ನು ಕೆಲವು ದಿನಗಳ ಹಿಂದೆ ವಿಜ್ಞಾನಿಗಳು ನಡೆಸಿದ್ದು, ಚಯಾಪಚಯ ಸಮಸ್ಯೆಯನ್ನು ನಿವಾರಿ ಸುವ ಪ್ರಯತ್ನ ನಡೆಸಿದ್ದಾರೆ.
ಮುಂದಿನ 3 ತಿಂಗಳಲ್ಲಿ ಇದರ ಫಲಿತಾಂಶ ಕಂಡು ಬರಲಿದ್ದು, ಯಶಸ್ವಿಯಾಗಿದೆಯೇ ಅಥವಾ ವಿಫಲವಾಗಿದೆಯೇ ಎಂಬುದು ತಿಳಿಯಲಿದೆ. ಕೆಲವು ತಿಂಗಳುಗಳ ನಂತರ ಸಮಸ್ಯೆಯ ಗುಣಲಕ್ಷಣಗಳು ಬದಲಾಗುವ ನಿರೀಕ್ಷೆಯಿದೆ.
ಒಂದು ವೇಳೆ ಇದು ಯಶಸ್ವಿಯಾದರೆ ವಂಶವಾಹಿ ಥೆರಪಿ ಎಂಬ ಹೊಸ ವಿಧಾನವೇ ವೈದ್ಯಲೋಕದಲ್ಲಿ ಹುಟ್ಟಿಕೊಳ್ಳಲಿದೆ. ಈಗಾಗಲೇ ಈ ರೀತಿಯ ಚಿಕಿತ್ಸೆಯನ್ನು ನಡೆಸ ಲಾಗಿದ್ದರೂ, ವ್ಯಕ್ತಿಯ ದೇಹದಲ್ಲೇ ಈ ಪ್ರಯೋಗ ನಡೆಸಿದ್ದು ಇದೇ ಮೊದಲು. ಈ ಹಿಂದೆ ವ್ಯಕ್ತಿಯ ವಂಶವಾಹಿಯ ತದ್ರೂಪಿ ಸೃಷ್ಟಿಸಿ, ಅದನ್ನು ಲ್ಯಾಬ್‌ನಲ್ಲಿ ತಿದ್ದುಪಡಿ ಮಾಡಿ ಸೇರಿಸಲಾಗುತ್ತಿತ್ತು. ಆದರೆ ಈ ಚಿಕಿತ್ಸೆಯು ಕೆಲವು ವಿಧದ ರೋಗಕ್ಕೆ ಮಾತ್ರ ಪರಿಣಾಮ ಬೀರಲಿದೆ.
ಹೇಗೆ ನಡೆಸಲಾಗುತ್ತದೆ ಚಿಕಿತ್ಸೆ?: ಡಿಎನ್‌ಎ ಚಿಕಿತ್ಸೆ ಅತ್ಯಂತ ವಿಶಿಷ್ಟವಾಗಿದೆ. ಡಿಎನ್‌ಎಯನ್ನು ಕತ್ತರಿಸಿ, ವಂಶವಾಹಿಯನ್ನು ತಿದ್ದುಪಡಿ ಮಾಡಲಾಗುತ್ತದೆ. ನಂತರ ಮೊದಲಿನಂತೆಯೇ ಹೊಲಿಗೆ ಹಾಕಲಾಗುತ್ತದೆ. ಇದು ಅತ್ಯಂತ ಸೂಕ್ಷ್ಮವಾದ ಚಿಕಿತ್ಸೆಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.