Advertisement

T20 World Cup: ಇಂಡಿಯಾ ವರ್ಸಸ್‌ ಮಿನಿ ಇಂಡಿಯಾ; ಇಂದು ಭಾರತ-ಅಮೆರಿಕ ಸ್ಪರ್ಧೆ

10:35 PM Jun 11, 2024 | Team Udayavani |

ನ್ಯೂಯಾರ್ಕ್‌: ಇದು ಭಾರತದ ವಿರುದ್ಧ ಬಹುತೇಕ ಭಾರತೀಯರೇ ಸೆಣಸಲಿರುವ ಟಿ20 ವಿಶ್ವಕಪ್‌ ಮುಖಾಮುಖಿ. ಇಂಡಿಯಾ ವರ್ಸಸ್‌ ಮಿನಿ ಇಂಡಿಯಾ! ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಆಧಾರ್‌ ಕಾರ್ಡ್‌ ಹಾಗೂ ಗ್ರೀನ್‌ಕಾರ್ಡ್‌ ಹೊಂದಿರುವ ಕ್ರಿಕೆಟಿಗರ ನಡುವಿನ ಸಮರ. ಹೀಗಾಗಿ ಭಾರತ ಮತ್ತು ಆತಿಥೇಯ ಅಮೆರಿಕ ನಡುವಿನ ಬುಧವಾರದ “ಎ’ ವಿಭಾಗದ ಪಂದ್ಯವನ್ನು ಇಡೀ ಕ್ರಿಕೆಟ್‌ ಜಗತ್ತು ಕುತೂಹಲದಿಂದ ನೋಡುತ್ತಿದೆ.

Advertisement

ಈ ಪಂದ್ಯ ಇನ್ನೂ ಅನೇಕ ಕಾರಣಗಳಿಂದ ಕುತೂಹಲ ಮೂಡಿಸಿದೆ. ಎರಡೂ ತಂಡಗಳು ಎರಡೂ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಉಳಿದಿವೆ. ಎರಡೂ ತಂಡಗಳು ಪಾಕಿಸ್ಥಾನವನ್ನು ಕೆಡವಿದ ಅಮಿತೋತ್ಸಾದಲ್ಲಿವೆ. ಇದಕ್ಕೂ ಮಿಗಿಲಾಗಿ ಇದು ಭಾರತ-ಅಮೆರಿಕ ನಡುವಿನ ಮೊಟ್ಟಮೊದಲ ಅಂತಾರಾಷ್ಟ್ರೀಯ ಪಂದ್ಯ. ಇಲ್ಲಿ ಗೆದ್ದ ತಂಡ ಸೂಪರ್‌-8 ಸುತ್ತನ್ನು ಪ್ರವೇಶಿಸಲಿದೆ ಎಂಬುದು ಇನ್ನೂ ಒಂದು ಮಹತ್ವದ ಸಂಗತಿ.

ಆದರೆ ಈ ಪಂದ್ಯದ ತಾಣವಾಗಿರುವ “ನಸ್ಸಾವು ಕೌಂಟಿ ಟ್ರ್ಯಾಕ್‌’ ಬ್ಯಾಟರ್‌ಗಳಿಗೆ ಪ್ರತಿಕೂಲವಾಗಿದೆ. ಭಗೀರಥ ಪ್ರಯತ್ನಪಟ್ಟರೂ ರನ್‌ ಹರಿದು ಬರುತ್ತಿಲ್ಲ. ಪಾಕಿಸ್ಥಾನ ವಿರುದ್ಧ ಭಾರತ ತನ್ನ ಕೊನೆಯ 7 ವಿಕೆಟ್‌ಗಳನ್ನು 28 ರನ್ನಿಗೆ ಕಳೆದುಕೊಂಡಿತ್ತು. ಬಳಿಕ ಪಾಕ್‌ ಬ್ಯಾಟರ್‌ಗಳೂ ಪರದಾಡಿದರು. ಸೋಮವಾರ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಕೂಡ ರನ್‌ ಬರಗಾಲ ಅನುಭವಿಸಿದವು. ಬಹುಶಃ ಬುಧವಾರದ ಕತೆ ಇದಕ್ಕಿಂತ ಭಿನ್ನವೇನಲ್ಲ.

ಹೆಸರಿಗಷ್ಟೇ ಯುಎಸ್‌ಎ ಟೀಮ್‌

ಅಮೆರಿಕದ ವಿಷಯಕ್ಕೆ ಬರುವುದಾರೆ, ಅದು ಹೆಸರಿಗಷ್ಟೇ ಯುಎಸ್‌ಎ ಟೀಮ್‌. ಆಟಗಾರರೆಲ್ಲ ವಿದೇಶಿಯರೇ. ಇದರಲ್ಲಿ ಭಾರತದ್ದು ಸಿಂಹಪಾಲು. ಭಾರತದ 8 ಆಟಗಾರರು ಇಲ್ಲಿದ್ದಾರೆ. ಜತೆಗೆ ಪಾಕಿಸ್ಥಾನದ ಇಬ್ಬರು; ವೆಸ್ಟ್‌ ಇಂಡೀಸ್‌, ನ್ಯೂಜಿಲ್ಯಾಂಡ್‌, ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್‌ನ ತಲಾ ಒಬ್ಬರಿದ್ದಾರೆ. ಅಲ್ಲಿಗೆ 14 ಆಟಗಾರರಾದರು. ಬಹುಶಃ ಉಳಿದ ಕ್ರಿಕೆಟಿಗನೋರ್ವ ಅಮೆರಿಕದವನಿರಬೇಕು!

