ವಾಷಿಂಗ್ಟನ್ : ಚೀನದ ಮಹತ್ವಾಕಾಂಕ್ಷೆಯ ಬೆಲ್ಟ್ ಆ್ಯಂಡ್ ರೋಡ್ ಯೋಜನೆಗೆ ಪ್ರತಿಯಾಗಿ ಅಮೆರಿಕ “ನ್ಯೂ ಸಿಲ್ಕ್ ರೋಡ್’ ಯೋಜನೆಗೆ ಮರು ಜೀವ ಕೊಟ್ಟಿದ್ದು ಭಾರತವು ಈ ಯೋಜನೆಯಲ್ಲಿ ಮಹತ್ತರ ಪಾತ್ರವಹಿಸಲಿದೆ.
ಅಮೆರಿಕವು ದಕ್ಷಿಣ ಏಶ್ಯ ಮತ್ತು ಈಶಾನ್ಯ ಏಶ್ಯದಲ್ಲಿ ಮಹತ್ವದ ಹಾಗೂ ಬೃಹತ್ ಗಾತ್ರದ ಎರಡು ಮೂಲ ಸೌಕರ್ಯ ಯೋಜನೆಗಳನ್ನು ಆಯೋಜಿಸಿದೆ. ದಕ್ಷಿಣ ಮತ್ತು ಈಶಾನ್ಯ ಏಶ್ಯವನ್ನು ಜೋಡಿಸುವ ಟ್ರಂಪ್ ಆಡಳಿತೆಯ ಮಹತ್ವಾಕಾಂಕ್ಷಿ ಇಂಡೋ ಪೆಸಿಫಿಕ್ ಕಾರಿಡಾರ್ ಯೋಜನೆಯಲ್ಲಿ ಭಾರತ ಮಹತ್ತರ ಪಾತ್ರವನ್ನು ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.
ನಿನ್ನೆ ಮಂಗಳವಾರ ಮಂಡಿಸಲ್ಪಟ್ಟಿರುವ ಟ್ರಂಪ್ ಆಡಳಿತೆ ಚೊಚ್ಚಲ ವಾರ್ಷಿಕ ಬಜೆಟ್‌ನಲ್ಲಿ ಈ ಎರಡು ಯೋಜನೆಗಳ ರೂಪರೇಖೆಯನ್ನು ಸಂಕ್ಷಿಪ್ತವಾಗಿ ಅನಾವರಣಗೊಳಿಸಲಾಗಿದೆ. ಈ ಪೈಕಿ ನ್ಯೂ ಸಿಲ್ಕ್ ರೋಡ್ ಯೋಜನೆಯು ಸಾರ್ವಜನಿಕ – ಖಾಸಗೀ ಭಾಗೀದಾರಿಕೆಯದ್ದಾಗಿದ್ದು ಭಾರತವು ಇದರಲ್ಲಿ ಮಹತ್ತರ ಪಾತ್ರವನ್ನು ವಹಿಸಲಿದೆ.
ಈ ಯೋಜನೆಯಲ್ಲಿ ಪ್ರಾದೇಶಿಕ ದೇಶಗಳು, ಇತರ ದ್ವಿಪಕ್ಷೀಯ ದಾನಿಗಳು, ಬಹಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು, ಖಾಸಗಿ ವಲಯದ ಸಂಸ್ಥೆಗಳು ಪಾಲ್ಗೊಳ್ಳಲಿವೆ.