Advertisement

ಅಮೆರಿಕ ತಂಡದ ನಾಯಕ ಮೊನಾಂಕ್‌ ಪಟೇಲ್‌ ಭಾರತೀಯ ಮೂಲದ ಕ್ರಿಕೆಟಿಗ. ಹರ್ಮೀತ್‌, ನೇತ್ರಾವಲ್ಕರ್‌, ಜೆಸ್ಸಿ ಸಿಂಗ್‌, ನೋಸ್ತುಶ್‌ ಕೆಂಜಿಗೆ ಅವರೆಲ್ಲ ಈ ಕೂಟದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಇವರಲ್ಲಿ ಮುಂಬಯಿ ಪರ ಅಂಡರ್‌-15, ರಣಜಿ ಮತ್ತು ವಿಜಯ್‌ ಹಜಾರೆ ಟ್ರೋಫಿಯಲ್ಲಿ ಆಡಿರುವ ನೇತ್ರಾವಲ್ಕರ್‌, ಅಂದಿನ ಸಹ ಆಟಗಾರ ಸೂರ್ಯಕುಮಾರ್‌ ಯಾದವ್‌ಗೆ ಬೌಲಿಂಗ್‌ ನಡೆಸುವ ಸೀನ್‌ ಕಂಡುಬರಲಿದೆ. ಇದೊಂದು ಭಾವುಕ ಕ್ಷಣವಾಗಲಿದೆ ಎಂದಿದ್ದಾರೆ ನೇತ್ರಾವಲ್ಕರ್‌. ಎಡಗೈ ಸ್ಪಿನ್ನರ್‌ಗಳಾದ ಹರ್ಮೀತ್‌ ಮತ್ತು ಕೆಂಜಿಗೆ ಭಾರತೀಯರಿಗೆ ಸವಾಲಾಗುವ ಸಾಧ್ಯತೆ ಇದೆ. ಬಿಗ್‌ ಹಿಟ್ಟರ್‌ಗಳಾದ ಆರನ್‌ ಜೋನ್ಸ್‌, ಕೋರಿ ಆ್ಯಂಡರ್ಸನ್‌ ಅಪಾಯಕಾರಿಗಳಾಗಬಲ್ಲರು.

ತಂಡದಲ್ಲಿ ಬದಲಾವಣೆ?

ಭಾರತದ ಕೆಲವು ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫ‌ಲರಾಗಿದ್ದಾರೆ. ಇವರಲ್ಲಿ ಸೂರ್ಯಕುಮಾರ್‌, ದುಬೆ, ಜಡೇಜ ಪ್ರಮುಖರು. ಜೈಸ್ವಾಲ್‌, ಸ್ಯಾಮ್ಸನ್‌, ಕುಲದೀಪ್‌, ಚಹಲ್‌ ಕಾಯುವವರ ಯಾದಿಯಲ್ಲಿದ್ದಾರೆ. ತಂಡದಲ್ಲಿ ಒಂದೆರಡು ಬದಲಾವಣೆ ಸಂಭವಿಸುವ ಸಾಧ್ಯತೆ ಇದ್ದೇ ಇದೆ. ಕೊಹ್ಲಿ ಇನ್ನಿಂಗ್ಸ್‌ ಆರಂಭಿಸುವ ಅನಿವಾರ್ಯತೆಯೇನೂ ಕಾಣಿಸದು. ಅವರನ್ನು ಒನ್‌ಡೌನ್‌ನಲ್ಲಿ ಆಡಿಸಿ, ರೋಹಿತ್‌ಗೆ ಜೈಸ್ವಾಲ್‌ ಅವರನ್ನು ಜೋಡಿ ಮಾಡಬಹುದು.

ಸಂಭಾವ್ಯ ತಂಡಗಳು

ಭಾರತ: ರೋಹಿತ್‌ ಶರ್ಮ (ನಾಯಕ), ವಿರಾಟ್‌ ಕೊಹ್ಲಿ, ಯಶಸ್ವಿ ಜೈಸ್ವಾಲ್‌/ಸಂಜು ಸ್ಯಾಮ್ಸನ್‌, ರಿಷಭ್‌ ಪಂತ್‌, ಸೂರ್ಯಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ರವೀಂದ್ರ ಜಡೇಜ/ಕುಲದೀಪ್‌ ಯಾದವ್‌, ಅರ್ಷದೀಪ್‌ ಸಿಂಗ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌.

ಅಮೆರಿಕ: ಮೊನಾಂಕ್‌ ಪಟೇಲ್‌ (ನಾಯಕ), ಸ್ಟೀವನ್‌ ಟೇಲರ್‌, ಆಂಡ್ರೀಸ್‌ ಗೌಸ್‌, ಏರಾನ್‌ ಜೋನ್ಸ್‌, ಕೋರಿ ಆ್ಯಂಡರ್ಸನ್‌, ಹರ್ಮೀತ್‌ ಸಿಂಗ್‌, ನಿತೀಶ್‌ ಕುಮಾರ್‌, ನಾಸ್ತುಶ್‌ ಕೆಂಜಿಗೆ, ಅಲಿ ಖಾನ್‌, ಸೌರಭ್‌ ನೇತ್ರವಾಲ್ಕರ್‌, ಜಸ್‌ದೀಪ್‌ ಸಿಂಗ್‌.

Advertisement

Udayavani is now on Telegram. Click here to join our channel and stay updated with the latest news.

Next